‘ಉನ್ನತ ವ್ಯಕ್ತಿತ್ವ ನಿರ್ಮಾಣವೇ ಶಿಕ್ಷಣದ ಗುರಿ’

‘ಉನ್ನತ ವ್ಯಕ್ತಿತ್ವ ನಿರ್ಮಾಣವೇ ಶಿಕ್ಷಣದ ಗುರಿ’ 'The goal of education is to build a superior personality'

ಲೋಕದರ್ಶನ ವರದಿ 

ಧಾರವಾಡ 31 : ಕೇವಲ ಉದ್ಯೋಗ ಸಂಪಾದನೆಯನ್ನಷ್ಟೇ ವಿದ್ಯಾರ್ಜನೆಯ ಉದ್ದೇಶವಲ್ಲ. ಮಾನವನು ತನ್ನ ಬದುಕನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಲು ಅಗತ್ಯವಾಗಿರುವ ಜೀವನ ಮೌಲ್ಯಗಳೊಂದಿಗೆ ಉನ್ನತ ವ್ಯಕ್ತಿತ್ವ ನಿರ್ಮಾಣವೇ ಶಿಕ್ಷಣದ ಗುರಿಯಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಕಿತ್ತೂರು ಕರ್ನಾಟಕ ಶೈಕ್ಷಣಿಕ ವಲಯದ ಹೆಚ್ಚುವರಿ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಪ್ರತಿಪಾದಿಸಿದರು. 

ಅವರು ಶನಿವಾರ ಧಾರವಾಡ ಡಿಡಿಪಿಐ ಕಚೇರಿಯ ಶಿಕ್ಷಣಾಧಿಕಾರಿ ಪ್ರಭಯ್ಯ ಕೆ. ಚಿಕ್ಕಮಠ, ತಮ್ಮ ಕಚೇರಿಯ ವೃತ್ತಿಶಿಕ್ಷಣ ವಿಭಾಗದ ವಿಷಯ ಪರೀವೀಕ್ಷಕ ಬಿ.ವೈ.ಭಜಂತ್ರಿ ಹಾಗೂ ಪ್ರಥಮ ದರ್ಜೆ ಸಹಾಯಕ ಶಶಿಧರ ಕಟ್ಟಿಮನಿ ಅವರ ಸೇವಾ ನಿವೃತ್ತಿಯ ಸಂದರ್ಭದಲ್ಲಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡುತ್ತಿದ್ದರು. ಶಾಲಾ ಶಿಕ್ಷಣ ಇಲಾಖೆಯ ಎಲ್ಲ ಭಾಗೀದಾರರು ರಾಷ್ಟ್ರವನ್ನು ಸಮರ್ಥವಾಗಿ ಮುನ್ನಡೆಸಲು ಅಗತ್ಯವಾದ ಉತ್ಕೃಷ್ಟ ಮಾನವಸಂಪನ್ಮೂಲ ನಿರ್ಮಾಣಕ್ಕೆ ತೆರೆದುಕೊಳ್ಳಬೇಕು. ನಿವೃತ್ತಿ ಹೊಂದಿದ ಎಲ್ಲರ ಜೀವನವು ಆರೋಗ್ಯ, ಸಂತೋಷ, ನೆಮ್ಮದಿಯಿಂದ ಕೂಡಿರಲಿ ಎಂದು ಡಾ. ಉಳ್ಳಾಗಡ್ಡಿ ಶುಭ ಹಾರೈಸಿದರು.   

