ಉಲ್ಲಾಸನಗರದಲ್ಲಿ ಯೂಟ್ಯೂಬರ್ ಹರೆಶ್ ಗಜ್ವಾನಿ ಗುಂಡಿಕ್ಕಿ ಹತ್ಯೆ; 24 ಗಂಟೆಯೊಳಗೆ ಮೂವರು ಆರೋಪಿಗಳ ಬಂಧನ
ಥಾಣೆ, ಅ. 15 : ಮಹಾರಾಷ್ಟ್ರದ ಉಲ್ಲಾಸನಗರದಲ್ಲಿ ಪ್ರಸಿದ್ಧ ಯೂಟ್ಯೂಬರ್ ಹರೆಶ್ ಗಜ್ವಾನಿ ಅವರನ್ನು ಅಪರಿಚಿತ ದುಷ್ಕರ್ಮಿಗಳು ಸಮೀಪದಿಂದ ಗುಂಡು ಹಾರಿಸಿ, ಹರಿತವಾದ ಆಯುಧದಿಂದ ಹಲ್ಲೆ ನಡೆಸಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಠ್ಠಲವಾಡಿ ಪೊಲೀಸರು ಮತ್ತು ಥಾಣೆ ಅಪರಾಧ ವಿಭಾಗದ ಪೊಲೀಸರು 24 ಗಂಟೆಯೊಳಗೆ ಮೂವರು ಶಂಕಿತರನ್ನು ಬಂಧಿಸಿದ್ದಾರೆ.
ಥಾಣೆಯ ಮನ್ಪಾಡಾ ಪ್ರದೇಶದಲ್ಲಿ ಶಿವಸೇನೆ (ಯುಬಿಟಿ) ವಿಭಾಗದ ಮುಖ್ಯಸ್ಥ ಪ್ರದೀಪ್ ಪುರ್ನೇಕರ್ ಅವರ ಹತ್ಯೆ ನಡೆದ ಬೆನ್ನಲ್ಲೇ ಈ ಘಟನೆ ಸಂಭವಿಸಿದ್ದು, ಈ ಪ್ರದೇಶದಲ್ಲಿ ಹೆಚ್ಚುತ್ತಿರುವ ಹಿಂಸಾತ್ಮಕ ಅಪರಾಧಗಳ ಕುರಿತು ಆತಂಕ ಮೂಡಿಸಿದೆ.
ಬುಧವಾರ ಗಜ್ವಾನಿ ಅವರು ಉಲ್ಲಾಸನಗರ ರೈಲು ನಿಲ್ದಾಣದ ಸಮೀಪದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಈ ವೇಳೆ ಅಲ್ಲಿಗೆ ಬಂದ ದುಷ್ಕರ್ಮಿಗಳು ಸಮೀಪದಿಂದ ಅವರ ತಲೆಗೆ ಎರಡು ಗುಂಡುಗಳನ್ನು ಹಾರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಗುಂಡೇಟಿನಿಂದ ಗಜ್ವಾನಿ ರಕ್ತದ ಮಡುವಿನಲ್ಲಿ ಕುಸಿದು ಬಿದ್ದಿದ್ದಾರೆ. ಬಳಿಕ ದುಷ್ಕರ್ಮಿಗಳು ಕೊಯ್ತಾ (ಕೃಷಿ ಕೆಲಸಕ್ಕೆ ಬಳಸುವ ಹರಿತವಾದ ಆಯುಧ)ದಿಂದ ಅವರ ಮೇಲೆ ಹಲ್ಲೆ ನಡೆಸಿದ್ದಾರೆ.
ಜನನಿಬಿಡ ರೈಲು ನಿಲ್ದಾಣದ ಸಮೀಪವೇ ಗುಂಡಿನ ದಾಳಿ ನಡೆದಿದ್ದರಿಂದ ಸ್ಥಳದಲ್ಲಿ ಭಯಭೀತ ವಾತಾವರಣ ನಿರ್ಮಾಣವಾಗಿತ್ತು. ದಾಳಿಯಿಂದ ಆತಂಕಗೊಂಡ ಜನರು ಸುರಕ್ಷತೆಗಾಗಿ ಓಡಿಹೋಗಿದ್ದಾರೆ.
ಹತ್ಯೆಯ ಮಾಹಿತಿ ಲಭಿಸಿದ ತಕ್ಷಣ ವಿಠ್ಠಲವಾಡಿ ಪೊಲೀಸರು ಮೂರು ತಂಡಗಳನ್ನು ರಚಿಸಿ ತನಿಖೆ ಆರಂಭಿಸಿದರು. ಮತ್ತೊಂದೆಡೆ, ಥಾಣೆ ಅಪರಾಧ ವಿಭಾಗದ ಪೊಲೀಸರು ಸಮಾನಾಂತರ ತನಿಖೆ ಕೈಗೊಂಡರು. ತನಿಖೆಯ ವೇಳೆ ಸಂಗ್ರಹಿಸಿದ ತಾಂತ್ರಿಕ ಮಾಹಿತಿಯ ಆಧಾರದ ಮೇಲೆ ಅವಿನಾಶ್ ನಾಯ್ಡು, ವಿಜಯ್ ಪುರನ್ಸಿಂಗ್ ಮತ್ತು ನೂರ್ ಆಲಂ ಖಾನ್ ಎಂಬ ಮೂವರು ಶಂಕಿತರನ್ನು ವಶಕ್ಕೆ ಪಡೆದು ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಉಪ ಪೊಲೀಸ್ ಆಯುಕ್ತ ಸಚಿನ್ ಗೋರೆ ಅವರ ಪ್ರಕಾರ, ಹಿಂದಿನ ವೈಷಮ್ಯವೇ ಈ ಹತ್ಯೆಗೆ ಕಾರಣವಾಗಿರುವ ಸಾಧ್ಯತೆಯಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಉಲ್ಲಾಸನಗರದಲ್ಲಿ ಅಕ್ರಮ ಜೂಜಾಟದ ಅಡ್ಡೆಗಳು ನಡೆಯುತ್ತಿರುವ ಕುರಿತು ಗಜ್ವಾನಿ ಅವರು ಪೊಲೀಸರಿಗೆ ಪದೇಪದೇ ದೂರು ನೀಡುತ್ತಿದ್ದರು. ಇದರಿಂದ ಅವರ ವಿರುದ್ಧ ಕೆಲವರಲ್ಲಿ ಅಸಮಾಧಾನ ಉಂಟಾಗಿರಬಹುದು ಎಂದು ಶಂಕಿಸಲಾಗಿದೆ.
ಗಜ್ವಾನಿ ಮತ್ತು ಆರೋಪಿಗಳ ನಡುವೆ ಈ ಹಿಂದೆ ಉಲ್ಲಾಸನಗರ ಪೊಲೀಸ್ ಠಾಣೆಯಲ್ಲಿ ಪರಸ್ಪರ ದೂರುಗಳ ಆಧಾರದ ಮೇಲೆ ಪ್ರಕರಣಗಳು ದಾಖಲಾಗಿದ್ದವು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಹತ್ಯೆಯ ಹಿಂದಿನ ನಿಖರ ಉದ್ದೇಶ ಹಾಗೂ ದಾಳಿಗೆ ಕಾರಣವಾದ ಸಂದರ್ಭಗಳನ್ನು ಪತ್ತೆಹಚ್ಚಲು ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.