ಕುಕನೂರ್

ಗುರುವಿನ ಗುಲಾಮನಾಗಬೇಕು ಅಂದಾಗ ಮುಕ್ತಿ: ಮಹಾಸ್ವಾಮಿಗಳು

ಗುರುವಿನ ಗುಲಾಮನಾಗಬೇಕು ಅಂದಾಗ ಮುಕ್ತಿ: ಮಹಾಸ್ವಾಮಿಗಳು

ಕುಕನೂರ 13: ಗುರುವನ್ನು ಬ್ರಹ್ಮ, ವಿಷ್ಣು, ಮಹೇಶ್ವರರಿಗೆ ಹೋಲಿಸಲಾಗಿದೆ, ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂದು ದಾರ್ಶನಿಕರು ಹೇಳಿದ್ದಾರೆ ಎಂದು ಯಲಬುರ್ಗಾ ಪಟ್ಟಣದ ಶ್ರೀಷಬ್ರ ಸಿದ್ದರಾಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು. 

ಅವರು ಪಟ್ಟಣದ ಮುಂಡರಗಿ ಅನ್ನದಾನೀಶ್ವರ ಮಠದಲ್ಲಿ ಗುರು ಪೂರ್ಣಿಮ ಅಂಗವಾಗಿ ನಡೆದ ಐದು ಜನ ಪೂಜ್ಯರ ಪಾದಪೂಜೆ ಮತ್ತು ಗುರುವಂದನಾ ಸಮಾರಂಭದ ಸಾನೀದ್ಯ ವಹಿಸಿ ಮಾತನಾಡುತ್ತಾ ಮನುಷ್ಯನ ಜೀವನದ ಮೌಲ್ಯಗಳು, ಜೀವನದ ಅರ್ಥ, ಗುರಿ ಆ ಗುರಿಯನ್ನು ಸಾಧಿಸಲು ಇರುವ ಮಾರ್ಗ ಮುಂತಾದವುಗಳನ್ನು ಗುರುವಿನ ಮಾರ್ಗದರ್ಶನವಿಲ್ಲದೆ ತಿಳಿಯಲು ಸಾಧ್ಯವಿಲ್ಲ. ಪ್ರಪಂಚದ ಮಹಾನ್ ವ್ಯಕ್ತಿಗಳು, ದಾರ್ಶನಿಕರು, ಸಂತರು, ರಾಜಕೀಯ ಮುತ್ಸದ್ದಿಗಳ ಜೀವನದ ವಿವಿಧ ಹಂತಗಳನ್ನು ಗಮನಿಸಿದಾಗ ಅವರ ಜೀವನದ ಪ್ರತಿ ಹಂತದಲ್ಲಿ ಮಾರ್ಗದರ್ಶಕರಾಗಿ ಒಬ್ಬ ಗುರು ಜೊತೆಗಿದ್ದನೆಂದು ತಿಳಿಯುತ್ತದೆ ಎಂದರು 

ನಂತರ ಮಾತನಾಡಿದ ಯಲಬುರ್ಗಾದ ಶ್ರೀ ಷ ಬ್ರ ಬಸವಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಮನಸ್ಸು ಎಲ್ಲ ಕಡೆಗೂ ಓಡುತ್ತಿರುತ್ತದೆ. ಆದರೆ ಅಂತಹ ಮನಸ್ಸಿಗೆ ಸರಿಯಾದ ದಾರಿ ತೋರುವ, ಬುದ್ದಿಯನ್ನು ಉಪಯೋಗಿಸಿ ಸಮಾಜಕ್ಕೆ ಒಳಿತು ಮಾಡುವ ಮಾರ್ಗದರ್ಶನ ತೋರಿಸುವ ಶಕ್ತಿಯಿರುವುದು ಕೇವಲ ಗುರುವಿನಲ್ಲಿ ಮಾತ್ರ. ಪುರಾಣದ ಕತೆಗಳನ್ನು ನೋಡಿದರೆ ನಮ್ಮ ಪ್ರಾಚೀನರು ಗುರುಗಳಿಗೆ ಎಂತಹ ಮಹತ್ವವನ್ನು ನೀಡಿದ್ದರು ಎಂದು ತಿಳಿಯುತ್ತದೆ. ಮಹಾಭಾರತ, ರಾಮಾಯಣದಂತಹ ಬೃಹತ್ ಕಾವ್ಯಗಳು ನಮ್ಮ ಪೂರ್ವಜರ ಜೀವನಕ್ರಮ, ಸಂಸ್ಕೃತಿ ಅವರು ನಂಬಿದ್ದ, ಗೌರವಿಸುತ್ತಿದ್ದ ಮೌಲ್ಯಗಳನ್ನು ತಿಳಿಸುತ್ತವೆ. ಶ್ರೀರಾಮಚಂದ್ರನು ಮರ್ಯಾದಾ ಪುರುಷೋತ್ತಮ ಎಂದು ಕರೆಸಿಕೊಳ್ಳಲು ಆತನಿಗೆ ಜೀವನದ ವಿವಿಧ ಹಂತಗಳಲ್ಲಿ ದೊರೆತ ಗುರುಗಳೇ ಕಾರಣ. ಅವರ ಮಾರ್ಗದರ್ಶನವೇ ಆತನನ್ನು ಆದರ್ಶ ಪುರುಷನನ್ನಾಗಿ ರೂಪಿಸಿದವು ಎಂದರು. 

ಈ ಸಂದರ್ಭದಲ್ಲಿ ಬೆದವಟ್ಟಿ ಹಿರೇಮಠದ ಶಿವಸಂಗಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಮಂಗಳೂರು ಗ್ರಾಮದ ಶ್ರೀ ಷ ಬ್ರ ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಯುಲಬುರ್ಗಾ ಪಟ್ಟಣದ ಉಭಯ ಪೂಜ್ಯರು ಮತ್ತು ಶ್ರೀಮಠದ ಪೂಜ್ಯ ಮಹಾದೇವ ದೇವರ ಪಾದಪೂಜೆ ಮತ್ತು ಗುರುವಂದನೆ ನಡೆಯಿತು. ಈರ​‍್ಪ ಮ್ಯಾಳಿ, ಗದಿಗೆಪ್ಪ ಪವಾಡಶೆಟ್ಟಿ, ವೀರಯ್ಯ ಉಳಾಗಡ್ಡಿಮಠ, ಜಗದೀಶಯ್ಯ ಕಳ್ಳಿಮಠ, ಶೇಖಪ್ಪ ಶಿರೂರ, ಪ್ರಭು ಶಿವಶಿಂಪರ, ಸಂಗಮೇಶ ಕಲ್ಮಠ, ಪ್ರಕಾಶ ಹತ್ತಿಕಟ್ಟಿಗಿ, ಮೇಘರಾಜ ಜಿಡಗಿ, ಧಗ್ರಾ ಯೋಜನ ಅಧಿಕಾರಿ ಶೇಖರಗೌಡ, ಶಿವಲೀಲಾ ಕರಿಗಾರ,  ಕಾವ್ಯ ಗುರುಮಠ, ಕಾಳಮ್ಮ ಕಳ್ಳಿಮಠ ಮತ್ತು ಧಗ್ರಾ ಯೋಜನೆಯ ಕಾರ್ಯಕರ್ತರು, ಶ್ರೀಮಠದ ಸದ್ಬಕ್ತರು ಇದ್ದರು. 


ಸುದ್ದಿ ಓದಿ