ನಮ್ಮೊಂದಿಗೆ ಸಂವಿಧಾನದ ರಕ್ಷಣೆಯ ಅಗತ್ಯವಿದೆ ;ಮಹಮ್ಮದ ನಲಪಾಡ
ಮುಧೋಳ 26: ದೇಶದ ಅಭಿವೃದ್ಧಿಗಾಗಿ ಕಾಂಗ್ರೆಸ್ ಸರ್ಕಾರ 70ವರ್ಷ ಗಳಿಸಿದ್ದನ್ನು ಈಗಿನ ಸರ್ಕಾರ ಕೇವಲ ಏಳೇ ವರ್ಷದಲ್ಲಿ ಅವೆಲ್ಲವನ್ನೂ ಮಾರಾಟ ಮಾಡಲು ಮುಂದಾಗಿದ ಎಂದು ಕಾಂಗ್ರೆಸ್ ಮುಖಂಡ ಮಹಮ್ಮದ ಹ್ಯಾರೀಸ್ ನಲಪಾಡ ಹೇಳಿದರು.
ಶುಕ್ರವಾರ ನಗರದ ರನ್ನ ಭವನದಲ್ಲಿ ಅಹಿಂದ ಸಂಘಟನೆ ನೇತೃತ್ವದಲ್ಲಿ ಆಯೋಜಿಸಿದ್ದ 73ನೇ ಸಂವಿಧಾನ ಸಮರಾ್ಣ ದಿನೋತ್ಸವ ಸಾಧಕರಿಗೆ ಸತ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಅಹಿಂದ ವರ್ಗದ ಜನರ ಅಸ್ತಿತ್ವ ಉಳಿಯಬೇಕಾದರೆ ಸಂವಿಧಾನ ಅತ್ಯವಶ್ಯ. ಆದ್ದರಿಂದ ನಮ್ಮೊಂದಿಗೆ ನಮ್ಮ ಸಂವಿಧಾನವನ್ನು ರಕ್ಷಿಸಿಕೊಳ್ಳುವ ಮಹತ್ತರವಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.
ಇಂದು ಸಂವಿಧಾನ ವಿರೋಧಿಗಳ ಕೈಯಲ್ಲಿ ದೇಶದ ಅಧಿಕಾರ ಚುಕ್ಕಾಣಿಯಿದೆ. ಇದನ್ನು ನಾವೆಲ್ಲರೂ ಮನಗಂಡು ಮುಂದಿನ ದಿನಗಳಲ್ಲಿ ಅವರಿಗೆ ತಕ್ಕ ಪಾಠ ಕಲಿಸಲು ಮುಂದಾಗಬೇಕು ಎಂದು ಹೇಳಿದರು.
ಉಪನ್ಯಾಸ ನೀಡಿದ ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ರವೀಂದ್ರ ನಾಯಕ, ಮಾನವ ಬಂಧುತ್ವ ವೇದಿಕೆ ಮಾನವೀಯತೆ ನಮ್ಮ ಧರ್ಮ ಸಂವಿಧಾನ ನಮ್ಮ ಧರ್ಮಗ್ರಂಥ ಎಂಬ ನೆಲೆಗಟ್ಟಿನ ಮೇಲೆ ಕಾರ್ಯನಿರ್ವಹಿಸುತ್ತಿದೆ. ಆದರೆ ಈಗ ದೇಶದಲ್ಲಿ ಅಧಿಕಾರ ನಡೆಸುತ್ತಿರುವವರು ಸಂವಿಧಾನ ಬದಲಾಯಿಸುವ ಬಗ್ಗೆ ಮಾತುಗಳನ್ನಾಡುತ್ತಿದ್ದು, ಈ ಬಗ್ಗೆ ನಾವೆಲ್ಲರೂ ಗಂಭೀರವಾಗಿ ಯೋಚಿಸಬೇಕಿದೆ ಎಂದರು.
ದೇಶದಲ್ಲಿ ನಿಧಾನಗತಿಯಲ್ಲಿ ಮನುಸ್ಮೃತಿ ಜಾರಿಯ ಲಕ್ಷಣಗಳು ಗೋಚರಿಸುತ್ತಿದ್ದು, ಆ ಮೂಲಕ ಕೆಳ ಹಂತದ ಜನಾಂಗವನ್ನು ಮತ್ತೆ ದಾಸ್ಯತ್ವಕ್ಕೆ ನೂಕುವ ಹುನ್ನಾರ ನಡೆದಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಡಾ.ಎಸ್.ಪಿ. ನಾಡಕರ್ಣಿ ಮಾತನಾಡಿ, ನಾವೆಲ್ಲರೂ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ತಲೆ ಮೇಲೆ ಹೊತ್ತು ತಿರುಗುವ ಬದಲು, ಅವರ ವಿಚಾರಧಾರೆಗಳನ್ನು ತಲೆಯಲ್ಲಿ ತುಂಬಿಸಿಕೊಂಡು ಜೀವನ ನಡೆಸಬೇಕಿದೆ, ದೇಶದಲ್ಲಿ ಇತ್ತೀಚಿನ ಬೆಳವಣಿಗೆಯ ಪ್ರಕಾರ ನಮ್ಮಲ್ಲಿನ ಒಗ್ಗಟ್ಟನ್ನು ಒಡೆಯುವ ಹುನ್ನಾರ ನಡೆದಿದೆ. ನಾವುಗಳು ಎಚ್ಚೆತ್ತುಕೊಂಡು ಒಂದಾಗಿ ನಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕಿದೆ;.ನಮಗೆ ರಾಜಕೀಯ ಸಮಾನತೆ ದೊರೆತಿದ್ದರೂ ಸಾಮಾಜಿಕ ಹಾಗೂ ಆರ್ಥಿಕವಾಗಿ ತೀವ್ರ ಹಿಂದೆ ಇದ್ದೇವೆ. ಶಿಕ್ಷಣದಿಂದ ಮಾತ್ರ ನಮ್ಮ ಜೀವನ ಸುಧಾರಣೆ ಸಾಧ್ಯ ಎಂದರು.
