ಬುರ್ಕಿನಾ ಫಾಸೊದಲ್ಲಿ 20 ಭಯೋತ್ಪಾದಕರು ಹತ: 4 ನೆಲೆಗಳ ನಾಶ
ಒವಾಗಡೌಗೌ ಮೇ 11 (ಕ್ಸಿನ್ಹುವಾ) : ಈ ತಿಂಗಳ 5 ರಿಂದ ಆಫ್ರಿಕಾದ ಬುರ್ಕಿನಾ ಫಾಸೊದಲ್ಲಿ ನಡೆಯುತ್ತಿರುವ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಲ್ಲಿ ಸುಮಾರು 20 ಭಯೋತ್ಪಾದಕರು ಸಾವನ್ನಪ್ಪಿದ್ದು, ನಾಲ್ಕು ಭಯೋತ್ಪಾದಕ ನೆಲೆಗಳನ್ನು ನಾಶಪಡಿಸಲಾಗಿದೆ ಎಂದು ಅಧಿಕೃತ ಸುದ್ದಿ ಸಂಸ್ಥೆ ಎಐಬಿ ಸೋಮವಾರ ವರದಿ ಮಾಡಿದೆ.
ಭಯೋತ್ಪಾದಕರ ಉಪಟಳ ಹೆಚ್ಚಿರುವ ದೇಶದ ಉತ್ತರ ಮತ್ತು ಸಹೇಲ್ ಪ್ರದೇಶಗಳಲ್ಲಿ ಭದ್ರತಾ ಪಡೆಗಳು ವಿಶೇಷ ಕಾರ್ಯಾಚರಣೆಯನ್ನು ಆರಂಭಿಸಿದ್ದವು ಎಂದು ಬುರ್ಕಿನಾ ಫಾಸೊ ಸೇನೆ ತಿಳಿಸಿದೆ. ಕಾರ್ಯಾಚರಣೆಯಲ್ಲಿ ಸುಮಾರು 20 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದ್ದು, ಉಗ್ರರ ನಾಲ್ಕು ನೆಲೆಗಳನ್ನು ನಾಶಪಡಿಸಲಾಗಿದೆ. ಈ ಸ್ಥಳಗಳಲ್ಲಿ ಶಸ್ತ್ರಾಸ್ತ್ರ ಮತ್ತು ವಿವಿಧ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿ ತಿಳಿಸಿದೆ
ಈ ಪ್ರದೇಶಗಳಲ್ಲಿ ಸಕ್ರಿಯವಾಗಿರುವ "ಸಶಸ್ತ್ರ ಭಯೋತ್ಪಾದಕ ತಂಡ" ಗಳನ್ನು ನಿರ್ಣಾಮಗೊಳಿಸುವ ಗುರಿಯನ್ನು ಕಾರ್ಯಾಚರಣೆ ಹೊಂದಿದೆ. ಜನರಲ್ಲಿ ಧೈರ್ಯ ತುಂಬಲು ಮತ್ತು ಸರ್ಕಾರದ ಮೇಲೆ ವಿಶ್ವಾಸ ತುಂಬಲು ಭಯೋತ್ಪಾದಕರ ವಿರುದ್ಧ ಹೋರಾಟವನ್ನು ತೀವ್ರ ಗೊಳಿಸಲಾಗಿದೆ ಎಂದು ಸೇನೆ ತಿಳಿಸಿದೆ.
2015 ರಿಂದ, ಆಫ್ರಿಕಾದ ಮಧ್ಯ ಭಾಗದ ದೇಶವಾದ ಬುರ್ಕಿನಾ ಫಾಸೊ, ಭಯೋತ್ಪಾದಕ ದಾಳಿಗಳಿಂದ ತೀವ್ರ ಭದ್ರತಾ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಅಂದಿನಿಂದ ಈವರೆಗೆ 1,000 ಕ್ಕೂ ಹೆಚ್ಚು ಜನರು ದಾಳಿಗಳಿಗೆ ಬಲಿಯಾಗಿದ್ದು, 10 ಲಕ್ಷಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ.