ಮಕ್ಕಳಿಗೆ ಸಂಸ್ಕಾರ ನೀಡುವ ವಿಶೇಷ ಶಿಬಿರ

ಮಕ್ಕಳಿಗೆ ಸಂಸ್ಕಾರ ನೀಡುವ ವಿಶೇಷ ಶಿಬಿರ Special camp for giving rituals to children

ಲೋಕದರ್ಶನ ವರದಿ 

ಧಾರವಾಡ 02: ಭಾರತೀಯ ದಿವ್ಯಪರಂಪರೆಯನ್ನು ನಮ್ಮ ಸಂಸ್ಕಾರ ಹಾಗೂ ಸಂಸ್ಕೃತಿಯಲ್ಲಿ ದಿವ್ಯನುಡಿಗಳ ಪಾಲನೆಗಳು ಅಡಗಿವೆ. ಅವು ನಮ್ಮ ಜೀವನವನ್ನು ಎತ್ತರಕ್ಕೆ ಒಯ್ದು ಅರ್ಥಪೂರ್ಣತೆ ಒದಗಿಸುವ ಸೋಪಾನಗಳು. ನಮ್ಮ ಬಾಳನ್ನು ಪವಿತ್ರಗೊಳಿಸುವ ಮಾರ್ಗಗಳು, ಇಡೀ ಜನಜೀವನದ ಮೌಲ್ಯಗಳನ್ನು ರಕ್ಷಿಸಿ ಸನ್ಮಾರ್ಗದತ್ತ ಕಂಡೂಯ್ಯುವ ಪಥಗಳು. ಅವು ನಮ್ಮ ಜೀವನಕ್ಕೆ ಅರ್ಥಪೂರ್ಣತೆ ಕಲ್ಲಿಸಿ ಯಶಸ್ಸು ತಂದು ಕೊಡುತ್ತವೆ. ನಮ್ಮ ಸಂಸ್ಕಾರ-ನಮ್ಮ ಸಂಸ್ಕೃತಿ, ನಮ್ಮ ಜೀವನದ ದೊಡ್ಡ ನಿಧಿಗಳು. ಆದರೆ ಇಂದಿನ ಬದಲಾಗುತ್ತಿರುವ ಜೀವನ ಶೈಯಲ್ಲಿ ನಮ್ಮ ಸಂಸ್ಕಾರಗಳು-ಸಂಸ್ಕೃತಿಗಳು ಮಾಯವಾಗುತ್ತವೆ. ಆಯೋಮಯ ವಾತಾವರಣದಲ್ಲಿ ನಮ್ಮ ಭಾರತೀಯ ದಿವ್ಯ ಪರಂಪರೆಯು ಕೂಡ ಕಣ್ಮರೆಯಾಗುತ್ತಿದೆ. ನಮ್ಮ ಬಹುಮುಖ್ಯವಾದ ತತ್ವ ನೀತಿಗಳನ್ನು ಕಳೆದುಕೊಂಡರೆ ಮುಂದಿನ ಪೀಳಿಗೆಯ ಗತಿಯೇನು ಎಂಬ ಪ್ರಶ್ನೆ ಕಾಡುತ್ತಿದೆ. ನಮ್ಮ ಮಕ್ಕಳಿಗೆ ಎಳೆಯರಿಗೆ ನಮ್ಮ ಭಾರತ ದೇಶದ ಸಂಪ್ರದಾಯಗಳ, ಪದ್ಧತಿಗಳ, ಆಚರಣೆಗಳ ಅರ್ಥ ವಿವರಣೆ ಹೇಳಲು ಹಿಂದೇಟು ಹಾಕುತ್ತಿದ್ದೇವೆ. 

