ಬಿಲ್‌ಗೇಟ್ಸ್ ಆಸ್ತಿಯಲ್ಲಿ ಮಕ್ಕಳಿಗೆ ಹೆಚ್ಚಿನ ಪಾಲು ಕೊಡಿಸಲು ಮೆಲಿಂದಾ ಯತ್ನ
ವಾಷಿಂಗ್ಟನ್, ಮೇ 31: ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್, ಪತ್ನಿ ಮೆಲಿಂದಾ ಪರಸ್ಪರ ವಿಚ್ಚೇದನ ಪಡೆದುಕೊಂಡಿರುವುದು ಜಗತ್ತಿಗೆ ಗೊತ್ತಿದೆ.ವಿಚ್ಚೇದನದ ಹಿಂದಿನ ಕಾರಣಗಳ ಬಗ್ಗೆ ಅವರು ಸುದೀರ್ಘ ವಿವರಣೆ ನೀಡಲಿಲ್ಲ. ಆದರೆ, 27 ವರ್ಷಗಳ ತಮ್ಮ ವೈವಾಹಿಕ ಜೀವನ ಅಂತ್ಯಗೊಂಡಿದೆ ಎಂದು ಘೋಷಿಸಿದ್ದರು. ವಿಚ್ಛೇದನದ ನಂತರ ತಾವು ಸಂಪಾದಿಸಿದ ಆಸ್ತಿಯ ಹೆಚ್ಚಿನ ಭಾಗ ತಮ್ಮ ಪ್ರತಿಷ್ಠಾನಕ್ಕೆ ಸೇರಲಿದ್ದು, ಮಕ್ಕಳಿಗೆ ಕೇವಲ 10 ದಶಲಕ್ಷ ಡಾಲರ್ ನೀಡುವುದಾಗಿ ಬಿಲ್ ಗೇಟ್ಸ್ ಬಹಿರಂಗವಾಗಿ ಪ್ರಕಟಿಸಿದ್ದರು.ಆದರೆ, ಗೇಟ್ಸ್ ಅವರ ಈ ನಿರ್ಧಾರವನ್ನು ಮೆಲಿಂದಾ ತೀವ್ರವಾಗಿ ವಿರೋಧಿಸುತ್ತಿದ್ದಾರೆ ಎಂದು ವರದಿಯಾಗಿದೆ. ತನ್ನ ಮಕ್ಕಳಿಗೆ ಆನುವಂಶಿಕವಾಗಿ ಹೆಚ್ಚಿನ ಆಸ್ತಿ ಕೊಡಿಸಬೇಕು ಎಂದು ಬಯಸಿದ್ದಾರೆ. ಈ ಪ್ರಕ್ರಿಯೆಯಲ್ಲಿ, ಆಕೆ ತಮ್ಮಿಬ್ಬರ 130 ಬಿಲಿಯನ್ ಆಸ್ತಿಯನ್ನು ವಿಭಜಿಸಲು ತಯಾರಿ ನಡೆಸುತ್ತಿದ್ದಾರೆ. ಈ ಉದ್ದೇಶಕ್ಕಾಗಿ ಮೆಲಿಂದಾ ವಕೀಲರ ತಂಡವನ್ನು ನೇಮಿಸಿಕೊಂಡಿದ್ದಾರೆ.. ಈ ತಂಡ ಟಾಪ್‌ಟ್ರಸ್ಟ್ ಹಾಗೂ ಎಸ್ಟೇಟ್ ವಕೀಲರನ್ನು ಒಳಗೊಂಡಿದೆ ಎಂದು ಡೈಲಿ ಮೇಲ್ ಪತ್ರಿಕೆ ಉಲ್ಲೇಖಿಸಿದೆ. ಮೆಲಿಂದಾ ಅವರ ತಾಜಾ ನಿರ್ಣಯದಿಂದ ಪುತ್ರಿಯರಾದ ಜೆನ್ನಿಫರ್ ಕ್ಯಾಥರೀನ್ (25), ಫೋಬೆ ಅಡೆಲೆ (18) ಹಾಗೂ ಪುತ್ರ ರೋನಿ ಜಾನ್ (21) ಹೆಚ್ಚಿನ ಆಸ್ತಿ ಪಡೆಯಲು ಸಹಾಯವಾಗಲಿದೆ ಎಂದು ಮೆಲಿಂದಾ ಆಶಿಸಿದ್ದಾರೆ.