ಪಾಕಿಸ್ತಾನದಲ್ಲಿ ಎರಡು ಪ್ರಯಾಣಿಕ ರೈಲುಗಳ ನಡುವೆ ಡಿಕ್ಕಿ: 30 ಮಂದಿ ಸಾವು, ಅನೇಕರಿಗೆ ಗಾಯ
ಇಸ್ಲಾಮಾಬಾದ್, ಜೂನ್ 7: ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಘೋಟ್ಕಿ ಜಿಲ್ಲೆಯಲ್ಲಿ ಸೋಮವಾರ ಬೆಳಿಗ್ಗೆ ಎರಡು ರೈಲುಗಳ ನಡುವೆ ಡಿಕ್ಕಿ ಸಂಭವಿಸಿ ಕನಿಷ್ಠ 30 ಮಂದಿ ಗಾಯಗೊಂಡಿದ್ದು, ಅನೇಕ ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.
ಕರಾಚಿಯಿಂದ ಸರ್ಗೋಧಕ್ಕೆ ತೆರಳುತ್ತಿದ್ದ ಮಿಲ್ಲತ್ ಎಕ್ಸ್ ಪ್ರೆಸ್ ಹಳಿತಪ್ಪಿದ್ದು, ಇದೇ ವೇಳೆ ಲಾಹೋರ್ ನಿಂದ ಕರಾಚಿಗೆ ಹೊರಟಿದ್ದ ಸರ್ ಸಯ್ಯದ್ ಎಕ್ಸ್ ಪ್ರೆಸ್ ಅದಕ್ಕೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಮಿಲ್ಲತ್ ಎಕ್ಸ್ ಪ್ರೆಸ್ ನ ಎಂಟು ಬೋಗಿಗಳು ಹಳಿತಪ್ಪಿವೆ.
ಅಪಘಾತದಲ್ಲಿ ಕನಿಷ್ಠ 30 ಮಂದಿ ಸಾವನ್ನಪ್ಪಿದ್ದು, ಇತರ ಹಲವರು ಗಾಯಗೊಂಡಿದ್ದಾರೆ. ಅನೇಕರು ರೈಲು ಬೋಗಿಗಳ ನಡುವೆ ಇನ್ನೂ ಸಿಲುಕಿಕೊಂಡಿದ್ದಾರೆ ಎಂದು ಘೋಟ್ಕಿ ಜಿಲ್ಲಾಧಿಕಾರಿ ಉಸ್ಮಾನ್ ಅಬ್ದುಲ್ಲಾ ತಿಳಿಸಿದ್ದಾರೆ. ಪೊಲೀಸ್ ಮತ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳಲ್ಲಿ ತೊಡಗಿವೆ. ಮಿಲ್ಲತ್ ಎಕ್ಸ್ ಪ್ರೆಸ್ ಹಳಿತಪ್ಪುವುದಕ್ಕೆ ಕಾರಣವೇನೆಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ.