"ಜೀವನದ ಅತಿದೊಡ್ಡ ಹೂಡಿಕೆ: ಆರೋಗ್ಯ“
ಒಂದು ಕಾಲದಲ್ಲಿ ಸಮಾಜದ ದೃಷ್ಟಿಯಲ್ಲಿ “ಶ್ರೀಮಂತಿಕೆ” ಎಂದರೆ ಹಣ, ಆಸ್ತಿ, ಬಂಗಾರ, ದೊಡ್ಡ ಮನೆ, ದುಬಾರಿ ವಾಹನಗಳು. ಇವೆಲ್ಲವನ್ನೂ ಹೊಂದಿರುವ ವ್ಯಕ್ತಿಯೇ ಯಶಸ್ವಿ ಎಂದು ಅಳೆಯಲಾಗುತ್ತಿತ್ತು. ಅಂಥವರನ್ನು ನೋಡಿ ಅಸೂಯೆ ಪಡುವುದು ಸಹಜವಾಗಿತ್ತು. ಆದರೆ ಕಾಲ ಬದಲಾಗಿದೆ. ಜೀವನದ ವೇಗ ಹೆಚ್ಚಾಗಿದೆ, ಒತ್ತಡಗಳು ಗಟ್ಟಿಯಾಗಿವೆ, ಸಂಬಂಧಗಳು ಯಾಂತ್ರಿಕವಾಗಿವೆ. ಇಂತಹ ಸಂದರ್ಭದಲ್ಲಿ ಇಂದಿನ ಮನುಷ್ಯನ ಅಸೂಯೆಯ ದಿಕ್ಕೂ ಬದಲಾಗಿದೆ.
ಈಗ ಜನರು ಅಸೂಯೆ ಪಡುವುದು ಆರೋಗ್ಯವಂತ ವ್ಯಕ್ತಿಯನ್ನು ನೋಡಿ.ಹಣವಿದ್ದರೂ ಆರೋಗ್ಯವಿಲ್ಲದಿದ್ದರೆ, ಆ ಸಂಪತ್ತನ್ನು ಅನುಭವಿಸುವ ಶಕ್ತಿ ಉಳಿಯುವುದಿಲ್ಲ. ದುಬಾರಿ ಆಹಾರ ಇದ್ದರೂ ತಿನ್ನಲು ಆಗದ ಸ್ಥಿತಿ, ಐಷಾರಾಮಿ ಮನೆ ಇದ್ದರೂ ನೆಮ್ಮದಿಯಾಗಿ ನಿದ್ರಿಸಲು ಆಗದ ಮನಸ್ಸು, ಸಮಯ ಇದ್ದರೂ ಶಕ್ತಿ ಇಲ್ಲದ ದೇಹ, ಇವುಗಳೆಲ್ಲ ಇಂದಿನ ಸಮಾಜದಲ್ಲಿ ಸಾಮಾನ್ಯ ದೃಶ್ಯಗಳಾಗಿವೆ. ಇದರಿಂದ ಒಂದು ಸತ್ಯ ಸ್ಪಷ್ಟವಾಗುತ್ತದೆ: ಆರೋಗ್ಯವಿಲ್ಲದ ಸಂಪತ್ತು ಸಂಪೂರ್ಣವಲ್ಲ.ಆರೋಗ್ಯವೆಂದರೆ ಕೇವಲ ರೋಗರಹಿತ ದೇಹ ಮಾತ್ರವಲ್ಲ. ಅದು ದೇಹ, ಮನಸ್ಸು ಮತ್ತು ಆಲೋಚನೆಗಳ ಸಮತೋಲನ. ಈ ಸಮತೋಲನ ಕಳೆದುಹೋದಾಗ ಮನುಷ್ಯ ಎಲ್ಲವನ್ನೂ ಹೊಂದಿದ್ದರೂ ಖಾಲಿತನ ಅನುಭವಿಸುತ್ತಾನೆ. ಅದಕ್ಕಾಗಿಯೇ “ಆರೋಗ್ಯವೇ ಪರಮ ಸಂಪತ್ತು” ಎಂಬ ಮಾತು ಇಂದಿನ ಕಾಲಕ್ಕೆ ಇನ್ನಷ್ಟು ಅರ್ಥಪೂರ್ಣವಾಗಿದೆ.