ಮಸೀದಿಯಲ್ಲಿ ಅನಿಲ ಸ್ಫೋಟ, ಮೃತರ ಸಂಖ್ಯೆ 21 ಕ್ಕೆ ಏರಿಕೆ
ಮಾಸ್ಕೋ, ಸೆಪ್ಟೆಂಬರ್ 6: (ಸ್ಪುಟ್ನಿಕ್) ಬಾಂಗ್ಲಾದೇಶದ ನಾರಾಯಂಗಂಜ್ ನಗರದಲ್ಲಿರುವ ಬೈಟಸ್ ಸಲಾಹ್ ಜೇಮ್ ಮಸೀದಿಯಲ್ಲಿ ಸಂಭವಿಸಿದ ಅನಿಲ ಸ್ಫೋಟದಿಂದಾಗಿ ಕನಿಷ್ಠ 21 ಜನರು ಮೃತಪಟ್ಟಿದ್ದಾರೆ.
ಸಂಜೆ ಪ್ರಾರ್ಥನೆಗಾಗಿ ಜನರು ಮಸೀದಿಯಲ್ಲಿ ಜಮಾಯಿಸಿದ್ದರಿಂದ ಶುಕ್ರವಾರ ಸಂಜೆ ಸ್ಫೋಟ ಸಂಭವಿಸಿದೆ. ಗಾಯಗೊಂಡ ಇನ್ನು ಹಲವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಟ್ರಿಬ್ಯೂನ್ ಪತ್ರಿಕೆ ವರದಿ ಮಾಡಿದೆ.
ಅಗ್ನಿಶಾಮಕ ಸೇವೆಯ ಉಪ ಸಹಾಯಕ ನಿರ್ದೇಶಕ ಅಬ್ದುಲ್ಲಾ ಅಲ್ ಅರೆಫಿನ್ ಅವರ ಪ್ರಕಾರ ಮಸೀದಿಯ ಕಳೆಭಾಗದ ಕೊಳವೆಗಳಿಂದ ಅನಿಲ ಸೋರಿಕೆಯಾಗಿ ಅವುಗಳನ್ನು ಬದಲಾಯಿಸಲು ಪ್ರಯತ್ನಿಸಿದಾಗ ಕಿಡಿಗಳಿಂದಾಗಿ ಸ್ಫೋಟಗೊಂಡಿದೆ. ಮೃತಪಟ್ಟವರಲ್ಲಿ 7 ವರ್ಷದ ಮಗು ಸಹ ಸೇರಿದೆ ಎಂದೂ ವರದಿಯಲ್ಲಿ ತಿಳಿಸಲಾಗಿದೆ.
ಇನ್ನೂ 15 ಕ್ಕೂ ಹೆಚ್ಚು ಜನರು ಸುಟ್ಟಗಾಯಗಳು ಮತ್ತು ಇತರ ಗಾಯಗಳಿಂದ ಚಿಕಿತ್ಸೆ ಪಡೆಯುತ್ತಿದ್ದು, ಅವರೆಲ್ಲರ ಸ್ಥಿತಿ ಗಂಭೀರವಾಗಿದೆ. ಘಟನೆಯ ಬಗ್ಗೆ ಸ್ಥಳೀಯ ಅಗ್ನಿಶಾಮಕ ಇಲಾಖೆ ಮತ್ತು ಪೊಲೀಸರು ತನಿಖೆ ಆರಂಭಿಸಿದ್ದಾರೆ.