ಈ ಪರಿಸ್ಥಿತಿಯಲ್ಲಿ ನಮ್ಮ ಎಳೆಯರು ಹೇಗೆ ನಮ್ಮ ಸಂಸ್ಕೃತಿ-ಸಂಸ್ಕಾರಗಳಲ್ಲಿ ಮುಂದುವರೆಯಲು, ಸಂಸ್ಕಾರ ಭಾರತಿ ಧಾರವಾಡ ಶಾಖೆಯು ಮೇ 13 ರಿಂದ 24 ರವರೆಗೆ ಸಂಸ್ಕಾರ-ಸಂಸ್ಕೃತಿ ಮಕ್ಕಳ ಬೇಸಿಗೆ ಶಿಬಿರವನ್ನು ಧಾರವಾಡದ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಸಂಸ್ಕೃತ ಪಾಠಶಾಲಾದಲ್ಲಿ ಹಮ್ಮಿಕೊಂಡಿತ್ತು. ತೈತ್ತರಿಯ ಉಪನಿಷತ್ತಿನಲ್ಲಿ ಬರುವ ಪಂಚಕೋಶಗಳ ಯೋಗಕ್ಷೇಮದ ಆಧಾರದ ಮೇಲೆ ಶಿಬಿರ ಚಟುವಟಿಕೆಗಳನ್ನು ರೂಪಿಸಿದ್ದರು. ಅನ್ನಮಯ ಕೋಶಕ್ಕಾಗಿ ಆಟ ಯೋಗಾಸನಗಳಿದ್ದರೆ, ಪ್ರಾಣಮಯ ಕೋಶಕ್ಕಾಗಿ ಧ್ಯಾನ, ಪ್ರಾಣಾಯಾಮ ಹಾಗೂ ಮನೋಮಯ ಕೋಶಗಳಿಗಾಗಿ ರಂಗೋಲಿ, ಚಿತ್ರಕಲೆ ಮತ್ತು ವಿಜ್ಞಾನಮಯಕೋಶದ ಆರೈಕೆಗಾಗಿ ಪುರಾಣ ಕಥೆಗಳು, ನೀತಿ ಪಾಠಗಳನ್ನು ಸಂಪನ್ಮೂಲ ವ್ಯಕ್ತಿಗಳು ವ್ಯವಸ್ಥಿತವಾಗಿ ಮಕ್ಕಳಿಗೆ ನೀಡಿದರು. ಈ ಶಿಬಿರದಲ್ಲಿ 40 ಮಕ್ಕಳು ಖುಷಿಯಿಂದ ಭಾಗವಹಿಸಿದ್ದರು. 

ಪ್ರತಿ ದಿನ ಮಕ್ಕಳು ಮುಂಜಾನೆ 9 ಗಂಟೆಗೆ ಶಿಬಿರಕ್ಕೆ ಬಂದಕೂಡಲೇ ಕುಂಕುಮ ಹಣೆಗೆ ಹಚ್ಚಿಕೊಂಡು, ಭಾರತಮಾತೆಯ ಭಾವಚಿತ್ರಕ್ಕೆ ನಮಸ್ಕರಿಸಿ, ಕುಳಿತುಕೊಳ್ಳುವದನ್ನು ರೂಢಿ ಮಾಡಿಕೊಂಡರು. ಓಂಕಾರ ಮತ್ತು ಶ್ಲೋಕ ಪಠಣದೊಂದಿಗೆ ಶಿಬಿರವು ಪ್ರಾರಂಭವಾಗುತ್ತಿತ್ತು. ನಂತರ ಮಕ್ಕಳ ಮನೋವಿಕಾಸಕ್ಕಾಗಿ ಪುರಾಣದ ಕಥೆಗಳು, ಮಹಾಪುರುಷರ ಕಥೆಗಳು ಮತ್ತು ನೀತಿ ಕಥೆಗಳನ್ನು ಶಿಬಿರದ ಸಂಚಾಲಕಿ ಶಿಲ್ಪ ಪಾಂಡೆ ಹೇಳಿಕೊಡುತ್ತಿದ್ದರು. ಶಿಬಿರದ ಸಹ ಸಂಚಾಲಕಿ ವೈಶಾಲಿ ರಸಾಳಕರ ಮಕ್ಕಳಿಗೆ ದೇಶಭಕ್ತಿಗಳನ್ನು ಪಠಣ ಮಾಡಿಸುತ್ತಿದ್ದರು. ಶಿಬಿರದ ಸಂಚಾಲಕ ಸುಧೀರ ಫಡ್ನೀಸ್ ಅವರು ಚಿತ್ರಕಲೆ, ರಂಗೋಲಿ ಹಾಗೂ ಕರಕುಶಲ ವಸ್ತುಗಳ ತಯಾರಿಸುವ ತರಬೇತಿಯನ್ನು ನೀಡಿದರು. ಡಾ.ಶ್ರೀಧರ ಕುಲಕರ್ಣಿ ಹಾಗೂ ವೀರಣ್ಣ ಪತ್ತಾರ ಅವರು ಜಾನಪದ ಗೀತೆ, ಪರಿಸರ ಗೀತೆ ಹಾಗೂ ಭಕ್ತಿ ಗೀತೆಗಳನ್ನು ಹೇಳಿಕೊಟ್ಟರು. 