ಇಂದಿನ ಜೀವನಶೈಲಿಯಲ್ಲಿ ಆಹಾರವೂ ಒಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಬೇಕಾದಷ್ಟು ಅಲ್ಲ, ಸಾಧ್ಯವಾದಷ್ಟು ತಿನ್ನುವ ಅಭ್ಯಾಸ ಬೆಳೆದಿದೆ. ರುಚಿಗಾಗಿ ಆರೋಗ್ಯವನ್ನು ತ್ಯಜಿಸುವ ಪ್ರವೃತ್ತಿ ಹೆಚ್ಚಾಗಿದೆ. ಆದರೆ ದೇಹಕ್ಕೆ ಅಗತ್ಯವಿರುವಷ್ಟು ಮಾತ್ರ ಆಹಾರ ಸೇವಿಸುವುದೇ ದೇಹದ ಗೌರವ. ಜೀರ್ಣಿಸಿಕೊಳ್ಳಲು ಸಾಧ್ಯವಾಗುವಷ್ಟು ಮಾತ್ರ ತಿನ್ನುವುದು ದೇಹದ ಮೇಲಿನ ಕಾಳಜಿ. ಆಹಾರದಲ್ಲಿ ಸಂಯಮ ಇದ್ದರೆ ದೇಹ ಹಗುರವಾಗಿರುತ್ತದೆ, ಮನಸ್ಸು ಚುರುಕಾಗಿರುತ್ತದೆ. ಅತಿಯಾದ ತಿನಿಸು ದೇಹಕ್ಕೆ ಮಾತ್ರವಲ್ಲ, ಮನಸ್ಸಿಗೂ ಭಾರವಾಗುತ್ತದೆ. ಆರೋಗ್ಯದ ಅನೇಕ ಸಮಸ್ಯೆಗಳು ನಮ್ಮ ಅಡುಗೆಮನೆಯಲ್ಲಿಯೇ ಆರಂಭವಾಗುತ್ತವೆ ಎಂಬ ಸತ್ಯವನ್ನು ನಾವು ಅರಿಯಬೇಕಾಗಿದೆ. ಇದೇ ಸಂಯಮ ಜೀವನದ ಇತರ ಕ್ಷೇತ್ರಗಳಿಗೂ ಅನ್ವಯಿಸುತ್ತದೆ. ನಮಗೆ ಬೇಕಾದಷ್ಟು ಮಾತ್ರ ಪಡೆಯುವುದು, ಅತಿಯಾದ ಆಸೆಗಳಿಗೆ ಕಡಿವಾಣ ಹಾಕುವುದು, ಇತರರೊಂದಿಗೆ ಹೋಲಿಕೆ ಮಾಡಿಕೊಳ್ಳದೆ ಬದುಕುವುದು, ಇವೆಲ್ಲವೂ ಆರೋಗ್ಯಕರ ಬದುಕಿನ ಮೂಲಮಂತ್ರಗಳು.
ಹೋಲಿಕೆಯಿಂದ ಹೊರಬಂದಾಗ ಸಿಗುವ ಮನಸ್ಸಿನ ಸ್ವಾತಂತ್ರ್ಯ, ಇಂದಿನ ಸಮಾಜದಲ್ಲಿ ಅಶಾಂತಿಯ ಪ್ರಮುಖ ಕಾರಣವೇ ಹೋಲಿಕೆ. “ಅವನು ಏನು ಹೊಂದಿದ್ದಾನೆ?”, “ನಾನು ಏನು ಕಳೆದುಕೊಂಡಿದ್ದೇನೆ?” ಎಂಬ ಲೆಕ್ಕಾಚಾರ ಮನುಷ್ಯನ ಮನಸ್ಸನ್ನು ನಿರಂತರವಾಗಿ ಕಾಡುತ್ತದೆ. ಈ ಹೋಲಿಕೆಯೇ ಅಸೂಯೆ, ದ್ವೇಷ, ಅಸಮಾಧಾನಗಳಿಗೆ ಕಾರಣವಾಗುತ್ತದೆ.