ಶಿವಾನುಭವಗಳಿಂದ ಸಾಮಾಜಿಕ ಸಮೃದ್ಧಿ ಸಾಧ್ಯ: ನಿಡಸೋಸಿ

ಶಿವಾನುಭವಗಳಿಂದ ಸಾಮಾಜಿಕ ಸಮೃದ್ಧಿ ಸಾಧ್ಯ: ನಿಡಸೋಸಿ  Social prosperity is possible through Shiva experiences: Nidasaosi

ಲೋಕದರ್ಶನ ವರದಿ 

ಬೆಳಗಾವಿ ಜೂನ್ 2: ಶಿವಾನುಭವ ಸತ್ಸಂಗಗಳು ಕೇವಲ ಧಾರ್ಮಿಕ ಕಾರ್ಯಕ್ರಮಗಳಲ್ಲ; ಅವು ವ್ಯಕ್ತಿಯ ಆತ್ಮೋನ್ನತಿ, ಸಮಾಜದ ಸೌಹಾರ್ದತೆ ಹಾಗೂ ಮಾನವೀಯ ಮೌಲ್ಯಗಳ ವಿಕಾಸಕ್ಕೆ ಪೂರಕವಾಗುವ ಆಧ್ಯಾತ್ಮಿಕ ಅನುಭವ ಮಂಟಪಗಳಾಗಿವೆ ಎಂದು ನಿಡಸೋಸಿ ದುರದುಂಡೀಶ್ವರ ಸಿದ್ಧ ಸಂಸ್ಥಾನ ಮಠದ ಪೂಜ್ಯ ಡಾ. ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು. ನಗರದ ಐತಿಹಾಸಿಕ ಕಾರಂಜಿಮಠದಲ್ಲಿ ಅತ್ಯಂತ ಭಕ್ತಿ, ಶ್ರದ್ಧೆ ಹಾಗೂ ಸಂಭ್ರಮದ ವಾತಾವರಣದಲ್ಲಿ ಜರುಗಿದ ಮೂರನೂರನೇ ಶಿವಾನುಭವ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಶಿವಾನುಭವ ಸತ್ಸಂಗಗಳಿಂದ ವ್ಯಕ್ತಿಯ ಆತ್ಮಕಲ್ಯಾಣದ ಜೊತೆಗೆ ಸಾಮಾಜಿಕ ಜಾಗೃತಿ, ನೈತಿಕ ಮೌಲ್ಯಗಳು ಹಾಗೂ ಪರಸ್ಪರ ಪ್ರೀತಿ ವೃದ್ಧಿಯಾಗುತ್ತದೆ ಎಂದು ಹೇಳಿದರು.“ಮಠಗಳು ಕೇವಲ ಪೂಜಾ ಕೇಂದ್ರಗಳಲ್ಲ; ಅವು ಸಮಾಜದ ಚಿಂತನೆ, ಸಂಸ್ಕಾರ ಹಾಗೂ ಸೇವಾ ಪರಂಪರೆಯನ್ನು ಉಳಿಸಿಕೊಂಡಿರುವ ಜೀವಂತ ಅನುಭವ ಮಂಟಪಗಳಾಗಿವೆ.  

ಕಾರಂಜಿಮಠದಲ್ಲಿ ಕಳೆದ ಮೂರು ದಶಕಗಳಿಂದ ನಿರಂತರವಾಗಿ ಶಿವಾನುಭವ ದಾಸೋಹ ಸೇವೆ ನಡೆದುಬರುತ್ತಿರುವುದು ಅತ್ಯಂತ ಶ್ಲಾಘನೀಯ ಮತ್ತು ಅನುಕರಣೀಯ ಕಾರ್ಯವಾಗಿದೆ” ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಖಡಕಲಾಟ ವಿರಕ್ತಮಠದ ಪೂಜ್ಯ ಶಿವಬಸವ ಸ್ವಾಮಿಗಳು ಮಾತನಾಡಿ, ಶಿವಾನುಭವ ಪರಂಪರೆಯು ಹನ್ನೆರಡನೇ ಶತಮಾನದ ಬಸವಾದಿ ಶರಣರ ಕಾಲದಿಂದ ಆರಂಭಗೊಂಡು ನಿಜಗುಣ ಶಿವಯೋಗಿ, ಅಥಣಿ ಶಿವಯೋಗಿ ಹಾಗೂ ಹಾನಗಲ್ ಕುಮಾರ ಶಿವಯೋಗಿಗಳ ಮೂಲಕ ನಿರಂತರವಾಗಿ ಸಾಗುತ್ತಾ ಇಂದಿಗೂ ನಾಡಿನ ಅನೇಕ ಮಠಗಳಲ್ಲಿ ಆಧ್ಯಾತ್ಮಿಕ ಬೆಳಕನ್ನು ಹರಡುತ್ತಿದೆ ಎಂದು ಹೇಳಿದರು.“ಇಂದಿನ ಯಾಂತ್ರಿಕ ಜೀವನದಲ್ಲಿ ಮಾನವನಿಗೆ ಶಾಂತಿ, ನೆಮ್ಮದಿ ಮತ್ತು ಮೌಲ್ಯಯುತ ಬದುಕಿನ ಅಗತ್ಯ ಹೆಚ್ಚಾಗಿದೆ.  