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಡಾ.ಸೌಭಾಗ್ಯ ಕುಲಕರ್ಣಿ, ಡಾ.ಶೃತಿ ಕೌಲಗುಡ್ಡ ಅವರು ಆರೋಗ್ಯದ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಿದರು. ಡಾ. ಶಶಿಧರ ನರೇಂದ್ರ ಅವರು ಉಪ ನಿಷತ್ತುಗಳ ಕಥೆಗಳು, ಡಾ.ಕೃಷ್ಣ ಕಟ್ಟಿ ಅವರು ಬೇಂದ್ರೆಯವರ ಶಿಶುಗೀತೆಗಳು, ಶಶಿಕಲಾ ಜೋಶಿ ಅವರು ಯಕ್ಷಗಾನ ಕಲೆ ಹಾಗೂ ಉಮೇಶ ನಾಯಕ್ ಅವರು ರಂಗ ಕಲೆಯ ಬಗ್ಗೆ ಶಿಬಿರದುದ್ದಕ್ಕೂ ಮಕ್ಕಳಿಗೆ ಪರಿಚಯ ಮಾಡಿಸಿದರು. ಧಾರವಾಡ ಸಂಸ್ಕಾರ ಭಾರತೀಯ ಕಾರ್ಯದರ್ಶಿ ಪ್ರಸಾದ ಮಡಿವಾಳರರು ಮಕ್ಕಳಿಗೆ ಸಂಗೀತ ಉಪಕರಣಗಳ ಪರಿಚಯ ಮಾಡಿಸಿಕೊಟ್ಟರೆ, ರಾಜಶ್ರೀ ದೇಸಾಯಿ ಮತ್ತು ಪ್ರೀತಿ ಛಿಪ್ರೆ ಅವರು ಪ್ರತಿನಿತ್ಯ ಮಕ್ಕಳನ್ನು ಯೋಗಾಭ್ಯಾಸದಲ್ಲಿ ತೊಡಗಿಸಿದರು. ಶಾಂತಿ ಮಂತ್ರದೊಂದಿಗೆ ನಿತ್ಯದ ಶಿಬಿರ ಮುಕ್ತಾಯಗೊಳ್ಳುತ್ತಿತ್ತು. 

