ಉತ್ತಮ ಫಲಿತಾಂಶ ಗುಣಮಟ್ಟದ ಶಿಕ್ಷಣಕ್ಕೆ ಕೈಗನ್ನಡಿಯಾಗಿದೆ : ಸುಜಾತಾ ತಿಮ್ಮಾಪೂರ

ಉತ್ತಮ ಫಲಿತಾಂಶ ಗುಣಮಟ್ಟದ ಶಿಕ್ಷಣಕ್ಕೆ ಕೈಗನ್ನಡಿಯಾಗಿದೆ : ಸುಜಾತಾ ತಿಮ್ಮಾಪೂರ Good results are a reflection of quality education: Sujatha Thimmapur

ಲೋಕದರ್ಶನ ವರದಿ 

ಧಾರವಾಡ 01 : ಒಬ್ಬ ಉತ್ತಮ ಶಿಕ್ಷಕರು ವಿದ್ಯಾರ್ಥಿಯ ಜೀವನವನ್ನು ಸಂಪೂರ್ಣವಾಗಿ ಬದಲಾಯಿಸುವ ಶಕ್ತಿ ಹೊಂದಿರುತ್ತಾರೆ. ಶಿಕ್ಷಕರ ಮಾರ್ಗದರ್ಶನವೇ ವಿದ್ಯಾರ್ಥಿಗಳ ಕನಸುಗಳಿಗೆ ಬಲವಾಗುತ್ತದೆ. ಶಿಕ್ಷಕರು ನಮ್ಮ ಮಾರ್ಗದರ್ಶಕರು, ಪ್ರೇರಕರೂ, ಸಮಾಜ ನಿರ್ಮಾತೃಗಳೂ ಆಗಿದ್ದಾರೆ. ಶಿಕ್ಷಕರ ಸ್ಥಾನ ಅತ್ಯಂತ ಪೂಜ್ಯವಾದದ್ದು. ನಮ್ಮ ಜೀವನದಲ್ಲಿ ಜ್ಞಾನ ಎಂಬ ಬೆಳಕನ್ನು ಸರಿಯಾದ ದಾರಿಯಲ್ಲಿ ನಡೆಯಲು ಶಿಕ್ಷಕರು ಸದಾ ಪ್ರೇರೇಪಿಸುತ್ತಾರೆ. ಅದೇ ರೀತಿ ವಿದ್ಯಾರ್ಥಿ ಜೀವನವು ಕೂಟ ಅತ್ಯಮೂಲ್ಯವಾದದ್ದು ಶಿಕ್ಷಕರ ಸರಿಯಾದ ಮಾರ್ಗದರ್ಶನದಿಂದ ಮಕ್ಕಳ ಜೀವನ ಹಸನಾಗಲು ಸಾಧ್ಯ ಎಂದು ಧಾರವಾಡದ ವಿದ್ಯಾಗಿರಿಯ ಜನತಾ ಶಿಕ್ಷಣ ಸಮಿತಿಯಲ್ಲಿ ಆಯೋಜಿಸಲಾಗಿದ್ದ ಜೆ.ಎಸ್‌.ಎಸ್ ನ ಎಲ್ಲ ಶಾಲೆಗಳು ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಯಲ್ಲಿ ನೂರಕ್ಕೆ ನೂರು ಪ್ರತಿಶಾತ ಫಲಿತಾಂಶ ದಾಖಲಿಸಿದ ನಿಮಿತ್ತ ಶಿಕ್ಷಕರಿಗೆ ಮತ್ತು ಎಸ್‌.ಎಸ್‌.ಎಲ್‌.ಸಿ ಯಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಧಾರವಾಡದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸುಜಾತಾ ತಿಮ್ಮಾಪೂರ ಮಾತನಾಡುತ್ತಿದ್ದರು. 

ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣಕ್ಕಾಗಿ ಶಿಕ್ಷಕರು ಹಗಲು-ರಾತ್ರಿ ಶ್ರಮಿಸುತ್ತಾರೆ. ಅವರ ಹಾಕಿಕೊಟ್ಟ ಮಾರ್ಗದಲ್ಲಿ ವಿದ್ಯಾರ್ಥಿ ನಡೆದರೆ ಅವರಿಗೆ ಸಾಧನೆ ಎಂಬುದು ಕಟ್ಟಿಟ್ಟ ಬುತ್ತಿ. ವಿದ್ಯಾರ್ಥಿಗಳ ಯಶಸ್ಸಿನ ಹಿಂದೆ ಶಿಕ್ಷಕರ ಪರಿಶ್ರಮ, ತ್ಯಾಗ ಮತ್ತು ಸಹನೆಯ ಮಹತ್ತರ ಪಾತ್ರವಿದೆ. ಅದಕ್ಕೆ ಗೌರವ ಸೂಚಿಸಬೇಕಾದುದು ವಿದ್ಯಾರ್ಥಿಗಳ ಲಕ್ಷಣ. ಈ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳ ಶ್ರೇಯಸ್ಸಿಗಾಗಿ ತಮ್ಮ ಕಾರ್ಯತತ್ಪರತೆ, ಶಿಸ್ತು ಹಾಗೂ ಸಮರಾ​‍್ಣಭಾವದಿಂದ ದುಡಿದ ಎಲ್ಲಾ ಶಿಕ್ಷಕರಿಗೆ ಹಾಗೂ ಅವರ ಪ್ರಯತ್ನವನ್ನು ಸಾಕಾರಗೊಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಜೆ.ಎಸ್‌.ಎಸ್ ಸದಾ ನೈತಿಕ ನೆಲಗಟ್ಟಿನ ಮೇಲೆ ಶಿಕ್ಷಣ ನೀಡುತ್ತಾ ಬಂದಿದ್ದು ಶಿಕ್ಷಕರ ಉತ್ತಮ ಕಾರ್ಯತತ್ಪರತೆಗೆ ಈ ಫಲಿತಾಂಶವೇ ಸಾಕ್ಷಿಯಾಗಿದೆ ಎಂದರು. 

ಜೆ.ಎಸ್‌.ಎಸ್ ನ ಕಾರ್ಯದರ್ಶಿಗಳಾದ ಡಾ. ಅಜಿತ ಪ್ರಸಾದರವರು ಮಾತನಾಡಿ ನಮ್ಮ ಜೆ.ಎಸ್‌.ಎಸ್ ನ ಐದು ಶಾಲೆಗಳ ಫಲಿತಾಂಶ ಈ ಬಾರಿ ನೂರಕ್ಕೆ ನೂರಷ್ಟಾಗಿದ್ದು ಅತ್ಯಂತ ಸಂತಸದ ವಿಚಾರ. ನಮ್ಮ ಶಿಕ್ಷಕರು ಮತ್ತು ಮಕ್ಕಳು ನಮ್ಮ ಸಂಸ್ಥೆಯ ಜೀವಾಳ. ಶಿಕ್ಷಕರು ಕೇವಲ ಪುಸ್ತಕದ ಪಾಠವನ್ನೇ ಕಲಿಸುವುದಿಲ್ಲ, ಶಿಸ್ತು, ಸಂಸ್ಕಾರ, ನೈತಿಕ ಮೌಲ್ಯಗಳು ಮತ್ತು ಜೀವನದ ಪಾಠಗಳನ್ನು ಸಹ ಕಲಿಸುತ್ತಾರೆ. ವಿದ್ಯಾರ್ಥಿಗಳು ಶಿಕ್ಷಕರನ್ನು ಗೌರವದಿಂದ ಕಾಣಬೇಕು. ಶಿಕ್ಷಕರ ಸಲಹೆಗಳನ್ನು ಪಾಲಿಸಿ, ಅವರ ಮಾರ್ಗದರ್ಶನದಲ್ಲಿ ಮುಂದೆ ಸಾಗಬೇಕು. ಹಾಗೆಯೇ ಶಿಕ್ಷಕರು ವಿದ್ಯಾರ್ಥಿಗಳನ್ನು ಪ್ರೀತಿಯಿಂದ, ಸಹನೆಯಿಂದ, ಒಳ್ಳೆಯ ಮನೋಭಾವದಿಂದ ನೋಡಿಕೊಳ್ಳಬೇಕು. ಪ್ರೀತಿ ಮತ್ತು ನಂಬಿಕೆಯ ಮೇಲೆ ನಿರ್ಮಾಣವಾಗುವ ಶಿಕ್ಷಕ-ವಿದ್ಯಾರ್ಥಿ ಸಂಬಂಧವೇ ಉತ್ತಮ ಶಿಕ್ಷಣದ ಮೂಲವಾಗಿದೆ. ಒಬ್ಬ ವಿದ್ಯಾರ್ಥಿಯ ಯಶಸ್ಸಿನ ಹಿಂದೆ ಶಿಕ್ಷಕರ ಪರಿಶ್ರಮ ಅಡಗಿರುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಎದುರಾಗುವ ಅನೇಕ ಸವಾಲುಗಳನ್ನು ದಾಟಲು ಶಿಕ್ಷಕರು ದಾರಿ ತೋರಿಸುತ್ತಾರೆ. ಉತ್ತಮ ಶಿಕ್ಷಕರಿಂದಲೇ ಉತ್ತಮ ನಾಗರಿಕರು ನಿರ್ಮಾಣವಾಗುತ್ತಾರೆ. ಶಿಕ್ಷಕ ಮತ್ತು ವಿದ್ಯಾರ್ಥಿಗಳ ಸಂಬಂಧವು ಸದಾ ಗೌರವ, ವಿಶ್ವಾಸ ಮತ್ತು ಪ್ರೀತಿಯಿಂದ ತುಂಬಿರಲಿ ಎಂದು ಹೇಳಿದರು. 

