ಪಾಕಿಸ್ತಾನದಲ್ಲಿ ಭೀಕರ ಮಳೆ: 165 ಮಂದಿ ಬಲಿ, 171 ಮಂದಿಗೆ ಗಾಯ
ಇಸ್ಲಾಮಾಬಾದ್: ಜುಲೈ 14 : ಜೂನ್ 14 ರಂದು ಪಾಕಿಸ್ತಾನದಲ್ಲಿ ಆರಂಭವಾದ ಮುಂಗಾರು ಪೂರ್ವ ಮಳೆಗೆ ಸಂಬಂಧಿಸಿದ ಪ್ರತ್ಯೇಕ ಘಟನೆಗಳಲ್ಲಿ ಒಟ್ಟು 165 ಜನ ಸಾವಿಗೀಡಾಗಿದ್ದು, 171 ಮಂದಿ ಗಾಯಗೊಂಡಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್‌ಡಿಎಂಎ) ಈ ಮಾಹಿತಿ ನೀಡಿದೆ.
ದೇಶದ ನೈಋತ್ಯ ಬಲೂಚಿಸ್ತಾನ್ ಪ್ರಾಂತ್ಯವು ಅತಿ ಹೆಚ್ಚು ಪ್ರವಾಹ ಪೀಡಿತ ಪ್ರದೇಶವಾಗಿದ್ದು, ಧಾರಾಕಾರ ಮಳೆಯಿಂದಾಗಿ 65 ಜನರು ಸಾವನ್ನಪ್ಪಿದ್ದಾರೆ ಮತ್ತು 49 ಜನರು ಗಾಯಗೊಂಡಿದ್ದಾರೆ. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಇಲ್ಲಿ ಏಕಾಏಕಿ ಪ್ರವಾಹದ ಪರಿಸ್ಥಿತಿ ಉಂಟಾಗಿದೆ.
ಇಲ್ಲಿನ ಸ್ಥಳೀಯ ಮಾಧ್ಯಮಗಳು ಹಲವಾರು ಅಣೆಕಟ್ಟು ಒಡೆದ ಘಟನೆಗಳನ್ನು ವರದಿ ಮಾಡಿದೆ. ಇದರಲ್ಲಿ ಅನೇಕ ಮನೆಗಳು ಮತ್ತು ಮೂಲಸೌಕರ್ಯಗಳು ಕೊಚ್ಚಿಹೋಗಿವೆ.
ಮುಂದಿನ ಒಂದು ತಿಂಗಳ ಕಾಲ ಈ ಪ್ರಾಂತ್ಯದಲ್ಲಿ ಇದೇ ರೀತಿಯ ಮಳೆಯಾಗುವ ಮುನ್ಸೂಚನೆಯನ್ನು ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಇಲ್ಲಿ ಸೆಕ್ಷನ್ 144 ವಿಧಿಸಲಾಗಿದೆ ಎಂದು ಬಲೂಚಿಸ್ತಾನ ಪ್ರಾಂತದ ಮುಖ್ಯಮಂತ್ರಿ ಕಚೇರಿ ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಿದೆ. ಇದರಡಿ ಜನರು ನದಿಗಳು, ಅಣೆಕಟ್ಟುಗಳು ಮತ್ತು ಇತರ ಜಲಮೂಲಗಳ ಬಳಿ ಪ್ರವಾಸಕ್ಕೆ ತೆರಳುವುದನ್ನು ನಿಷೇಧಿಸಲಾಗಿದೆ.
ಇನ್ನು ಕರಾಚಿ ಸೇರಿದಂತೆ ಸಿಂಧ್ ಪ್ರಾಂತ್ಯದಲ್ಲಿ ಸಂಭವಿಸಿದ ಪ್ರತ್ಯೇಕ ಅವಘಡಗಳಲ್ಲಿ ಕನಿಷ್ಠ 38 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈ ಪ್ರದೇಶದಲ್ಲಿ ಒಂದು ವಾರಕ್ಕೂ ಅಧಿಕ ಕಾಲ ಭಾರೀ ಮಳೆ ವಿಪರೀತ ಹಾನಿಯನ್ನುಂಟುಮಾಡಿದೆ.
ಕಳೆದ 13 ದಿನಗಳಿಂದ ಸಿಂಧ್ ಮತ್ತು ಬಲೂಚಿಸ್ತಾನ್ ದಲ್ಲಿ ಭಾರೀ ಮಳೆ ಸುರಿಯುತ್ತಿದೆ ಎಂದು ದೇಶದ ಹವಾಮಾನ ಬದಲಾವಣೆ ಸಚಿವ ಶೆರ್ರಿ ರೆಹಮಾನ್ ಬುಧವಾರ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಈ ಅವಧಿಯಲ್ಲಿ ಕಳೆದ 30 ವರ್ಷಗಳ ಸರಾಸರಿಗಿಂತ ಕ್ರಮವಾಗಿ ಶೇ.625 ಮತ್ತು ಶೇ.501ರಷ್ಟು ಹೆಚ್ಚು ಮಳೆಯಾಗಿದೆ ಎಂದು ಹೇಳಿದ್ದಾರೆ.
ಎನ್‌ಡಿಎಂಎ ಪ್ರಕಾರ, ಭಾರೀ ಮಳೆಯಿಂದಾಗಿ ದೇಶದ ವಾಯುವ್ಯ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ 24, ಪೂರ್ವ ಪಂಜಾಬ್ ಪ್ರಾಂತ್ಯದಲ್ಲಿ 23 ಮತ್ತು ದೇಶದ ಇತರ ಭಾಗಗಳಲ್ಲಿ 15 ಜನರು ಸಾವನ್ನಪ್ಪಿದ್ದಾರೆ. ಇದಲ್ಲದೆ, ಪಂಜಾಬ್‌ನಲ್ಲಿ 61, ಬಲೂಚಿಸ್ತಾನದಲ್ಲಿ 49, ಖೈಬರ್ ಪಖ್ತುಂಖ್ವಾದಲ್ಲಿ 37 ಮತ್ತು ದೇಶದ ಇತರ ಭಾಗಗಳಲ್ಲಿ 24 ಸೇರಿದಂತೆ 171 ಜನರು ಗಾಯಗೊಂಡಿದ್ದಾರೆ.
ಮಳೆಯಿಂದಾಗಿ ದೇಶದ ವಿವಿಧ ಭಾಗಗಳಲ್ಲಿ ಒಟ್ಟು 1,319 ಜಾನುವಾರುಗಳು ಸಾವಿಗೀಡಾಗಿದ್ದು, ಇದೇ ಅವಧಿಯಲ್ಲಿ ಸುಮಾರು 350 ಮನೆಗಳು ಸಂಪೂರ್ಣವಾಗಿ ಮತ್ತು 781 ಇತರವುಗಳು ಭಾಗಶಃ ನಾಶವಾಗಿವೆ.