ಇತರರ ಜೀವನ ನಮ್ಮ ಜೀವನದ ಮಾನದಂಡವಾಗಬಾರದು. ಪ್ರತಿಯೊಬ್ಬರ ಜೀವನಯಾತ್ರೆ ವಿಭಿನ್ನ. ಹೋಲಿಕೆ ಮಾಡಿಕೊಳ್ಳದೆ ಬದುಕುವಾಗಲೇ ಮನಸ್ಸಿಗೆ ಸ್ವಾತಂತ್ರ್ಯ ಸಿಗುತ್ತದೆ. ಈ ಸ್ವಾತಂತ್ರ್ಯವೇ ನಿಜವಾದ ಮಾನಸಿಕ ಆರೋಗ್ಯದ ಆಧಾರ. ಮನಸ್ಸು ಶಾಂತವಾಗಿದ್ದರೆ ದೇಹವೂ ಸಹಜವಾಗಿ ಆರೋಗ್ಯವಾಗಿರುತ್ತದೆ. ಅನೇಕ ರೋಗಗಳಿಗೆ ಮೂಲ ಕಾರಣ ಮಾನಸಿಕ ಒತ್ತಡವೇ ಆಗಿದೆ ಎಂಬುದನ್ನು ಇಂದಿನ ವೈದ್ಯಕೀಯ ವಿಜ್ಞಾನವೂ ಒಪ್ಪಿಕೊಂಡಿದೆ ಎಂದು ಹೇಳಬಹುದು.ವೇಗ ಕಡಿಮೆ ಮಾಡಿದಾಗ ಬದುಕು ಸುಂದರವಾಗುತ್ತದೆ; ನಾವು ಬದುಕುತ್ತಿರುವ ಕಾಲ ಆತುರದ ಕಾಲ. ಎಲ್ಲವೂ ತಕ್ಷಣ ಬೇಕು, ಎಲ್ಲೆಡೆ ಓಟ. ಆದರೆ ಈ ಅತಿವೇಗವೇ ನಮ್ಮ ಆರೋಗ್ಯವನ್ನು ನಿಧಾನವಾಗಿ ಕುಗ್ಗಿಸುತ್ತಿದೆ. ನಾವು ನಿಯಂತ್ರಿಸಬಹುದಾದ ವೇಗದಲ್ಲಿ ಜೀವನಯಾತ್ರೆ ಸಾಗಿಸಿದಾಗ ಆತುರಕ್ಕೂ ಅಶಾಂತಿಗೂ ಜಾಗವಿರುವುದಿಲ್ಲ. ಸ್ವಲ್ಪ ಸಮಯ ನಿಲ್ಲಿ ಉಸಿರಾಡುವುದು, ದಿನದಲ್ಲಿ ಕೆಲವು ಕ್ಷಣಗಳನ್ನು ಮೌನಕ್ಕೆ ಮೀಸಲಿಡುವುದು, ಪ್ರಕೃತಿಯೊಂದಿಗೆ ಸಂಪರ್ಕ ಸಾಧಿಸುವುದು, ಇವೆಲ್ಲವೂ ಮನಸ್ಸಿಗೆ ವಿಶ್ರಾಂತಿ ನೀಡುತ್ತವೆ. ಈ ವಿಶ್ರಾಂತಿಯೇ ದೇಹದ ಪುನಶ್ಚೇತನಕ್ಕೆ ಕಾರಣವಾಗುತ್ತದೆ.ಆರೋಗ್ಯಕ್ಕಾಗಿ ಮಾತ್ರೆಗಳು, ಇಂಜೆಕ್ಷನ್ಗಳು ಮಾತ್ರ ಸಾಕಾಗುವುದಿಲ್ಲ. ನಮ್ಮೊಳಗೇ ಅನೇಕ ಓಷಧಿಗಳು ಅಡಗಿವೆ. ಸ್ವಚ್ಚ ಮನದಿಂದ ನಗುವುದು, ನಿಸ್ವಾರ್ಥವಾಗಿ ಹಾರೈಸುವುದು, ಕ್ಷಮಿಸುವ ಗುಣ ಬೆಳೆಸಿಕೊಳ್ಳುವುದು, ದ್ವೇಷ, ಅಸೂಯೆಗಳನ್ನು ತ್ಯಜಿಸುವುದು, ಇವೆಲ್ಲವೂ ಒಳಗಿನ ಓಷಧಿಗಳು.
