ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ರಾನಿಲ್ ವಿಕ್ರಮ ಸಿಂಘೆ ಆಯ್ಕೆ
ಕೊಲಂಬೊ: ಜುಲೈ 20 :ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ದ್ವೀಪ ರಾಷ್ಟ್ರ ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ರಾನಿಲ್ ವಿಕ್ರಮ ಸಿಂಘೆ ಆಯ್ಕೆಯಾಗಿದ್ದಾರೆ.
ದೇಶದಲ್ಲಿ ವ್ಯಾಪಕ ಪ್ರತಿಭಟನೆಗಳ ನಂತರ ಗೋತಬಯ ರಾಜಪಾಕ್ಸ ಅವರು ಉನ್ನತ ಹುದ್ದೆಗೆ ರಾಜೀನಾಮೆ ನೀಡಿದ ನಂತರ ರಾನಿಲ್ ವಿಕ್ರಮ ಸಿಂಘೆ ಅವರು ಹಂಗಾಮಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು.
ಬುಧವಾರ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಭಿನ್ನಮತೀಯ ನಾಯಕ ಡಲ್ಲಾಸ್ ಅಲಹಪ್ಪೆರುಮಾ ಮತ್ತು ಎಡಪಂಥೀಯ ಜನತಾ ವಿಮುಕ್ತಿ ಪೆರಮುನ (ಜೆವಿಪಿ) ನಾಯಕ ಅನುರ ಕುಮಾರ ದಿಸಾನಾಯಕೆ ಅವರನ್ನು ಸೋಲಿಸಿ ರಾನಿಲ್ ವಿಕ್ರಮ ಸಿಂಘೆ ಅಧ್ಯಕ್ಷರಾಗಿ ಹೊರಹೊಮ್ಮಿದ್ದಾರೆ.
ಮೂರು ಸ್ಪರ್ಧಿಗಳ ಪೈಕಿ ಮುಂದಿನ ಅಧ್ಯಕ್ಷರನ್ನು ಆಯ್ಕೆ ಮಾಡಲು ಶ್ರೀಲಂಕಾದ ಶಾಸಕರು ಬುಧವಾರ ಸಂಸತ್ತಿನಲ್ಲಿ ಮತದಾನ ಮಾಡಿದ್ದು, ರಾನಿಲ್ ವಿಕ್ರಮ ಸಿಂಘೆ ದ್ವೀಪ ರಾಷ್ಟ್ರವನ್ನು ದುರ್ಬಲ ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟಿನಿಂದ ಕಾಪಾಡಬಹುದೆಂದು ಆಶಿಸಿದರು.