ದಲಿತ ಯುವಕ ರವಿಚಂದ್ರ ಹತ್ಯೆ ಖಂಡಿಸಿ ಬೃಹತ್ ಪ್ರತಿಭಟನೆ
Massive protest condemning the murder of Dalit youth Ravichandra
ತಾಳಿಕೋಟಿ 01 : ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲೂಕಿನ ಹಂಗರಗಿ ಕ್ರಾಸ್ ಬಳಿ ಇತ್ತೀಚೆಗೆ ನಡೆದ ದಲಿತ ಯುವಕ ರವಿಚಂದ್ರ ಮಾದರ ಹತ್ಯೆಯ ಪ್ರಮುಖ ಆರೋಪಿಗಳನ್ನು ಬಂಧಿಸಿ, ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆಗಾಗಿ ಪ್ರಕರಣವನ್ನು ಸಿಬಿಐಗೆ ವಹಿಸಿಕೊಡಬೇಕೆಂದು ಸರ್ಕಾರಕ್ಕೆ ಆಗ್ರಹಿಸಿ ಪಟ್ಟಣದಲ್ಲಿ ಸೋಮವಾರ ಅಂಬೇಡ್ಕರ್ ಸೇನೆ ನೇತೃತ್ವದಲ್ಲಿ ವಿವಿಧ ದಲಿತ ಪರ ಸಂಘಟನೆಗಳ ಪದಾಧಿಕಾರಿಗಳು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. ಪಟ್ಟಣದ ಪ್ರವಾಸಿ ಮಂದಿರದ ಮುಂಭಾಗದಿಂದ ಹಲಗೆ ಬಾರಿಸುವುದರೊಂದಿಗೆ ಆರಂಭಗೊಂಡ ಪ್ರತಿಭಟನಾ ಮೆರವಣಿಗೆಯು ಶ್ರೀ ಬಸವೇಶ್ವರ ವೃತ್ತ, ಡಾ.ಅಂಬೇಡ್ಕರ್ ವೃತ್ತ, ಕತ್ರಿ ಬಜಾರ್ ಮಾರ್ಗವಾಗಿ ಶಿವಾಜಿ ವೃತ್ತ, ಮಹಾರಾಣಾ ಪ್ರತಾಪ ಸಿಂಹ ವೃತ್ತ, ಬಸ್ ನಿಲ್ದಾಣದ ಮಾರ್ಗವಾಗಿ ತಹಶೀಲ್ದಾರ್ ಕಾರ್ಯಾಲಯದ ಆವರಣಕ್ಕೆ ತಲುಪಿತು. ಪ್ರತಿಭಟನಾ ಮೆರವಣಿಗೆ ಉದ್ದಕ್ಕೂ ಸರ್ಕಾರದ ವೈಫಲ್ಯದ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನಾಕಾರರು ತಮ್ಮ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದರು.
ತಹಸಿಲ್ದಾರ್ ಕಾರ್ಯಾಲಯದ ಆವರಣದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ದಲಿತ ಮುಖಂಡರಾದ ಎ.ಬಿ.ದೊಡ್ಮನಿ, ಬಸವರಾಜ ಸಿದ್ದಾಪೂರ, ಬಾಲಚಂದ್ರ ಹುಲ್ಲೂರ, ಬಸ್ಸು ಮಾದರ ಹಾಗೂ ರಮೇಶ ದೊಡಮನಿ ಘಟನೆ ಖಂಡಿಸಿ ಮಾತನಾಡಿದರು. ದಲಿತ ಯುವಕ ರವಿಚಂದ್ರ ಮಾದರನ ಬರ್ಬರ ಹತ್ಯೆಯ ಘಟನೆ ನಡೆದು ಏಳು ದಿನಗಳಾದರೂ ಪ್ರಕರಣದಲ್ಲಿ ಭಾಗಿಯಾದ ಪ್ರಮುಖ ಆರೋಪಿಗಳನ್ನು ಇನ್ನೂ ಬಂದಿಸಿಲ್ಲ. ಈ ಪ್ರಕರಣದ ಪ್ರಮುಖ ಸೂತ್ರಧಾರಿ ಗುತ್ತಿಗೆದಾರ ಮಲ್ಲಿಕಾರ್ಜುನ್ ಮದರಿ ಆಗಿದ್ದಾರೆ ಎಂದು ಆರೋಪಿಸಿದ ಮುಖಂಡರು ಅವರು ಆರ್ಥಿಕ ಹಾಗೂ ರಾಜಕೀಯವಾಗಿ ಪ್ರಭಾವಿ ವ್ಯಕ್ತಿ ಆಗಿರುವುದರಿಂದ ಪೋಲಿಸ್ ಅಧಿಕಾರಿಗಳು ಅವರನ್ನು ಇಲ್ಲಿಯವರೆಗೆ ಬಂಧಿಸಿಲ್ಲ ಇದು ನ್ಯಾಯಕ್ಕೆ ಬಗೆಯುವ ಅಪಚಾರವಾಗಿದೆ ಇವತ್ತು ದಲಿತರ ಜೀವಕ್ಕೆ ಯಾವ ಬೆಲೆಯೂ ಇಲ್ಲದಂತಹ ವಾತಾವರಣ ನಿರ್ಮಾಣವಾಗಿದೆ ಎಂದ ಅವರು ಇನ್ನು ಮೂರ ನಾಲ್ಕು ದಿನಗಳ ಒಳಗಾಗಿ ಈ ಪ್ರಕರಣದ ಪ್ರಮುಖ ಆರೋಪಿಗಳನ್ನು ಬಂಧಿಸದೆ ಹೋದಲ್ಲಿ ನಾವು ಇದರ ವಿರುದ್ಧ ಜಿಲ್ಲೆಯಾದ್ಯಂತ ಉಗ್ರವಾದ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಹತ್ಯೆಯ ಪ್ರಮುಖ ಆರೋಪಿಗಳನ್ನು ಆದಷ್ಟು ಬೇಗ ಬಂಧಿಸಿ, ಪ್ರಕರಣವನ್ನು ಸಿಬಿಐಗೆ ವಹಿಸಿಕೊಡಬೇಕೆಂದು ಆಗ್ರಹಿಸಿ ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ಉಪ ತಹಸಿಲ್ದಾರ ಅನೀಲ ಚೌಹಾಣ ಅವರಿಗೆ ಸಲ್ಲಿಸಲಾಯಿತು. ಮನವಿಯಲ್ಲಿ ಕೊಲೆ ಪ್ರಕರಣದ ಎಲ್ಲಾ ಆರೋಪಿಗಳನ್ನು ತಕ್ಷಣ ಬಂಧಿಸಬೇಕು. ಸಾಕ್ಷಿದಾರರು ಹಾಗೂ ಮೃತರ ಕುಟುಂಬಕ್ಕೆ ಸೂಕ್ತ ರಕ್ಷಣೆ ಒದಗಿಸಬೇಕು. ಪ್ರಮುಖ ಆರೋಪಿ ಸಾಕ್ಷಿಗಳನ್ನು ನಾಶಗೊಳಿಸಿದಂತೆ ನೋಡಿಕೊಳ್ಳಬೇಕು. ಗುತ್ತಿಗೆದಾರ ಆರೋಪಿ ಮದರಿಯ ಗುತ್ತಿಗೆ ಪರವಾನಗಿಯನ್ನು ಸರ್ಕಾರ ತಕ್ಷಣದಿಂದಲೇ ರದ್ದು ಪಡಿಸಬೇಕು. ಸಂತ್ರಸ್ತ ಕುಟುಂಬಕ್ಕೆ ಸೂಕ್ತ ಆರ್ಥಿಕ ಪರಿಹಾರ ನೀಡಬೇಕು ಅವರ ಕುಟುಂಬದ ಒಬ್ಬ ವ್ಯಕ್ತಿಗೆ ಸರ್ಕಾರಿ ಉದ್ಯೋಗ ನೀಡಬೇಕು ಅಗತ್ಯವಿದ್ದಲ್ಲಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿಕೊಡಬೇಕು ಎಂದು ಆಗ್ರಹಿಸಲಾಗಿದೆ. ಅಂಬೇಡ್ಕರ್ ಸೇನೆ ತಾಲೂಕಾಧ್ಯಕ್ಷ ಗೋಪಾಲ ಕಟ್ಟಿಮನಿ,ಜಾಂಬವ ಯುವಸೇನೆ ತಾಲೂಕಾಧ್ಯಕ್ಷ ಕಾಲಪ್ಪ ಮಾದರ, ಕರ್ನಾಟಕ ರಾಜ್ಯ ಆದಿ ಜಾಂಬವ ಸಂಘದ ದೇವಪ್ಪ ಮಾದರ, ಕರ್ನಾಟಕ ಮಾದಿಗ ದಂಡೋರ ಸಂಘದ ರಮೇಶ ಮಾದರ, ನಿವೃತ್ತ ಶಿಕ್ಷಕ ಶೇಖಪ್ಪ ಚಬನೂರ, ಯಮನಪ್ಪ ಕೆಸರಟ್ಟಿ, ದೇವಪ್ಪ ಮಾದರ ತುಂಬಗಿ ಹಾಗೂ ವಿವಿಧ ಗ್ರಾಮಗಳಿಂದ ಆಗಮಿಸಿದ ದಲಿತ ಪರ ಸಂಘಟನೆಗಳ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 