ನನಗೆ ಫೋನ್ ಮಾಡಿದ್ರು, ಇಂದು ಅಧ್ಯಕ್ಷರು ರಾಜೀನಾಮೆ ಸಲ್ಲಿಸುತ್ತಾರೆ; ಶ್ರೀಲಂಕಾ ಸ್ಪೀಕರ್
ಕೊಲಂಬೊ: ಜುಲೈ 13 : ಬುಧವಾರ ಮಾಲ್ಡೀವ್ಸ್ ಗೆ ಪಲಾಯನ ಮಾಡಿರುವ ಶ್ರೀಲಂಕಾ ಅಧ್ಯಕ್ಷ ಗೋತಬಯ ರಾಜಪಕ್ಸೆ ಅವರು ದ್ವೀಪ ರಾಷ್ಟ್ರದಲ್ಲಿ ತೀವ್ರ ಪ್ರತಿಭಟನೆ ಎದುರಿಸ್ತಿದ್ದು ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ. ಸಂಸತ್ತಿನ ಸ್ಪೀಕರ್‌ಗೆ ದೂರವಾಣಿ ಕರೆ ಮಾಡಿ ತಮ್ಮ ರಾಜೀನಾಮೆ ಪತ್ರವನ್ನು ಕಳುಹಿಸಲಾಗುವುದು ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ.
“ಅಧ್ಯಕ್ಷರು ನನ್ನೊಂದಿಗೆ ದೂರವಾಣಿಯಲ್ಲಿ ಸಂಪರ್ಕದಲ್ಲಿದ್ದಾರೆ ಮತ್ತು ಅವರ ರಾಜೀನಾಮೆ ಪತ್ರವನ್ನು ಇಂದು ನನಗೆ ಕಳಿಸುವುದಾಗಿ ಖಚಿತಪಡಿಸಿದ್ದಾರೆ” ಎಂದು ಸ್ಪೀಕರ್ ಮಹಿಂದ ಯಾಪಾ ಅಬೇವರ್ಧನ ವೀಡಿಯೊ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಜುಲೈ 20 ರಂದು ಹೊಸ ಅಧ್ಯಕ್ಷರನ್ನು ನೇಮಿಸಲು ನಾವು ರೂಪಿಸಿರುವ ಸಂಸದೀಯ ಪ್ರಕ್ರಿಯೆಯಲ್ಲಿ ವಿಶ್ವಾಸ ಹೊಂದಲು ಮತ್ತು ಶಾಂತಿಯುತವಾಗಿರಲು ನಾನು ಸಾರ್ವಜನಿಕರಲ್ಲಿ ಮನವಿ ಮಾಡುತ್ತೇನೆ ಎಂದು ಸ್ಪೀಕರ್ ಹೇಳಿದ್ದಾರೆ.
ಇಂದು ಲಂಕಾ ಅಧ್ಯಕ್ಷರ ಪಲಾಯನ ಖಚಿತಗೊಳ್ತಿದ್ದಂತೆ ಸಾವಿರಾರು ಜನರು ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರ ಕಚೇರಿಗೆ ನುಗ್ಗಿದ್ದರಿಂದ ಅಶ್ರುವಾಯು ಶೆಲ್‌ಗಳನ್ನು ಹಾರಿಸಲಾಯಿತು. ಹೆಚ್ಚುತ್ತಿರುವ ಪ್ರತಿಭಟನೆಯನ್ನು ನಿಯಂತ್ರಿಸಲು ಕೊಲಂಬೊ ಸೇರಿದಂತೆ ಪಶ್ಚಿಮ ಪ್ರಾಂತ್ಯದಾದ್ಯಂತ ಅನಿರ್ದಿಷ್ಟ ಕರ್ಫ್ಯೂ ವಿಧಿಸಲಾಗಿದೆ. ಗಲಭೆಕೋರರನ್ನು ಬಂಧಿಸುವಂತೆ ಪ್ರಧಾನಿ ಭದ್ರತಾ ಪಡೆಗಳಿಗೆ ಆದೇಶಿಸಿದ್ದಾರೆಂದು ಅವರ ಕಚೇರಿ ತಿಳಿಸಿದೆ.
ಕೊಲಂಬೊದಲ್ಲಿನ ತನ್ನ ಅಧಿಕೃತ ನಿವಾಸಕ್ಕೆ ಪ್ರತಿಭಟನಾಕಾರರು ನುಗ್ಗುವ ಮುನ್ನವೇ ಪಲಾಯನ ಮಾಡಿದ ನಂತರ ಅಧ್ಯಕ್ಷ ಗೊಟಾಬಯ ರಾಜಪಕ್ಸೆ ಬುಧವಾರ ರಾಜೀನಾಮೆ ನೀಡುವುದಾಗಿ ಮತ್ತು ಶಾಂತಿಯುತ ಅಧಿಕಾರದ ಪರಿವರ್ತನೆಗೆ ದಾರಿ ಮಾಡಿಕೊಡುವುದಾಗಿ ವಾರಾಂತ್ಯದಲ್ಲಿ ಭರವಸೆ ನೀಡಿದ್ದರು. ಆದರೆ ಈಗ ದೇಶ ಬಿಟ್ಟಿದ್ದು ಇಂದು ರಾಜೀನಾಮೆ ನೀಡುವುದಾಗಿ ಖಚಿತಪಡಿಸಿದ್ದರೆನ್ನಲಾಗಿದೆ.