ದೇಶ ತೊರೆಯದಂತೆ ಶ್ರೀಲಂಕಾ ಮಾಜಿ ಅಧ್ಯಕ್ಷ ಗೊತಬಯ ರಾಜಪಕ್ಸೆ ಸೋದರರಿಗೆ ಸುಪ್ರೀಂಕೋರ್ಟ್ ಸೂಚನೆ
ಕೊಲಂಬೊ: ಜುಲೈ 15 : ಶ್ರೀಲಂಕಾದಲ್ಲಿ ರಾಜಪಕ್ಸೆ ರಾಜಕೀಯ ಕುಟುಂಬ ಇಂದು ಮತ್ತಷ್ಟು ಬಿಗಿತಕ್ಕೆ ಸಿಲುಕಿದೆ. ಅಧ್ಯಕ್ಷ ಸ್ಥಾನಕ್ಕೆ ಗೋತಬಯ ರಾಜಪಕ್ಸೆ ರಾಜೀನಾಮೆಯನ್ನು ಔಪಚಾರಿಕವಾಗಿ ಘೋಷಿಸಿದ ನಂತರ ಸುಪ್ರೀಂ ಕೋರ್ಟ್ ಅವರ ಇಬ್ಬರು ಸಹೋದರರಾದ ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸೆ ಮತ್ತು ಮಾಜಿ ಹಣಕಾಸು ಸಚಿವ ಬಸಿಲ್ ರಾಜಪಕ್ಸೆಗೆ ದೇಶವನ್ನು ತೊರೆಯದಂತೆ ನಿರ್ಬಂಧಿಸಿದೆ. ಜುಲೈ 28 ರವರೆಗೆ ಅನುಮತಿಯಿಲ್ಲದೆ ದೇಶವನ್ನು ತೊರೆಯದಂತೆ ಲಂಕಾದ ಸುಪ್ರೀಂ ಕೋರ್ಟ್ ಶುಕ್ರವಾರ ನಿರ್ಬಂಧಿಸಿದೆ. ಇಬ್ಬರು ಮಾಜಿ ಕೇಂದ್ರ ಬ್ಯಾಂಕ್ ಗವರ್ನರ್‌ಗಳು ಸೇರಿದಂತೆ ಮೂವರು ಮಾಜಿ ಅಧಿಕಾರಿಗಳು ಸಹ ನ್ಯಾಯಾಲಯದ ಅನುಮತಿಯಿಲ್ಲದೆ ದೇಶದಿಂದ ಹೊರಗೆ ಹೋಗುವಂತಿಲ್ಲ ಎಂದಿದೆ.
ಎರಡು ತಿಂಗಳ ಹಿಂದೆಯಷ್ಟೇ ಮಹಿಂದಾ ರಾಜಪಕ್ಸೆ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರ ಬೆಂಬಲಿಗರು ಅವರ ಸೋದರ, ಆಗಿನ ಅಧ್ಯಕ್ಷ ಗೊತಬಯ ರಾಜಪಕ್ಸೆ ಅವರ ಕಚೇರಿಯ ಹೊರಗೆ ಪ್ರತಿಭಟನೆ ನಡೆಸಿ ಕೆಲವರ ಮೇಲೆ ದಾಳಿ ಮಾಡಿದ ನಂತರ ಪ್ರತಿಭಟನೆಗಳು ಹೆಚ್ಚು ತೀವ್ರಗೊಂಡವು. ಅಂತಿಮವಾಗಿ ನಿನ್ನೆಯಿಂದ ಜಾರಿಗೆ ಬರುವಂತೆ ಗೊತಬಯ ಅವರು ಕಾನೂನುಬದ್ಧವಾಗಿ ರಾಜೀನಾಮೆ ನೀಡಿದ್ದಾರೆ ಎಂದು ಸ್ಪೀಕರ್ ಮಹಿಂದ ಯಾಪಾ ಅಬೇವರ್ಧನ ತಿಳಿಸಿದ್ದಾರೆ.
ಹಂಗಾಮಿ ಅಧ್ಯಕ್ಷರಾಗಿ ಪ್ರಧಾನಿ ರನಿಲ್ ವಿಕ್ರಮಸಿಂಘೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸಂಸತ್ತು ಬುಧವಾರ ಜುಲೈ 20 ರಂದು ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡುತ್ತದೆ ಎಂದು ವರದಿಯಾಗಿದೆ.