ಇಸ್ರೇಲ್ ನಲ್ಲಿ ಇನ್ನು ಮುಂದೆ ಹೊರಾಂಗಣದಲ್ಲಿ ಮುಖಗವಸು ಧರಿಸುವುದು ಕಡ್ಡಾಯವಲ್ಲ
ಟೆಲ್ಅವಿವ್, ಏಪ್ರಿಲ್ 18 : ಕೊರೊನಾವೈರಸ್ ಸೋಂಕು ಪ್ರಕರಣಗಳ ಕುಸಿತದ ನಡುವೆ ಹೊರಾಂಗಣದಲ್ಲಿ ಮುಖಗವಸು ಧರಿಸುವುದು ಕಡ್ಡಾಯವಲ್ಲ ಎಂದು ಇಸ್ರೇಲ್ ಆರೋಗ್ಯ ಸಚಿವಾಲಯ ತಿಳಿಸಿದೆ. ‘ದೇಶಾದ್ಯಂತ ಕೋವಿಡ್ ಸೋಂಕಿನ ಪ್ರಕರಣಗಳು ತುಂಬಾ ಕಡಿಮೆ ಇರುವ ಹಿನ್ನೆಲೆಯಲ್ಲಿ ಆರೋಗ್ಯ ಸಚಿವಾಲಯದ ಮಹಾನಿರ್ದೇಶಕ ಪ್ರೊ. ಹೆಜಿ ಲೆವಿ ಅವರು ಸಾರ್ವಜನಿಕ ಆರೋಗ್ಯ ಆದೇಶವನ್ನು ತಿದ್ದುಪಡಿ ಮಾಡಿದ್ದಾರೆ. ಇದರಿಂದಾಗಿ ತೆರೆದ ಪ್ರದೇಶದಲ್ಲಿ ಮುಖವಾಡ ಧರಿಸುವುದು ಅಗತ್ಯವಿರುವುದಿಲ್ಲ.’ ಇದು ಭಾನುವಾರದಿಂದ ಜಾರಿಗೆ ಬರಲಿದೆ ಎಂದು ಸಚಿವಾಲಯ ಶನಿವಾರ ತಿಳಿಸಿದೆ. ಆದರೂ, ದೊಡ್ಡ ಹೊರಾಂಗಣದಲ್ಲಿ ನಡೆಯುವ ಸಭೆ-ಸಮಾರಂಭ ಮತ್ತು ಕೂಟಗಳಲ್ಲಿ ಮುಖಗವಸು ಧರಿಸಬೇಕೆಂದು ಸಚಿವಾಲಯ ಸಲಹೆ ನೀಡಿದೆ. ಒಳಾಂಗಣದಲ್ಲಿ ಮುಖಗವಸು ಧರಿಸುವುದು ಕಡ್ಡಾಯವಾಗಿದೆ ಎಂದು ಸಚಿವಾಲಯ ಪ್ರತಿಪಾದಿಸಿದೆ.
ಇಸ್ರೇಲ್‍ನಲ್ಲಿ ಕಳೆದ ಡಿಸೆಂಬರ್ ನಿಂದಲೇ ದೇಶದ ಜನರಿಗೆ ಕೋವಿಡ್ ಲಸಿಕೆ ನೀಡಿಕೆ ಆರಂಭವಾಗಿದೆ. ಇಡಿ ವಿಶ್ವದಲ್ಲೇ ಅತ್ಯಂತ ವೇಗವಾಗಿ ಲಸಿಕೆ ನೀಡಿಕೆ ಕಾರ್ಯಕ್ರಮವನ್ನು ಇಸ್ರೇಲ್ ಯಶಸ್ವಿಯಾಗಿಸಿದೆ. ಅಗತ್ಯ ಅನುಮತಿ ದೊರೆತರೆ ಮಾರ್ಚ್ ಅಂತ್ಯದಲ್ಲಿ 12ರಿಂದ 16 ವರ್ಷ ವಯಸ್ಸಿನವರಿಗೆ ಲಸಿಕೆ ನೀಡಲು ಇಸ್ರೇಲ್ ಯೋಜಿಸಿದೆ ಎಂದು ಇಸ್ರೇಲ್ ಆರೋಗ್ಯ ಸಚಿವಾಲಯದ ವಕ್ತಾರ ಅನಾತ್ ಡೇನಿಯಲಿ ಸ್ಪುಟ್ನಿಕ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.