ಧಾರವಾಡ ಜಿಲ್ಲೆಯ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಆವರಣಕ್ಕೆ ಭೇಟಿ

ಧಾರವಾಡ ಜಿಲ್ಲೆಯ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಆವರಣಕ್ಕೆ ಭೇಟಿ Visit to the premises of the Animal Husbandry and Veterinary Services Department of Dharwad District

ಲೋಕದರ್ಶನ ವರದಿ 

          ಧಾರವಾಡ 02 ; ದಿನಾಂಕ 02-06-2026 ರಂದು ಭುವನೇಶ ದೇವಿದಾಸ್ ಪಾಟೀಲ್, ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ ಧಾರವಾಡ ಇವರು ಧಾರವಾಡ ಜಿಲ್ಲೆಯ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಆವರಣಕ್ಕೆ ಭೇಟಿ ನೀಡಿ ಪರೀಶೀಲಿಸಿದರು. ಆವರಣದಲ್ಲಿರುವ ಜಿಲ್ಲಾ ಪಶು ಆಸ್ಪತ್ರೆ (ಪಾಲಿಕ್ಲಿನಿಕ್)ಗೆ ಭೇಟಿ ನೀಡಿ ಜಾನುವಾರುಗಳಿಗೆ ಆಸ್ಪತ್ರೆಯಲ್ಲಿ ದೊರೆಯುವ ಚಿಕಿತ್ಸಾ ಸೌಲಭ್ಯಗಳನ್ನು ವೀಕ್ಷಿಸಿದರು.

          ಆಸ್ಪತ್ರೆಗೆ ಮಂಜೂರಾಗಿರುವ ನಾಲ್ಕೂ ಡಿ-ದರ್ಜೆ ಹುದ್ದೆಗಳು ಖಾಲಿ ಇರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿರುವ ಎಲ್ಲ ಪಶುವೈದ್ಯಕೀಯ ಚಿಕಿತ್ಸಾ ಕೇಂದ್ರಗಳಲ್ಲಿ ಖಾಲಿಯಿರುವ ಡಿ-ದರ್ಜೆ ನೌಕರರ ಹುದ್ದೆಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡುವ ಬಗ್ಗೆ ಪ್ರಸ್ತಾವನೆ ಸಲ್ಲಿಸಲು ಡಾ.ಎಸ್‌.ವ್ಹಿ.ಸಂತಿ, ಉಪನಿರ್ದೇಶಕರು (ಆಡಳಿತ) ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಧಾರವಾಡ ಇವರಿಗೆ ಸೂಚಿಸಿದರು. 

ಜಿಲ್ಲೆಯಲ್ಲಿರುವ ಪಶುವೈದ್ಯಕೀಯ ಚಿಕಿತ್ಸಾ ಕೇಂದ್ರಗಳ ಕಟ್ಟಡಗಳ ನಿರ್ಮಾಣ, ರಿಪೇರಿ ಮತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದರು. ಜಿಲ್ಲೆಯ ಉಪನಿರ್ದೇಶಕರು(ಆಡಳಿತ) ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಧಾರವಾಡ ಕಛೇರಿಯಲ್ಲಿ ಶೀಘ್ರವಾಗಿ             ಇ-ಆಫೀಸ್ ತಂತ್ರಾಂಶ ಅಳವಡಿಸಿಕೊಳ್ಳಲು ಕ್ರಮವಹಿಸಲು ತಿಳಿಸಿದರು.  

ಜಿಲ್ಲಾ ಪಶು ಆಸ್ಪತ್ರೆ (ಪಾಲಿಕ್ಲಿನಿಕ್)ಗೆ ಅವಶ್ಯವಿರುವ ದೊಡ್ಡ ಪ್ರಾಣಿಗಳ ಹೈಡ್ರಾಲಿಕ್ ಶಸ್ತ್ರ ಚಿಕಿತ್ಸಾ ಟೇಬಲ್ ಹಾಗೂ ಇತರೆ ಅವಶ್ಯ ಉಪಕರಣಗಳ ಸರಬರಾಜಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಡಾ.ಆರ್‌.ಡಿ.ಪಾಟೀಲ, ಉಪನಿರ್ದೇಶಕರು (ಪಾಲಿಕ್ಲಿನಿಕ್) ಇವರಿಗೆ ಸೂಚಿಸಿದರು. 

ಜಿಲ್ಲಾ ಪಶುಪಾಲನಾ ತರಬೇತಿ ಕೇಂದ್ರಕ್ಕೆ ಭೇಟಿ ನೀಡಿ ಅವಶ್ಯ ಮೂಲ ಸೌಕರ್ಯಗಳನ್ನು ಇನ್ನಷ್ಟು ಉತ್ತಮ ಪಡಿಸಲು ಕ್ರಮ ವಹಿಸಲು ಸೂಚಿಸಿದರು.  

ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿರುವ ಪಶುಪಾಲನಾ ಇಲಾಖೆಯ ಘನೀಕೃತ ವೀರ್ಯನಳಿಕೆ ಉತ್ಪಾದನಾ ಕೇಂದ್ರಕ್ಕೆ ಭೇಟಿ ನೀಡಿ ಹೋರಿಗಳ ಪಾಲನೆ, ವೀರ್ಯನಳಿಕೆಗಳ ಉತ್ಪಾದನೆ ಹಾಗೂ ಗುಣಮಟ್ಟ ನಿರ್ವಹಣೆ ಪ್ರಕ್ರಿಯೆಯನ್ನು ಸ್ವತಃ ವೀಕ್ಷಿಸಿ, ಕೇಂದ್ರದ ಕಾರ್ಯನಿರ್ವಹಣೆ ಬಗ್ಗೆ ತೃಪ್ತಿ ವ್ಯಕ್ತ ಪಡಿಸಿದರು. ಇನ್ನಷ್ಟು ಮೂಲಭೂತ ಸೌಕರ್ಯಗಳನ್ನು ಜಿಲ್ಲಾ ಪಂಚಾಯತ ಅನುದಾನದಲ್ಲಿ ಒದಗಿಸುವ ಭರವಸೆ ನೀಡಿ ಒಟ್ಟಾರೆಯಾಗಿ ಇಲಾಖಾ ಚಟುವಟಿಕೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.  

ಗರಗ ಗ್ರಾಮದ ಪಶುಚಿಕಿತ್ಸಾಲಯಕ್ಕೆ ಭೇಟಿ ನೀಡಿದರು. ಸದರಿ ಪಶು ಚಿಕಿತ್ಸಾಲಯದಲ್ಲಿ ಕೃತಕ ಗರ್ಭಧಾರಣೆಯ ಉತ್ತಮ ಫಲಿತಾಂಶಕ್ಕಾಗಿ ಅಳವಡಿಸಿರುವ, ಜಾನುವಾರುಗಳನ್ನು ತಂಪಾಗಿಸುವ ಫಾಗರ್  

ಸೌಲಭ್ಯವನ್ನು ಪರೀಶೀಲಿಸಿ, ಜಿಲ್ಲೆಯ ಉಳಿದ ಪಶುಚಿಕಿತ್ಸಾಲಯಗಳಲ್ಲಿ ಇದೇ ಮಾದರಿಯ ಸೌಲಭ್ಯ ಒದಗಿಸಲು ಸೂಚಿಸಿದರು. ಉತ್ಕೃಷ್ಟ ತಳಿಯ ಹೋರಿಗಳ ವೀರ್ಯನಳಿಕೆಯಿಂದ ಜನಿಸಿರುವ ಕರುಗಳನ್ನು ಕಂಡು ಸಂತೋಷ ವ್ಯಕ್ತಪಡಿಸಿದರು ಹಾಗೂ ಅವುಗಳಿಗೆ ಆರೋಗ್ಯ ವರ್ಧಕ ಪೂರಕ ಆಹಾರಗಳನ್ನು ವಿತರಿಸಿದರು.  

ಶ್ರೀ ಮನೋಹರ ದೇಸಾಯಿ ಇವರ ಖಾಸಗಿ ಡೈರಿ ಫಾರಂಗೆ ಭೇಟಿ ನೀಡಿ, ಅಲ್ಲಿ ಪಾಲನೆ ಮಾಡುತ್ತಿರುವ ಸಾಹಿವಾಲ್ ತಳಿಯ ಹಸುಗಳನ್ನು ಹಾಗೂ ಬೀಜೋತ್ಪಾದನಾ ಘಟಕವನ್ನು ವೀಕ್ಷಿಸಿದರು. 

ಮಾನ್ಯರ ಪ್ರವಾಸ ಸಂದರ್ಭದಲ್ಲಿ ಡಾ.ನಾಗರಾಜ ಜಂಟಿ ನಿರ್ದೇಶಕರು (ರಾಜ್ಯ ವಲಯ) ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಧಾರವಾಡ, ಡಾ.ಪ್ರಮೋದ ಮೂಡಲಗಿ, ಉಪನಿರ್ದೇಶಕರು, ಘನೀಕೃತ ವೀರ್ಯನಳಿಕೆ ಉತ್ಪಾದನಾ ಕೇಂದ್ರ ಹಾಗೂ ಇತರೆ ಪಶುವೈದ್ಯಾಧಿಕಾರಿಗಳು ಹಾಜರಿದ್ದರು.