ಅಂತರರಾಷ್ಟ್ರೀಯ

ಕರೋನ , ಸಾವು ತಡೆಗೆ ಲಸಿಕೆ ರಾಮಬಾಣ: ಫ್ಲಾರಿಡಾ ವಿವಿ

ಕರೋನ , ಸಾವು ತಡೆಗೆ ಲಸಿಕೆ ರಾಮಬಾಣ:   ಫ್ಲಾರಿಡಾ ವಿವಿ

ಲಂಡನ್, ಮೇ 23 :ಕೊರೊನಾ ಲಸಿಕೆ ತೆಗೆದುಕೊಳ್ಳುವ ಸಂಬಂಧ ಭಾರತದಲ್ಲಿ ಮಾತ್ರವಲ್ಲ, ಜಗತ್ತಿನ ಬೇರೆ ಬೇರೆ ರಾಷ್ಟ್ರಗಳಲ್ಲೂ ಜಿಜ್ಞಾಸೆ, ಅನುಮಾನ, ಆತಂಕ ಕಾಡುತ್ತಿದೆ. ಲಸಿಕೆ ತೆಗೆದುಕೊಂಡರೆ ಅಡ್ಡಪರಿಣಾಮಗಳಾಗಿ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತದೆ ಎಂಬ ತಪ್ಪು ಕಲ್ಪನೆ ಭಾರತದಲ್ಲೂ ಬೆಳೆಯುತ್ತಿದೆ. ಅದೇ ರೀತಿ ವಿದೇಶಗಳಲ್ಲೂ ಮೂಡಿದೆ. ಲಸಿಕೆ ಪಡೆಯುವ ಬಗ್ಗೆ ಜನಸಾಮಾನ್ಯರಲ್ಲಿ ಮಾತ್ರವಲ್ಲ, ವೈದ್ಯರಲ್ಲೂ ಹಲವು ಆತಂಕ ಮನೆ ಮಾಡಿರುವುದು ಗುಟ್ಟಿನ ಸಂಗತಿಯೇನಲ್ಲ. ಅಮೆರಿಕದ ಫ್ಲಾರಿಡಾ ವಿಶ್ವವಿದ್ಯಾಲಯದ ಸಂಶೋಧಕರು ಅಮೆರಿಕ ಮತ್ತು ಜಗತ್ತಿನ ಬೇರೆ ಬೇರೆ ಲಸಿಕೆಗಳನ್ನು ಮತ್ತು ಆ ಲಸಿಕೆಗಳು ಮಾನವನ ದೇಹದಲ್ಲಿ ಹೇಗೆ ಕೆಲಸ ಮಾಡುತ್ತದೆ. ಅದರಿಂದ ಏನೆಲ್ಲಾ ಅಪಾಯಗಳನ್ನು ನಿವಾರಣೆ ಮಾಡಬಹುದು ಎಂಬ ಬಗ್ಗೆ ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದೆ. 

ಈಗ ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಒಂದು ಅಂಶ ಸ್ಪಷ್ಟವಾಗಿದೆ. ಲಸಿಕೆ ಪಡೆದವರಲ್ಲಿ ಸಾವು ಸಂಭವಿಸುವ ಸಾಧ್ಯತೆ ತುಂಬಾ ತುಂಬಾ ಕಡಿಮೆ ಎಂಬುದು ಫ್ಲಾರಿಡಾ ವಿಶ್ವವಿದ್ಯಾಲಯದ ಸಂಶೋಧನೆಯಿಂದ ಖಚಿತವಾಗಿದೆ. ಕೇವಲ ಸಾವು ಮಾತ್ರವಲ್ಲ, ಕೊರೊನಾ ಸಂಬಂಧಿತ ಸೋಂಕುಗಳು ಶೇಕಡ 90 ರಷ್ಟು ನಿವಾರಣೆಯಾಗುತ್ತದೆ. ಇದರಿಂದ ರೋಗಿ ಆಸ್ಪತ್ರೆ ಸೇರುವುದು, ಆಮ್ಲಜನಕ ಪಡೆಯುವಂತಹ ಅಪಾಯದ ಮಟ್ಟಕ್ಕೆ ಹೋಗುವುದಿಲ್ಲ ಎಂಬುದು ಸಂಶೋಧನೆಯ ಪ್ರಮುಖ ಫಲಶ್ರುತಿ. ಅಮೆರಿಕದಲ್ಲಿ ಮತ್ತು ರಷ್ಯಾದಲ್ಲಿ ತಯಾರು ಮಾಡಿದ ಫೈಜರ್, ಮೆಡ್ರಿನಾ, ಜಾನ್ಸನ್ ಅಂಡ್ ಜಾನ್ಸನ್, ಸ್ಫುಟ್ನಿಕ್, ನೊವ್ಯಾಕ್ಸ್, ಸಿನೋ ಫಾರಂ, ಅಸ್ಟ್ರಾಜೆನಿಕಾ ಸೇರಿದಂತೆ ಬೇರೆ ಬೇರೆ ಲಸಿಕೆಗಳ ಉಪಯೋಗದ ಬಗ್ಗೆ ಮತ್ತು ಅದು ಮಾನವ ಶರೀರದಲ್ಲಿ ಹೇಗೆ ಪ್ರತಿಕಾಯಗಳನ್ನು ಉತ್ಪತ್ತಿ ಮಾಡಿ ಸೋಂಕನ್ನು ನಿವಾರಣೆ ಮಾಡುತ್ತದೆ ಎಂಬುದರ ಬಗ್ಗೆ ಆಳವಾದ ಸಂಶೋಧನೆ ಮಾಡಿ ಪ್ರಬಂಧ ಪ್ರಕಟಿಸಿದೆ. ಒಟ್ಟಾರೆ ಲಸಿಕೆ ಪಡೆದವರಲ್ಲಿ ಸಾವಿನ ಸಂಖ್ಯೆ ತುಂಬಾ ತುಂಬಾ ಕಡಿಮೆ. ಇದರ ಜೊತೆಗೆ ಭವಿಷ್ಯದಲ್ಲಿ ಬೇರೆ ಬೇರೆ ಸೋಂಕುಗಳು ದೇಹವನ್ನು ಆವರಿಸಿಕೊಳ್ಳುವುದನ್ನು ಲಸಿಕೆಗಳು ಪರಿಣಾಮಕಾರಿಯಾಗಿ ತಡೆಗಟ್ಟಲಿದೆ ಎಂಬುದು ಈ ಸಂಶೋಧನೆಗಳಿಂದ ವ್ಯಕ್ತವಾಗಿದೆ. ಈ ವಿಶ್ವವಿದ್ಯಾಲಯ ಭಾರತ ಸೇರಿದಂತೆ ಲಂಡನ್, ಆಫ್ರಿಕಾ, ಸಿಂಗಾಪುರ ಮುಂತಾದ ದೇಶಗಳ ರೂಪಾಂತರಿ ವೈರಾಣುಗಳ ಬಗ್ಗೆಯೂ ಅಧ್ಯಯನ ಮಾಡಿ ಅಂತಿಮವಾಗಿ ಈ ತೀರ್ಮಾನಕ್ಕೆ ಬಂದಿದೆ.


ಸುದ್ದಿ ಓದಿ