ಇಲಾಖೆಯ ನಿರ್ದೇಶಕ ಈಶ್ವರ ನಾಯಕ, ಉಪನಿರ್ದೇಶಕ ಗೀರೀಶ ಪದಕಿ, ಡಯಟ್ ಪ್ರಾಚಾರ್ಯ ಬಸವರಾಜ ನಾಲತವಾಡ, ಸಹಾಯಕ ನಿರ್ದೇಶಕ ಪ್ರಕಾಶ ಹೊಸಮನಿ, ಪ್ರಭುಕುಮಾರ ಅಗಡಿ, ವೀರೇಶ ಕಲಬುರ್ಗಿ ಸೇರಿದಂತೆ ಇತರರು ಇದ್ದರು.  ಡಯಟ್ ಸಭಾಭವನದಲ್ಲಿ : ಡಯಟ್ ಸಭಾಭವನದಲ್ಲಿ ನಡೆದ ಪ್ರತ್ಯೇಕ ಸಮಾರಂಭದಲ್ಲಿ ಶಿಕ್ಷಣಾಧಿಕಾರಿ ಪ್ರಭಯ್ಯ ಚಿಕ್ಕಮಠ ಅವರನ್ನು ಶಾಲಾ ಶಿಕ್ಷಣ ಇಲಾಖೆ, ವಿವಿಧ ಶಿಕ್ಷಕ ಸಂಘಟನೆಗಳು ಹಾಗೂ ಶಿಕ್ಷಣ ಸಂಸ್ಥೆಗಳ ವತಿಯಿಂದ ಗೌರವಿಸಿ ಬೀಳ್ಕೊಡಲಾಯಿತು.

ಅಭಿವೃದ್ಧಿ ಉಪನಿರ್ದೇಶಕ ಬಸವರಾಜ ನಾಲತವಾಡ, ಪ್ರಭಾರಿ ಡಿಡಿಪಿಐ ಉಮೇಶ ಬೊಮ್ಮಕ್ಕನವರ, ಇಲಾಖೆಯ ಅಧಿಕಾರಿಗಳಾದ ಎಸ್‌. ಎಂ. ಹುಡೇದಮನಿ, ಡಾ. ರೇಣುಕಾ ಅಮಲಝರಿ, ನಫೀಜಾ ದಾವಲಸಾಬನವರ, ನಿವೃತ್ತ ಉಪನಿರ್ದೇಶಕರುಗಳಾದ ಎಸ್‌.ಎಸ್‌. ಕೆಳದಿಮಠ, ಡಾ. ಗುರುನಾಥ ಹೂಗಾರ, ವಿರೂಪಾಕ್ಷಯ್ಯ ಚಿಕ್ಕಮಠ, ಕಾರ್ತಿಕ ಚಿಕ್ಕಮಠ, ಅನೂಷಾ ಚಿಕ್ಕಮಠ, ಜಯಶ್ರೀ ಕಲ್ಮಠ ಮಾತನಾಡಿದರು.  

ಬೀಳ್ಕೊಡುಗೆ ಸ್ವೀಕರಿಸಿ ಮಾತನಾಡಿದ ಪ್ರಭಯ್ಯ ಚಿಕ್ಕಮಠ, 1999ರಲ್ಲಿ ಕೆ.ಇ.ಎಸ್‌. ತೇರ್ಗಡೆಯಾಗಿ ಸರಕಾರಿ ಪ್ರೌಢಶಾಲಾ ಮುಖ್ಯಾಧ್ಯಾಪಕ, ಡಯಟ್ ಉಪನ್ಯಾಸಕ, ವಿವಿಧ ತಾಲೂಕುಗಳ ಬಿಇಓ ಜೊತೆಗೆ ತತ್ಸಮಾನ ವೃಂದದ ವಿವಿಧ ಹುದ್ದೆಗಳಲ್ಲಿ ಸಲ್ಲಿಸಿದ 32 ವರ್ಷಗಳ ಸೇವಾ ನೆನಪುಗಳನ್ನು ಹಂಚಿಕೊಂಡರು. ಪ್ರಭಯ್ಯ ಚಿಕ್ಕಮಠ ಅವರ ತಾಯಿ ದ್ರಾಕ್ಷಾಯಣವ್ವ, ಪತ್ನಿ ಸವಿತಾ ಸೇರಿದಂತೆ ಇತರರು ಇದ್ದರು. ಐ. ಜಿ. ವೆಂಕಟಾಪೂರಮಠ ಸ್ವಾಗತಿಸಿದರು. ರಾಜು ಭೂಶೆಟ್ಟಿ ವಂದಿಸಿದರು.