ಶಿಬಿರದ ಪಾಲನಾಧಿಕಾರಿಯಾಗಿ ಡಾ.ಬಿ.ಎಂ.ಶರಭೇಂದ್ರಸ್ವಾಮಿ, ಮಾರ್ಗದರ್ಶಕರಾಗಿ ಪ್ರಾಂತ ಕಾರ್ಯದರ್ಶಿ ಡಾ.ಶಶಿಧರ ನರೇಂದ್ರ ಹಾಗೂ ಶ್ರೀನಿವಾಸ, ಸಹಾಯಕ ಸಂಚಾಲಕರಾಗಿ ವೈಶಾಲಿ ರಸಾಳಕರ ಮತ್ತು ಪರಿಮಳಾ ಕಾಗಲಕರ, ಶಿಬಿರದ ಸಂರಕ್ಷಕರಾಗಿ ಕೃಷ್ಣ ಬಾಗಲವಾಡ ಮತ್ತು ರಮೇಶ ನಾಡಗೇರ ಹಾಗೂ ಸಂಸ್ಕಾರ ಭಾರತಿ ಧಾರವಾಡ ಶಾಖೆಯ ಎಲ್ಲರೂ ಶಿಬಿರದ ಯಶಸ್ವಿಗಾಗಿ ಶ್ರಮಿಸಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಪ್ರಚಾರಕ ಸು.ರಾಮಣ್ಣ ಮುಖ್ಯ ಅತಿಥಿಗಳಾಗಿ ಆಗಮಿಸಿ, ಮಕ್ಕಳಿಗ ಸಂಸ್ಕಾರ ಮತ್ತು ಸಂಸ್ಕೃತಿಯ ಮೌಲ್ಯಗಳನ್ನು ಬಾಲ್ಯದಲ್ಲೇ ತಿಳಿಸಲು ಹಾಗೂ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಶಿಬಿರಗಳು ಪೂರಕ, ಅಲ್ಲದೇ ಪೋಷಕರೂ ಹೆಚ್ಚಿನ ಆಸಕ್ತಿ ವಹಿಸಿದ್ದು, ಮಕ್ಕಳಿಗ ಜೀವನದ ಅರಿವು ಮೂಡಿಸುವದು ಅಗತ್ಯವಾಗಿದೆ ಎಂದು ಹೇಳಿದರು. ಈರ‌್ವರೂ ವಿದ್ಯಾರ್ಥಿಗಳು ‘ಶಿಬಿರದಲ್ಲಿ ಸಿಗುವ ಸ್ವಾತಂತ್ರ್ಯ, ಕಲಿಕೆ ಶಾಲೆಗಳಲ್ಲೂ ನಿರಂತರವಾಗಿ ಸಿಗಬೇಕು. ಹೊಸತನದ ಕಲಿಕೆಗಾಗಿ ನಾವು ದಿನದಿಂದ ದಿನಕ್ಕೆ ಕುತೂಹಲದಿಂದ ಕಾಯುತ್ತಿದ್ದೆವು’ ಎಂದು ತಮ್ಮ ಮನದಾಳದ ಅನಿಸಿಕೆಗಳನ್ನು ಹಂಚಿಕೊಂಡರು. 

ಇಂದಿನ ಆಧುನಿಕ ಯುಗದಲ್ಲಿ ಹಣಕ್ಕೆ ಮೊದಲ ಆದ್ಯತೆ ನೀಡುವ ಕಾಲದಲ್ಲಿ, ಧಾರವಾಡದ ಸಂಸ್ಕಾರ ಭಾರತೀಯು 40 ಮಕ್ಕಳಿಗೆ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಸಂಸ್ಕೃತ ಪಾಠಶಾಲಾದಲ್ಲಿ ಕೇವಲ 100/- ರೂ.ಗಳ ಶುಲ್ಕದೊಂದಿಗೆ ಬೇಸಿಗೆ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಿತು. ಕೇವಲ ಮೋಜು-ಮಸ್ತಿಗೆ ಸೀಮಿತವಾಗದೆ, ಮಕ್ಕಳಲ್ಲಿ ಮಾನವೀಯ ಮೌಲ್ಯಗಳು ಸಂಸ್ಕೃತಿ, ದೇಶಭಕ್ತಿ ಮತ್ತು ರಾಷ್ಟ್ರಧರ್ಮದ ಅರಿವು ಮೂಡಿಸುವಲ್ಲಿ ಯಶಸ್ವಿಯಾಯಿತು. ಮಕ್ಕಳು ಹನ್ನೇರಡು ದಿನಗಳ ಕಾಲ ಸಾಂಸ್ಕೃತಿಕ ಲೋಕದಲ್ಲಿ ವಿಹರಿಸಿದರು. ಸಮಾರೋಪ ಸಮಾರಂಭದಲ್ಲಿ ಮಕ್ಕಳು ತಮ್ಮ ಪ್ರತಿಭೆಯನ್ನು ಅನಾವಣಗೊಳಿಸಿದರು. ಮಕ್ಕಳ ಸಂಭ್ರಮ ನೋಡಿ ಪಾಲಕರು ಖುಷಿಪಟ್ಟರು. ಇಂತಹ ಶಿಬಿರಗಳು ಮುಂದಿನ ದಿನಗಳಲ್ಲಿ ಎಲ್ಲಾ ಮಕ್ಕಳಿಗೂ ದೊರೆಯುವಂತಾಗಲಿ.