ಇಂತಹ ಸಂದರ್ಭದಲ್ಲಿ ಶಿವಾನುಭವ ಗೋಷ್ಠಿಗಳು ಜನರಲ್ಲಿ ಆಧ್ಯಾತ್ಮಿಕ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿವೆ. ಕಾರಂಜಿಮಠದಲ್ಲಿ ಕಳೆದ ಇಪ್ಪತ್ತಾರು ವರ್ಷಗಳಿಂದ ಪ್ರತಿತಿಂಗಳು ನಿರಂತರವಾಗಿ ಶಿವಾನುಭವ ಗೋಷ್ಠಿ ನಡೆಯುತ್ತಿರುವುದು ಅತ್ಯಂತ ಸಂತಸದ ಹಾಗೂ ಶ್ಲಾಘನೀಯ ಸಂಗತಿ” ಎಂದು ಅವರು ತಿಳಿಸಿದರು.ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ತಾಳಿಕೋಟಿಯ ಸಿದ್ಧಲಿಂಗ ದೇವರು, ಮಾನವ ಜೀವನದ ಮೌಲ್ಯಗಳನ್ನು ಪ್ರತಿಪಾದಿಸುತ್ತಾ, “ಮನುಷ್ಯನು ರಾಗ-ದ್ವೇಷ, ಅಹಂಕಾರ ಮತ್ತು ಭೇದಭಾವಗಳನ್ನು ತೊರೆದು ಎಲ್ಲರೊಂದಿಗೆ ಪ್ರೀತಿ, ಸ್ನೇಹ, ಸೌಹಾರ್ದತೆ ಮತ್ತು ಸಹಬಾಳ್ವೆಯಿಂದ ಬದುಕುವುದೇ ಜೀವನದ ನಿಜವಾದ ಸಾರ್ಥಕತೆ” ಎಂದು ಹೇಳಿದರು. ಅವರ ಉಪನ್ಯಾಸವು ನೆರೆದಿದ್ದ ಭಕ್ತರಲ್ಲಿ ಚಿಂತನೆಗೆ ಪ್ರೇರಣೆ ನೀಡಿತು.ಇದೇ ಸಂದರ್ಭದಲ್ಲಿ ಇಂಡೋನೇಷ್ಯಾ ದೇಶದಲ್ಲಿ ನಡೆದ ಅಂತಾರಾಷ್ಟ್ರೀಯ ರೋಬೋಟ್ ತಂತ್ರಜ್ಞಾನ ಸ್ಪರ್ಧೆಯಲ್ಲಿ ಭಾರತಕ್ಕೆ ಕೀರ್ತಿ ತಂದು ಪ್ರಥಮ ಸ್ಥಾನ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಾದ ಕು. ವಿಠ್ಠಲ ಗದಗ ಹಾಗೂ ಕು. ಸುಶಾಂತ ಬಂಡಿವಡ್ಡರ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಅವರಿಗೆ ಮಾರ್ಗದರ್ಶನ ನೀಡಿ ಸಾಧನೆಗೆ ಪ್ರೇರಣೆಯಾದ ಶಿಕ್ಷಕರಾದ ದಯಾನಂದ ಮಗದುಮ್ಮ ಅವರನ್ನೂ ಗೌರವಿಸಲಾಯಿತು.  

ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಕಾರಂಜಿಮಠದ ಪೂಜ್ಯ ಗುರುಸಿದ್ಧ ಮಹಾಸ್ವಾಮಿಗಳು ಶ್ರೀಮಠದ ವತಿಯಿಂದ ಶಾಲು, ಫಲಪುಷ್ಪ ನೀಡಿ ಸನ್ಮಾನಿಸಿ ಅಭಿನಂದಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಕುಮಾರೇಶ್ವರ ಸಂಗೀತ ಶಾಲೆಯ ವಿದ್ಯಾರ್ಥಿಗಳು ಮನಮುಟ್ಟುವ ವಚನ ಪ್ರಾರ್ಥನೆ ಸಲ್ಲಿಸಿ ಭಕ್ತಿಮಯ ವಾತಾವರಣ ನಿರ್ಮಿಸಿದರು. ಪ್ರಕಾಶ ಗಿರಿಮಲ್ಲನವರ ಆತ್ಮೀಯವಾಗಿ ಸ್ವಾಗತಿಸಿದರು. ಎ.ಕೆ. ಪಾಟೀಲ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ವಿ.ಕೆ. ಪಾಟೀಲ ವಂದಿಸಿದರು. ಈ ಸಂದರ್ಭದಲ್ಲಿ ಡಾ. ಎಫ್‌.ವಿ. ಮಾನ್ವಿ, ಬಸವರಾಜ ಹಳಿಂಗಳಿ, ಶ್ರೀಕಾಂತ ಶಾನವಾಡ, ಮಿಥುನ ಅಂಕಲಿ ಸೇರಿದಂತೆ ಹಲವಾರು ಗಣ್ಯರು, ಭಕ್ತರು ಹಾಗೂ ಶಿವಾನುಭವಾಸಕ್ತರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾದರು.