ಅಂತರರಾಷ್ಟ್ರೀಯ

ಪಾಕಿಸ್ತಾನ: 9 ಬಲೂಚ್ ಪ್ರತ್ಯೇಕತಾವಾದಿಗಳ ಹತ್ಯೆ, ಒಬ್ಬ ಪಾಕ್ ಯೋಧ ಸಾವು

ಪಾಕಿಸ್ತಾನ: 9 ಬಲೂಚ್ ಪ್ರತ್ಯೇಕತಾವಾದಿಗಳ ಹತ್ಯೆ, ಒಬ್ಬ ಪಾಕ್ ಯೋಧ ಸಾವು

ಇಸ್ಲಾಮಾಬಾದ್: ಜುಲೈ 16 : ಪಾಕಿಸ್ತಾನದಲ್ಲಿ ವಾರದ ಹಿಂದೆ ಅಪಹರಣಕ್ಕೊಳಗಾದ ಸೇನಾಧಿಕಾರಿ ಲೆಫ್ಟಿನೆಂಟ್ ಕರ್ನಲ್ ಲೈಕ್ ಬೇಗ್ ಮಿರ್ಜಾ ಅವರ ಹತ್ಯೆಯ ಬಳಿಕ ಬಲೂಚ್ ಪ್ರತ್ಯೇಕತಾವಾದಿಗಳ ವಿರುದ್ಧದ ಕಾರ್ಯಾಚರಣೆಯನ್ನು ಪಾಕಿಸ್ತಾನ ಸೇನೆ ತೀವ್ರಗೊಳಿಸಿದೆ. ಈ ಕಾರ್ಯಾಚರಣೆಯಲ್ಲಿ ಬರೋಬ್ಬರಿ ಒಂಭತ್ತು ಬಲೂಚ್ ಪ್ರತ್ಯೇಕತಾವಾದಿಗಳನ್ನು ಹತ್ಯೆ ಮಾಡಿ ಪಾಕಿಸ್ತಾನ ಸೇನೆ ಸೇಡು ತೀರಿಸಿಕೊಂಡಿದೆ. ಇದೇ ವೇಳೆ ಪಾಕಿಸ್ತಾನ ಸೇನೆ ಓರ್ವ ಯೋಧನನ್ನು ಕಳೆದುಕೊಂಡಿದೆ ಎಂದು ಡಾನ್ ಪತ್ರಿಕೆ ಇಂದು ಈ ಮಾಹಿತಿ ನೀಡಿದೆ.

ಕರ್ನಲ್ ಲೈಕ್ ಬೇಗ್ ಮಿರ್ಜಾ ತನ್ನ ಕುಟುಂಬದೊಂದಿಗೆ ಜಿಯಾರತ್‌ನಿಂದ ಕ್ವೆಟ್ಟಾಗೆ ಪ್ರಯಾಣಿಸುತ್ತಿದ್ದಾಗ ಭಯೋತ್ಪಾದಕರು ಅವರನ್ನು ಅಪಹರಿಸಿದ್ದರು. ಬಳಿಕ ಕರ್ನಲ್ ಲೈಕ್ ಬೇಗ್ ಮಿರ್ಜಾನನ್ನು ಹತ್ಯೆ ಮಾಡಲಾಗಿತ್ತು.

ಪಾಕಿಸ್ತಾನ ಸೇನೆಯ ಮಾಧ್ಯಮ ವಿಭಾಗ ಇಂಟರ್ ಸರ್ವಿಸಸ್ ಪಬ್ಲಿಕ್ ರಿಲೇಶನ್ಸ್ (ಐಎಸ್‌ಪಿಆರ್) ಗುರುವಾರ ತಡರಾತ್ರಿ ಜಿಯಾರತ್ ಬಳಿಯ ಬೆಟ್ಟಗಳಲ್ಲಿ ಪ್ರತ್ಯೇಕತಾವಾದಿಗಳ ಅಡಗುತಾಣದ ಮೇಲೆ ಭದ್ರತಾ ಪಡೆಗಳು ದಾಳಿ ನಡೆಸಿವೆ ಎಂದು ಹೇಳಿದೆ. ಈ ವೇಳೆ ಸೇನೆ ಹಾಗೂ ಪ್ರತ್ಯೇಕತಾವಾದಿಗಳ ಮಧ್ಯೆ ಗುಂಡಿನ ಚಕಮಕಿ ನಡೆಯಿತು. ಬಳಿಕ ಐವರು ಪ್ರತ್ಯೇಕತಾವಾದಿಗಳು ಹಾಗೂ ಒಬ್ಬ ಪಾಕ್ ಯೋಧ ಹತ್ಯೆಯಾದರು ಎಂದು ತಿಳಿಸಿದೆ.

ಇದರ ನಂತರ, ಜಿಯಾರತ್ ಡ್ರೈನ್ ಬಳಿ ಪ್ರತ್ಯೇಕತಾವಾದಿಗಳ ಮತ್ತೊಂದು ಗುಂಪು ಹಾಗೂ ಭದ್ರತಾ ಪಡೆಗಳ ಮಧ್ಯೆ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ಉಗ್ರರು ಎಂದು ಹೇಳುತ್ತಿರುವ ಪಾಕಿಸ್ತಾನ ಸೇನೆ, ನಾಲ್ವರು ಪ್ರತ್ಯೇಕತಾವಾದಿಗಳನ್ನು ಹತ್ಯೆ ಮಾಡಿದೆ. ಈ ಮಧ್ಯೆ, ಎರಡೂ ಕಡೆಯಿಂದ ಅಪ್ರಚೋದಿತ ಗುಂಡಿನ ದಾಳಿಯ ನಡುವೆ ಉಗ್ರರು ಕತ್ತಲೆಯಲ್ಲಿ ಉಮರ್ ಜಾವೇದ್‌ನೊಂದಿಗೆ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

ಸುದ್ದಿ ಓದಿ