ಜೆ.ಎಸ್‌.ಎಸನ ಆಡಳಿತಾಧಿಕಾರಿಗಳಾದ ಅರಿಹಂತ ಪ್ರಸಾದ ಮಾತನಾಡಿ ಶಿಕ್ಷಕರು ದಿನದಿಂದ ದಿನಕ್ಕೆ ಅಪಡೆಟ್ ಆಗುತ್ತಾ ಸಾಗಬೇಕು ಪ್ರಸ್ತುತ ವಿದ್ಯಾಮಾನಗಳ ಬಗ್ಗೆ ಮಾಹಿತಿ ಹೊಂದಿರಬೇಕು ಡಿಜಿಟಲ ಯುಗವಾದ್ದರಿಂದ ಮಕ್ಕಳು ನಮಗಿಂತ ಹೆಚ್ಚಿನ ಜ್ಞಾನ ಹೊಂದಿರುವ ಸಾಧ್ಯತೆ ಇದ್ದು ಶಿಕ್ಷಕರು ಅವುಗಳನ್ನು ಮೀರಿ ಆಲೋಚನೆಗಳನ್ನು ಹೊಂದಬೇಕಾಗುತ್ತದೆ. ಇದರಿಂದ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಹೆಚ್ಚಿನ ಜ್ಞಾಣ ಪಡೆದು ಕೊಳ್ಳುವಂತೆ ಶಿಕ್ಷಕರು ಪ್ರೇರೆಪಿಸಬಹುದು ಎಂದು ಹೇಳಿದರು. ಪ್ರಾರಂಭದಲ್ಲಿ ಕು. ರೂಬಿನಾ ನದಾಫ ಪ್ರಾರ್ಥನಾ ಗೀತೆ ಹಾಡಿದರು. ಜೆ.ಎಸ್‌.ಎಸ್ ಐ.ಟಿ.ಐ ಪ್ರಾಚಾರ್ಯರಾದ ಮಹಾವೀರ ಉಪಾದ್ಯೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಧಾರವಾಡದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಉಮೇಶ ಬೊಮ್ಮಕ್ಕನವರ, ಜೆ.ಎಸ್‌.ಎಸ್ ಶಾಲೆಗಳ ಪ್ರಾಚಾರ್ಯರುಗಳಾದ ರಜನಿ ಪಾಟೀಲ್, ತ್ರಿವೇಣಿ ಆರ. ಮೈನಾವತಿ ದಿವಟೆ, ಪ್ರೇರಣಾ ಪಾತ್ರಾ, ಡಯಾನಾ ಜೋಗಿನ ಉಪಸ್ಥಿತರಿದ್ದರು. ವಾಣಿಶ್ರಿ ನಿರೂಪಿಸಿ, ವಂದಿಸಿದರು.