ಜಮಖಂಡಿ

ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಚುರುಕು; ಶೇ.92.38 ಎಣಿಕೆ ನಮೂನೆಗಳ ವಿತರಣೆ

ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಚುರುಕು; ಶೇ.92.38 ಎಣಿಕೆ ನಮೂನೆಗಳ ವಿತರಣೆ

ಲೋಕದರ್ಶನ ವರದಿ  

ಜಮಖಂಡಿ 10: ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ  ಕಾರ್ಯ ಚುರುಕುಗೊಂಡಿದ್ದು, ಒಟ್ಟು 2,30,006 ಮತದಾರರಲ್ಲಿ ಇದುವರೆಗೆ 2,12,486 ಮಂದಿಗೆ ಎಣಿಕೆ (ಎನ್ಯುಮರೇಷನ್) ನಮೂನೆಗಳನ್ನು ವಿತರಿಸಲಾಗಿದೆ. ಇದು ಶೇ.92.38ರಷ್ಟು ಪ್ರಗತಿಯಾಗಿದ್ದು, ಉಳಿದ ಮತದಾರರಿಗೂ ಶೀಘ್ರದಲ್ಲೇ ನಮೂನೆಗಳನ್ನು ತಲುಪಿಸಲಾಗುವುದು ಎಂದು ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ತಿಳಿಸಿದರು.  

ನಗರದ ತಾಲೂಕು ಆಡಳಿತ ಸೌಧದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಳಿದ 26,726 ಮತದಾರರಿಗೆ ನಮೂನೆ ವಿತರಿಸಲು ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಶನಿವಾರದೊಳಗೆ ಶೇ.100ರಷ್ಟು ವಿತರಣೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.   

ನಗರ ಪ್ರದೇಶದಲ್ಲಿಯೇ ಸುಮಾರು 12,400 ಮತದಾರರು ಮನೆಗಳಲ್ಲಿ ಲಭ್ಯವಾಗುತ್ತಿಲ್ಲ. ಗೀರೀಶನಗರ ಸೇರಿದಂತೆ ವಿಸ್ತರಣಾ ಪ್ರದೇಶಗಳು ಹಾಗೂ ಮತಗಟ್ಟೆ ಸಂಖ್ಯೆ 176 ಮತ್ತು 177 ವ್ಯಾಪ್ತಿಯಲ್ಲಿ ಮತದಾರರನ್ನು ಸಂಪರ್ಕಿಸಲು ತೊಂದರೆಯಾಗುತ್ತಿದೆ. ಆದ್ದರಿಂದ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಮನೆಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ಸಾರ್ವಜನಿಕರು ಸಹಕರಿಸಿ ನಮೂನೆಗಳನ್ನು ಸ್ವೀಕರಿಸಿ ಅಗತ್ಯ ಮಾಹಿತಿ ನೀಡಬೇಕು ಎಂದು ಮನವಿ ಮಾಡಿದರು.  

ಈಗಾಗಲೇ ವಿತರಿಸಲಾದ ನಮೂನೆಗಳನ್ನು ಮರಳಿ ಸಂಗ್ರಹಿಸಿ ಡಿಜಿಟೈಸೇಷನ್ ಮಾಡುವ ಕಾರ್ಯವೂ ಆರಂಭಗೊಂಡಿದ್ದು, ಶೇ.11.62ರಷ್ಟು ನಮೂನೆಗಳು ವಾಪಸ್ ಬಂದಿವೆ. ಸಾರ್ವಜನಿಕರು ನಮೂನೆಗಳನ್ನು ಭರ್ತಿ ಮಾಡಿ ಆದಷ್ಟು ಬೇಗ ಬಿಎಲ್‌ಒಗಳಿಗೆ ಸಲ್ಲಿಸುವಂತೆ ಕೋರಿದರು.  

ಮತದಾರರ ಅನುಕೂಲಕ್ಕಾಗಿ ಜಮಖಂಡಿ ನಗರದಲ್ಲಿ ಡಾ. ಬಿ.ಆರ್‌. ಅಂಬೇಡ್ಕರ್ ಭವನ, ರುದ್ರಸ್ವಾಮಿ ಪೇಟೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಶಿವಾಜಿ ವೃತ್ತದ ಪಶು ಆಸ್ಪತ್ರೆ ಆವರಣ, ಎಪಿಎಂಸಿ ಸಮೀಪದ ಮಂಗಲ ಕಾರ್ಯಾಲಯ, ಚೌಡಯ್ಯನಗರ ಅಂಗನವಾಡಿ ಕೇಂದ್ರ, ಶಾಲಂ ಗೇಟ್ ಪೊಲೀಸ್ ಚೌಕಿ, ಅರಣ್ಯ ಇಲಾಖೆ ಕಚೇರಿ, ರಾಣಡೆ ಭವನ, ಮೀನುಗಾರಿಕೆ ಇಲಾಖೆ ಕಚೇರಿ ಹಾಗೂ ಚೆನ್ನಮ್ಮ ಮಾರ್ಕೆಟ್ನ ನಗರಸಭೆ ಸಂಕೀರ್ಣ ಸೇರಿದಂತೆ 10 ಮತದಾರರ ಸಹಾಯ ಕೇಂದ್ರಗಳನ್ನು ತೆರೆಯಲಾಗಿದೆ.  

ಇದೇ ವೇಳೆ ಗ್ರಾಮೀಣ ಭಾಗದ 27 ಗ್ರಾಮ ಪಂಚಾಯಿತಿಗಳಲ್ಲಿಯೂ ಮತದಾರರ ಸಹಾಯ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಅವರು ಮನವಿ ಮಾಡಿದರು.  ಸುದ್ದಿಗೋಷ್ಠಿಯಲ್ಲಿ ತಹಶೀಲ್ದಾರ್ ಅನೀಲ ಬಡಿಗೇರ ಉಪಸ್ಥಿತರಿದ್ದರು. 


ಸುದ್ದಿ ಓದಿ