ಲಂಕಾ ಅಧ್ಯಕ್ಷ ಮಾಲ್ಡಿವ್ಸ್‌ಗೆ ಪರಾರಿ: ಖಚಿತಪಡಿಸಿದ ವಾಯುಪಡೆ!
ಕೊಲಂಬೊ: ಜುಲೈ 13: ಅಧ್ಯಕ್ಷ ಗೊಟಾಬಯ ರಾಜಪಕ್ಸೆ ಮತ್ತು ಅವರ ಕುಟುಂಬಕ್ಕೆ ಬುಧವಾರ ಮುಂಜಾನೆ ದೇಶದಿಂದ ಮಾಲ್ಡೀವ್ಸ್‌ಗೆ ತೆರಳಲು ವಿಮಾನವನ್ನು ಒದಗಿಸಲಾಗಿದೆ ಎಂದು ಶ್ರೀಲಂಕಾದ ವಾಯುಪಡೆ ಬುಧವಾರ ದೃಢಪಡಿಸಿದೆ. ಬಂಡಾರುನಾಯಕ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅವರು ವಿಮಾನ ಪ್ರಯಾಣ ಆರಂಭಿಸಿದರು ಎಂದು ಅದು ತಿಳಿಸಿದೆ.
ಡೈಲಿ ಮಿರರ್ ಪ್ರಕಾರ ಶ್ರೀಲಂಕಾದ ಅಧ್ಯಕ್ಷರಿಗೆ ಸಂವಿಧಾನದಡಿ ವಹಿಸಲಾದ ಅಧಿಕಾರಗಳಿಗೆ ಅನುಗುಣವಾಗಿ ಮತ್ತು ರಕ್ಷಣಾ ಸಚಿವಾಲಯದ ಸಂಪೂರ್ಣ ಅನುಮೋದನೆಯೊಂದಿಗೆ, ವಲಸೆ, ಕಸ್ಟಮ್ಸ್ ಅಡಿಯಲ್ಲಿ ಪ್ರಸ್ತುತ ಸರ್ಕಾರದ ಕೋರಿಕೆಯ ಮೇರೆಗೆ ಅವರಿಗೆ ಈ ವಿಮಾನ ಸೇವೆಯನ್ನು ನೀಡಲಾಗಿದೆ ಎಂದು ವಾಯುಪಡೆ ತಿಳಿಸಿದೆ.
ಬಿಬಿಸಿ ವರದಿಯ ಪ್ರಕಾರ, ಅವರ ಮಿಲಿಟರಿ ವಿಮಾನವು ಮಾಲ್ಡೀವ್ಸ್‌ನ ರಾಜಧಾನಿ ಮಾಲೆಯನ್ನು ತಡರಾತ್ರಿ 3 ಗಂಟೆಗೆ (ಸ್ಥಳೀಯ ಕಾಲಮಾನ) ತಲುಪಿತು. ಇಂದು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಅಧಿಕೃತವಾಗಿ ಗೋಟಾಬಯ ಘೋಷಿಸಬೇಕಿತ್ತು. ಆದರೆ, ಇದಕ್ಕೂ ಮುನ್ನವೇ ಅವರು ದೇಶ ತೊರೆದಿದ್ದಾರೆ.