ಸಂಗಾತಿ ಕೌಟುಂಬಿಕ ಸಲಹಾ ಕೇಂದ್ರಕ್ಕೆ ಕಾನೂನು ವಿದ್ಯಾರ್ಥಿಗಳ ಶೈಕ್ಷಣಿಕ ಭೇಟಿ

ಸಂಗಾತಿ ಕೌಟುಂಬಿಕ ಸಲಹಾ ಕೇಂದ್ರಕ್ಕೆ ಕಾನೂನು ವಿದ್ಯಾರ್ಥಿಗಳ ಶೈಕ್ಷಣಿಕ ಭೇಟಿ  Law students' educational visit to the Matrimony Family Counseling Center

ಲೋಕದರ್ಶನ ವರದಿ 

ಬೆಳಗಾವಿ 29: ಮಹಿಳಾ ಕಲ್ಯಾಣ ಸಂಸ್ಥೆ, ರೀಬಿಲ್ಡ್‌ ಇಂಡಿಯಾ ಉಪಕ್ರಮದಡಿ, ಕೆಎಲ್‌ಇ ಸಂಸ್ಥೆಯ ಬಿ.ವಿ. ಬೆಲ್ಲದ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗಾಗಿ ಭಾರತ್ ಕಾಲೋನಿ, ಬೆಳಗಾವಿಯಲ್ಲಿರುವ ಸಂಗಾತಿ ಕುಟುಂಬ ಸಲಹಾ ಕೇಂದ್ರದಲ್ಲಿ ಸ್ವಯಂಸೇವಕರ ತರಬೇತಿ ಹಾಗೂ ಶೈಕ್ಷಣಿಕ ಭೇಟಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.  

ಈ ಭೇಟಿ ಕಾನೂನು ಶಿಕ್ಷಣದ ಭಾಗವಾಗಿರುವ ಕ್ಲಿನಿಕಲ್ ಕೋರ್ಸ್‌ ಹಾಗೂ ಪರ್ಯಾಯ ವಿವಾದ ಪರಿಹಾರ ವ್ಯವಸ್ಥೆ  ಕುರಿತು ಪ್ರಾಯೋಗಿಕ ಅರಿವು ಮೂಡಿಸುವ ಉದ್ದೇಶ ಹೊಂದಿತ್ತು. ಜೊತೆಗೆ, ಕೌಟುಂಬಿಕ ಹಾಗೂ ವೈವಾಹಿಕ ಸಮಸ್ಯೆಗಳ ಪರಿಹಾರದಲ್ಲಿ ಸಮಾಲೋಚನೆ, ಮಧ್ಯಸ್ಥಿಕೆ ಮತ್ತು ಕಾನೂನು ಮಾರ್ಗದರ್ಶನದ ಮೂಲಕ ಕಾನೂನು ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಪ್ರೇರೇಪಿಸಲಾಯಿತು.  

ಮುಖ್ಯ ಅತಿಥಿಯಾಗಿ ಮಾತನಾಡಿದ ಸಂಸ್ಥೆಯ ಸಂಯೋಜಕ ಎಂ.ಎಸ್‌. ಚೌಗಲಾ, ಕುಟುಂಬ ಸಮಾಲೋಚನಾ ಸೇವೆಗಳಲ್ಲಿ ತರಬೇತಿ ಪಡೆದ ಸ್ವಯಂಸೇವಕರ ಅಗತ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಯುವ ಕಾನೂನು ವೃತ್ತಿಪರರು ಸಾಮಾಜಿಕ ಸಾಮರಸ್ಯ ಮತ್ತು ನ್ಯಾಯದ ಪ್ರವೇಶವನ್ನು ಬಲಪಡಿಸುವಲ್ಲಿ ಮಹತ್ವದ ಪಾತ್ರವಹಿಸಬಹುದು ಎಂದು ತಿಳಿಸಿದರು. ಕುಟುಂಬ ಕಲಹಗಳು ಹಾಗೂ ವೈವಾಹಿಕ ಸಮಸ್ಯೆಗಳನ್ನು ಶಾಂತಿಯುತ ಮತ್ತು ರಚನಾತ್ಮಕ ರೀತಿಯಲ್ಲಿ ಪರಿಹರಿಸಲು ವಿದ್ಯಾರ್ಥಿಗಳು ಮಾರ್ಗದರ್ಶನ, ಸಂವಾದ ಮತ್ತು ಮಧ್ಯಸ್ಥಿಕೆಯ ಮೂಲಕ ಸಹಕಾರ ನೀಡಬಹುದು ಎಂದು ಹೇಳಿದರು.  

ನ್ಯಾಯವಾದಿಗಳಾದ ಅಮಿತ್ ಕೋಕಿತ್ಕರ್, ಸಂಯೋಜಕರಾದ ಶಂಕರ ಕತ್ತಿ, ಚೇತನ್ ಕುಲಕರ್ಣಿ ಉಪಸ್ಥಿತರಿದ್ದರು.  ಕಾರ್ಯಕ್ರಮದ ಕೊನೆಯಲ್ಲಿ ಸಂವಾದಾತ್ಮಕ ಚರ್ಚೆ ನಡೆಯಿತು. ವಿದ್ಯಾರ್ಥಿಗಳು ಕುಟುಂಬ ಸಂಬಂಧಗಳನ್ನು ಬಲಪಡಿಸುವ ಹಾಗೂ ಸಮಾಜದಲ್ಲಿ ಶಾಂತಿಯುತ ವಿವಾದ ಪರಿಹಾರವನ್ನು ಉತ್ತೇಜಿಸುವ ಕಾರ್ಯಗಳಲ್ಲಿ ಸ್ವಯಂಸೇವಕರಾಗಿ ಭಾಗವಹಿಸುವ ಬದ್ಧತೆಯನ್ನು ವ್ಯಕ್ತಪಡಿಸಿದರು. ಕಾನೂನು ವಿದ್ಯಾರ್ಥಿಯೊಬ್ಬರು ವಂದನಾರೆ​‍್ಣ ಸಲ್ಲಿಸಿದರು.