ಈ ಗುಣಗಳು ಮನಸ್ಸನ್ನು ಹಗುರಗೊಳಿಸುತ್ತವೆ. ಮನಸ್ಸು ಹಗುರವಾಗಿದ್ದರೆ ದೇಹದ ಮೇಲೂ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಸಂತೋಷದಿಂದ ಬದುಕುವ ಮನುಷ್ಯನ ದೇಹವೂ ಸಹಜವಾಗಿ ಆರೋಗ್ಯವಾಗಿರುತ್ತದೆ.ಆರೋಗ್ಯದ ಮತ್ತೊಂದು ಪ್ರಮುಖ ಅಂಶವೇ ಸರಳ ಬದುಕು. ಅತಿಯಾದ ಅಗತ್ಯಗಳು, ತೋರಿಕೆ, ಸ್ಪರ್ಧೆ, ಇವೆಲ್ಲವೂ ಮನಸ್ಸಿನ ಶಾಂತಿಯನ್ನು ಕಸಿದುಕೊಳ್ಳುತ್ತವೆ. ಸರಳ ಬದುಕು ಎಂದರೆ ಕೊರತೆ ಅಲ್ಲ; ಅದು ತೃಪ್ತಿಯ ಸಂಕೇತ. ತೃಪ್ತ ಮನಸ್ಸು ಹೊಂದಿರುವ ವ್ಯಕ್ತಿಗೆ ಅಲ್ಪದಲ್ಲಿಯೇ ಸಂತೋಷ ಸಿಗುತ್ತದೆ. ಈ ಸಂತೋಷವೇ ಆರೋಗ್ಯದ ಮೂಲ. ಶಾಂತ ಮನಸ್ಸು, ಸಮತೋಲನದ ಬದುಕು, ಸಂಯಮಿತ ಆಲೋಚನೆ, ಇವೆಲ್ಲ ಸೇರಿದಾಗ ಆರೋಗ್ಯ ಸಂಪೂರ್ಣವಾಗುತ್ತದೆ.ಆರೋಗ್ಯ ದೇವರು ನೀಡಿದ ಮಹಾನ್ ವರದಾನ. ಆದರೆ ಅದನ್ನು ಉಳಿಸಿಕೊಳ್ಳುವುದು ನಮ್ಮ ಜವಾಬ್ದಾರಿ. ಆರೋಗ್ಯ ಕಳೆದುಕೊಂಡ ನಂತರ ಅದರ ಮೌಲ್ಯ ಅರಿಯುವುದಕ್ಕಿಂತ, ಇರುವಂತೆಯೇ ಕಾಪಾಡಿಕೊಳ್ಳುವುದು ಜಾಣತನ. ಆರೋಗ್ಯವಂತ ಜೀವನವನ್ನು ಆಚರಿಸುವುದು ನಮ್ಮ ಭಾಗ್ಯ. ಪ್ರತಿದಿನದ ಸಣ್ಣ ಆಯ್ಕೆಗಳು; ನಾವು ಏನು ತಿನ್ನುತ್ತೇವೆ, ಹೇಗೆ ಯೋಚಿಸುತ್ತೇವೆ, ಹೇಗೆ ಪ್ರತಿಕ್ರಿಯಿಸುತ್ತೇವೆ, ಇವೆಲ್ಲವೂ ನಮ್ಮ ಆರೋಗ್ಯವನ್ನು ನಿರ್ಧರಿಸುತ್ತವೆ.ಆರೋಗ್ಯ ಎನ್ನುವುದು ಐಷಾರಾಮಿ ವಸ್ತುವಲ್ಲ; ಅದು ಬದುಕಿನ ಮೂಲ ಅಗತ್ಯ. ಹಣವನ್ನು ಮತ್ತೆ ಸಂಪಾದಿಸಬಹುದು, ಸ್ಥಾನಮಾನವನ್ನು ಮರಳಿ ಪಡೆಯಬಹುದು; ಆದರೆ ಕಳೆದುಹೋದ ಆರೋಗ್ಯವನ್ನು ಅಷ್ಟೇ ಸುಲಭವಾಗಿ ಹಿಂತಿರುಗಿಸಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಆರೋಗ್ಯವನ್ನು ನಂತರ ನೋಡೋಣ ಎಂಬ ನಿರ್ಲಕ್ಷ್ಯವೇ ನಮ್ಮ ಅತಿದೊಡ್ಡ ತಪ್ಪು. ದಿನನಿತ್ಯದ ಬದುಕಿನಲ್ಲಿ ಸ್ವಲ್ಪ ಸಂಯಮ, ಸ್ವಲ್ಪ ವಿರಾಮ, ಸ್ವಲ್ಪ ಆತ್ಮಪರೀಶೀಲನೆ, ಇವನ್ನೇ ಅಳವಡಿಸಿಕೊಂಡರೆ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಕಷ್ಟವಲ್ಲ. ಶಾಂತ ಮನಸ್ಸು, ಸರಳ ಬದುಕು ಮತ್ತು ತೃಪ್ತ ಮನೋಭಾವವೇ ನಿಜವಾದ ಆರೋಗ್ಯದ ಭದ್ರತೆ. ಇದನ್ನು ಅರಿತು ನಡೆದುಕೊಂಡಾಗ ಮಾತ್ರ “ಆರೋಗ್ಯವೇ ಪರಮ ಸಂಪತ್ತು” ಎಂಬ ಮಾತು ನುಡಿಗಟ್ಟಾಗಿ ಅಲ್ಲ, ಬದುಕಿನ ನಿಜವಾದ ಅನುಭವವಾಗಿ ನಮ್ಮೊಳಗೆ ನೆಲೆಸುತ್ತದೆ.
ರುದ್ರಗೌಡ ಚ ಪಾಟೀಲ
ಸುತಗಟ್ಟಿ,
ಬೈಲಹೊಂಗಲ.