ಟರ್ಕಿಯಲ್ಲಿ ಬಸ್ ಅಪಘಾತ: 14 ಮಂದಿ ಸಾವು
ಅಂಕಾರ, ಆಗಸ್ಟ್ 8: ಟರ್ಕಿಯ ವಾಯವ್ಯ ಪ್ರಾಂತ್ಯವಾದ ಬಲಿಕೆಸಿರ್ ನಲ್ಲಿ ಬಸ್ ವೊಂದು ಅಪಘಾತಕ್ಕೀಡಾಗಿ ಕನಿಷ್ಠ 14 ಮಂದಿ ಸಾವನ್ನಪ್ಪಿದ್ದು, ಇತರ 18 ಮಂದಿ ಗಾಯಗೊಂಡಿದ್ದಾರೆ ಎಂದು ಪ್ರಾಂತೀಯ ಸರ್ಕಾರ ಭಾನುವಾರ ತಿಳಿಸಿದೆ.
ಸ್ಥಳೀಯ ಕಾಲಮಾನ ಮುಂಜಾನೆ 1.40ಕ್ಕೆ ಬಲಿಕೆಸಿರ್ ರಾಜಧಾನಿ ಸಮೀಪ ಬಸ್ ಉರುಳಿಬಿದ್ದು ಈ ಅಪಘಾತ ಸಂಭವಿಸಿದೆ.
11 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಮೂವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಇತರ 18 ಮಂದಿ ಗಾಯಗೊಂಡಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪ್ರಕಟಣೆಯಲ್ಲಿ ಸರ್ಕಾರ ತಿಳಿಸಿದೆ.
ಕಳೆದೆರಡು ದಿನಗಳಲ್ಲಿ ಟರ್ಕಿಯಲ್ಲಿ ನಡೆದ ಎರಡನೇ ಭೀಕರ ರಸ್ತೆ ಅಪಘಾತ ಇದಾಗಿದೆ. ಶನಿವಾರ ಮನಿಸಾ ಪ್ರಾಂತ್ಯದಲ್ಲಿ ಬಸ್ ವೊಂದು ಅಪಘಾತಕ್ಕೀಡಾಗಿ 9 ಮಂದಿ ಸಾವನ್ನಪ್ಪಿದ್ದು, ಇತರ 30 ಮಂದಿ ಗಾಯಗೊಂಡಿದ್ದರು.