ಚಿಂತಕಿ,ಪತ್ರಕರ್ತೆ ಸರಳಾ ಸಾಗರ ಸಾತ್ಪುತೆ ಮಾತನಾಡಿ, ಮಹಿಳೆಯರ ಸ್ವಾತಂತ್ರ್ಯ ಹಾಗೂ ಅಭಿವೃದ್ಧಿಗೆ ಡಾ.ಬಿ.ಆರ್. ಅಂಬೇಡ್ಕರ್ ಅವರ ಕೊಡುಗೆ ಅಪಾರವಾಗಿದೆ. ದೇಶದಲ್ಲಿ ಸಂವಿಧಾನ ವಿರೋಧಿ ಚಟುವಟಿಕೆಗಳು ಹೆಚ್ಚಾದ ಹಿನ್ನೆಲೆ ಅಹಿಂದ ಸಂಘಟನೆ ಅಡಿಯಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಸಂವಿಧಾನ ವಿರೋಧಿಗಳಿಗೆ ತಕ್ಕ ಪಾಠ ಕಲಿಸುವ ಅಗತ್ಯತೆ ಇದೆ ಎಂದು ಹೇಳಿದರು.
ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನಯ ತಿಮ್ಮಾಪುರ ಮಾತನಾಡಿ, ಡಾ.ಬಿ.ಆರ್. ಅಂಬೇಡ್ಕರ್ ಅವರು ನಮ್ಮೊಳಗಿನ ಒಬ್ಬ ವ್ಯಕ್ತಿ ಅಲ್ಲ, ಅವರು ಒಂದು ದೊಡ್ಡತೆರನಾದ ಶಕ್ತಿ. ಅವರ ಜೀವನದ ಆದರ್ಶಗಳನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಅಗತ್ಯತೆ ಇದೆ ಎಂದು ಹೇಳಿದರು.
ಸನ್ಮಾನ : ಕಾರ್ಯಕ್ರಮದಲ್ಲಿ ವಿವಿಧ ರಂಗದಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು. ಮಹಾಲಿಂಗಪ್ಪ ಸಂವಿಧಾನದ ಪೀಠಿಕೆಯನ್ನು ಬೋಧಿಸಿದರು.
ಬಿ.ಗೌತಮ,. ಸಾಹಿಲ್ ಬಂಡಿವಡ್ಡರ, ಅಹಿಂದ ಸಂಘಟನೆ ತಾಲೂಕು ಅಧ್ಯಕ್ಷ ಗೋವಿಂದ ಕೌಲಗಿ,ಚಿನ್ನು ಅಂಬಿ, ಸಿದ್ದಣ್ಣ ಅವರಾದಿ, ವಾಸೀಂ ಜಕ್ಕಲಿ, ಪ್ರಶಾಂತ ಕಾಳೆ, ಕೋಶಾಧ್ಯಕ್ಷ ಲಕ್ಷ್ಮಣ ಮಾಲಗಿ, ಪರಮಾನಂಧ ಕುಟ್ರಟ್ಟಿ, ರವಿ ಕಾಂಬಳೆ, ಶಿವಪ್ಪ ಡೊಳ್ಳಿ, ಅರವಿಂದ ಕಾಂಬಳೆ, ಕೃಷ್ಣಾ ಲಮಾಣಿ, ಸದಾಶಿವ ಮಾಳಿ ಸೇರಿದಂತೆ ಇತರರು ಇದ್ದರು.
======================
ಭವ್ಯ ಮೆರವಣಿಗೆ : ಕಾರ್ಯಕ್ರಮಕ್ಕೂ ಮುನ್ನ ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರೆ್ಣ ಮಾಡಿ ಮೂರ್ತಿ ಮೆರವಣಿಗೆಗೆ ಮುಖಂಡರು ಚಾಲನೆ ನೀಡಿದರು. ನಗರದ ಪ್ರಮುಖ ಬೀದಿಯಲ್ಲಿ ಸಂಚರಿಸಿದ ಮೆರವಣಿಗೆ ರನ್ನ ಭವನಕ್ಕೆ ಆಗಮಿಸಿತು. ಮೆರವಣಿಗೆಯಲ್ಲಿ ಮಹಿಳೆಯರ ಡೊಳ್ಳುಕುಣಿತ ನೋಡುಗರ ಮನಸೂರೆಗೊಂಡಿತು.