ಟ್ರಂಪ್ ಬೆಂಬಲಿಗರ ಪುಂಡಾಟ, ವಾಷಿಂಗ್ಟನ್ ನಲ್ಲಿ ತುರ್ತು ಪರಿಸ್ಥಿತಿ ಜಾರಿ
ವಾಷಿಂಗ್ಟನ್, ಜನವರಿ 7 :ಅಮೆರಿಕದಲ್ಲಿ ಅಧಿಕಾರ ಹಸ್ತಾಂತರ ಪ್ರಕ್ರಿಯೆ ಅಂತಿಮ ಹಂತ ತಲುಪಿರುವಾಗಲೇ ಹೊರ ಹೋಗಲಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೆಂಬಲಿಗರ ಹಿಂಸಾಚಾರ, ಪುಂಡಾಟ ಹೆಚ್ಚಾಗಿ ವಾಷಿಂಗ್ಟನ್ ಡಿಸಿಯಲ್ಲಿ ತುರ್ತು ಪರಿಸ್ಥಿತಿ ಜಾರಿಗೊಳಿಸಲಾಗಿದೆ. ಸಾರ್ವಜನಿಕ ತುರ್ತು ಪರಿಸ್ಥಿತಿ ಘೋಷಿಸಲಾಗಿದ್ದು ಅದು ಇದೇ 21 ವರೆಗೆ ವಿಸ್ತರಿಸಿರುವುದಾಗಿ ಮೇಯರ್ ಮೇಯರ್ ಮುರಿಯಲ್ ಬೌಸರ್ ಹೇಳಿದ್ದಾರೆ. ಕ್ಯಾಪಿಟಲ್ ಹಿಲ್ಸ್ ಮೇಲೆ ಹಿಂಸಾತ್ಮಕ ದಾಳಿ ಮುಂದುವರೆದಿದ್ದರಿಂದ ಈ ಕ್ರಮ ಅನಿವಾರ್ಯವಾಗಿದೆ. ಈ ದುರ್ಘಟನೆಯಲ್ಲಿ ನಾಲ್ಕು ಮಂದಿ ಮೃತಪಟ್ಟಿದ್ದು, ಮೊದಲಿಗೆ ಮೃತಪಟ್ಟ ಮಹಿಳೆಯನ್ನು ವಾಯುಸೇನೆಯ ಹಿರಿಯ ಅಧಿಕಾರಿ ಅಶ್ಲಿ ಬಾಬಿಟ್ ಎಂದು ಗುರುತಿಸಲಾಗಿದೆ. ಕ್ಯಾಪಿಟಲ್ ಹಿಲ್ಸ್ ಸಂಘರ್ಷ ಘಟನೆಗೆ ಸಂಬಂಧಿಸಿದಂತೆ ಸುಮಾರು 52ಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿದೆ ಎಂದು ಮೆಟ್ರೋಪಾಲಿಟನ್ ಪೊಲೀಸ್ ಇಲಾಖೆ ಮುಖ್ಯಸ್ಥ ರಾಬರ್ಟ ಜೆ ಕಾಂಟಿ ಹೇಳಿದ್ದಾರೆ.ಟ್ರಂಪ್ ಅವರ ಟ್ವಿಟ್ಟರ್ ಖಾತೆಯನ್ನು12 ಗಂಟೆಗಳ ಕಾಲ ಹಾಗೂ ಫೇಸ್ಬುಕ್ 24ಗಂಟೆಗಳ ಕಾಲ ಕಾರ್ಯ ನಿರ್ವಹಿಸದಂತೆ ಸ್ಥಗಿತಗೊಳಿಸಲಾಗಿದೆ ಎಂದು ಫೇಸ್ಬುಕ್ ಪ್ರಕಟಣೆ ಹೊರಡಿಸಿದೆ. ಇದರ ಬೆನ್ನಲ್ಲೇ ಇನ್ಸ್ಟಾಗ್ರಮ್ ಖಾತೆ ಕೂಡಾ 24 ಗಂಟೆಗಳ ಕಾಲ ಲಾಕ್ ಆಗಿರಲಿದೆ ಎಂದು ಮುಖ್ಯಸ್ಥರಾದ ಆಡಂ ಮೊಸ್ಸೆರಿ ಹೇಳಿದ್ದಾರೆ. ಆದರೆ, ಪ್ರತಿಭಟನೆ ಕೈಬಿಟ್ಟು ಶಾಂತಿ ಕಾಪಾಡುವಂತೆ ಟ್ರಂಪ್ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.