ಶ್ರೀಲಂಕಾ ಬಿಕ್ಕಟ್ಟು: ಭಾರತಕ್ಕೆ ಧನ್ಯವಾದ ಅರ್ಪಿಸಿದ ಸನತ್ ಜಯಸೂರ್ಯ
ಕೊಲಂಬೊ: ಜುಲೈ 12: ಆರ್ಥಿಕ ಬಿಕ್ಕಟ್ಟಿನಿಂದಾಗಿ ಶ್ರೀಲಂಕಾದಲ್ಲಿ ಪರಿಸ್ಥಿತಿ ಹದಗೆಟ್ಟಿದೆ. ದೇಶದ ಜನತೆ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದು, ದೇಶದ ಅಧ್ಯಕ್ಷ ಗೋತಬಯ ರಾಜಪಕ್ಸೆ ಅವರು ಕುಟುಂಬ ಸಮೇತ ನಾಪತ್ತೆಯಾಗಿದ್ದಾರೆ. ಪ್ರತಿಭಟನಾಕಾರರು ಪ್ರಧಾನಿ ಹಾಗೂ ಅಧ್ಯಕ್ಷರ ರಾಜೀನಾಮೆಗೆ ಒತ್ತಾಯಿಸುತ್ತಿದ್ದಾರೆ. ಈ ಪ್ರತಿಭಟನೆಗೆ ಶ್ರೀಲಂಕಾದ ಮಾಜಿ ಕ್ರಿಕೆಟಿಗ ಹಾಗೂ ರನ್ ಮಶಿನ್ ಅಂತಾನೆ ಖ್ಯಾತಿ ಗಳಿಸಿರುವ ಸನತ್ ಜಯಸೂರ್ಯ ಕೂಡ ಸಾಥ್ ನೀಡಿದ್ದಾರೆ. “ಎಲ್ಲರೂ ಶಾಂತಿಯುತ ಪ್ರತಿಭಟನೆಯನ್ನು ಬಯಸುತ್ತೇವೆ ಮತ್ತು ಅದನ್ನೇ ನಾವು ಮಾಡುತ್ತಿದ್ದೇವೆ” ಎಂದು ಜಯಸೂರ್ಯ ಹೇಳಿದ್ದಾರೆ.
“ಸ್ಪೀಕರ್, ಹಿರಿಯ ರಾಜಕಾರಣಿಗಳು, ಪಕ್ಷದ ಮುಖಂಡರು ಶೀಘ್ರ ನಿರ್ಧಾರ ಕೈಗೊಳ್ಳಬೇಕು. ಶಾಶ್ವತ ಸರ್ಕಾರ ರಚನೆಯಾದ ನಂತರ ಅಂತರರಾಷ್ಟ್ರೀಯ ಹಣಕಾಸು ನಿಧಿ, ಭಾರತ ಮತ್ತು ಇತರ ಪಾಲುದಾರ ರಾಷ್ಟ್ರಗಳು ಶ್ರೀಲಂಕಾಕ್ಕೆ ಸಹಾಯ ಮಾಡುತ್ತವೆ. ಈ ಬಿಕ್ಕಟ್ಟಿನ ಆರಂಭದಿಂದಲೂ ಭಾರತವು ತುಂಬಾ ಸಹಾಯ ಮಾಡಿದೆ. ಇದಕ್ಕಾಗಿ ನಾವು ಭಾರತಕ್ಕೆ ಆಭಾರಿಯಾಗಿದ್ದೇವೆ. ಶ್ರೀಲಂಕಾ ಪರ ಭಾರತ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಸತನ್ ಜಯಸೂರ್ಯ ತಿಳಿಸಿದ್ದಾರೆ.