ಅಂತರರಾಷ್ಟ್ರೀಯ

ಇನ್ನೊಂದು ವಾರದಲ್ಲಿ ಶ್ರೀಲಂಕಾದ ಹೊಸ ಅಧ್ಯಕ್ಷರ ಆಯ್ಕೆ

ಇನ್ನೊಂದು ವಾರದಲ್ಲಿ ಶ್ರೀಲಂಕಾದ ಹೊಸ ಅಧ್ಯಕ್ಷರ ಆಯ್ಕೆ

ಕೊಲಂಬೊ:ಜುಲೈ 15:  ಸಿಂಗಾಪೂರಕ್ಕೆ ಪಲಾಯನ ಮಾಡಿರುವ ಗೋತಬಯ ರಾಜಪಕ್ಸೆ ರಾಜೀನಾಮೆ ಸಲ್ಲಿಸಿದ್ದು ಶ್ರೀಲಂಕಾ ಇನ್ನು ಏಳು ದಿನಗಳಲ್ಲಿ ಹೊಸ ಅಧ್ಯಕ್ಷರನ್ನು ಹೊಂದಲಿದೆ ಎಂದು ಸಂಸದೀಯ ಸ್ಪೀಕರ್ ಶುಕ್ರವಾರ ಹೇಳಿದರು. ಅಧ್ಯಕ್ಷ ಗೋತಬಯ ರಾಜಪಕ್ಸೆ ಅವರ ರಾಜೀನಾಮೆಯನ್ನು ದೇಶದಿಂದ ಪಲಾಯನ ಮಾಡಿದ ನಂತರ ಅಂಗೀಕರಿಸಲಾಗಿದೆ ಎಂದು ಘೋಷಿಸಿದರು.

ಗುರುವಾರದಿಂದ ಜಾರಿಗೆ ಬರುವಂತೆ ಗೋತಬಯ ರಾಜಪಕ್ಸೆ ಅವರು ಕಾನೂನುಬದ್ಧವಾಗಿ ರಾಜೀನಾಮೆ ನೀಡಿದ್ದಾರೆ ಎಂದು ಸ್ಪೀಕರ್ ಮಹಿಂದ ಯಾಪಾ ಅಬೇವರ್ದನಾ ಅವರು ಸುದ್ದಿಗಾರರಿಗೆ ತಿಳಿಸಿದರು. ರಾಜಪಕ್ಸೆ ಅವರು ರಾಜೀನಾಮೆ ನೀಡುವುದಾಗಿ ಸಿಂಗಾಪುರದಿಂದ ಸ್ಪೀಕರ್‌ಗೆ ಸೂಚನೆ ನೀಡಿದ್ದರು.

ತಮ್ಮ ದೇಶದ ಭೀಕರ ಆರ್ಥಿಕ ಬಿಕ್ಕಟ್ಟಿನಿಂದ, ಸರ್ಕಾರಿ ವಿರೋಧಿ ಪ್ರತಿಭಟನೆಗಳಿಂದ ತಪ್ಪಿಸಿಕೊಳ್ಳಲು ಸಿಂಗಾಪುರಕ್ಕೆ ಓಡಿಹೋದ ನಂತರ ಅಧ್ಯಕ್ಷರು ರಾಜೀನಾಮೆ ನೀಡಿದ್ದಾರೆ ಎಂದು ಖಚಿತಪಡಿಸುವ ಪ್ರಕಟಣೆಗಾಗಿ ಶ್ರೀಲಂಕಾದವರು ಕಾಯುತ್ತಿದ್ದರು. ಮಾಲ್ಡೀವ್ಸ್‌ನಿಂದ ಸಿಂಗಾಪುರಕ್ಕೆ ಆಗಮಿಸಿದ ನಂತರ ಗೋತಬಯ ರಾಜಪಕ್ಸೆ ಗುರುವಾರ ತಡರಾತ್ರಿ ರಾಜೀನಾಮೆ ಸಲ್ಲಿಸಿದರು.  ವಾರಾಂತ್ಯದಲ್ಲಿ ಪ್ರತಿಭಟನಾಕಾರರು ಅವರ ಅರಮನೆಯನ್ನು ಆಕ್ರಮಿಸಿದ ನಂತರ ಅವರು ಆರಂಭದಲ್ಲಿ ತಪ್ಪಿಸಿಕೊಂಡರು.

ಶ್ರೀಲಂಕಾ 1978 ರಲ್ಲಿ ಅಧ್ಯಕ್ಷೀಯ ಆಡಳಿತ ವ್ಯವಸ್ಥೆಯನ್ನು ಅಳವಡಿಸಿಕೊಂಡ ನಂತರ ರಾಜಪಕ್ಸೆ ರಾಜೀನಾಮೆ ನೀಡಿದ ಮೊದಲ ಅಧ್ಯಕ್ಷರಾಗಿದ್ದಾರೆ.

ಶ್ರೀಲಂಕಾ ಅಧ್ಯಕ್ಷರ ರೇಸ್ ನಲ್ಲಿ ಮೂವರು ಪ್ರಮುಖರಿದ್ದಾರೆ. ಸದ್ಯ ಹಂಗಾಮಿ ಅಧ್ಯಕ್ಷರಾಗಿರುವ ಪ್ರಧಾನಿ ರನಿಲ್ ವಿಕ್ರಮ ಸಿಂಘೆ ಜೊತೆಗೆ ಪ್ರಮುಖ ಪ್ರತಿಪಕ್ಷ ಸಮಗಿ ಜನ ಬಲವೇಗಯ (ಎಸ್‌ಜೆಬಿ) ಪಕ್ಷದ ನಾಯಕ ಸಜಿತ್ ಪ್ರೇಮದಾಸ (55) ಅವರು ಕಣದಲ್ಲಿರುವ ಮತ್ತೊಬ್ಬ ಸ್ಪರ್ಧಿಯಾಗಿದ್ದಾರೆ. ಇವರೊಂದಿಗೆ ಮೂರನೇ ಮುಂಚೂಣಿಯಲ್ಲಿರುವ ಮತ್ತು ಸಂಭಾವ್ಯ ಡಾರ್ಕ್ ಹಾರ್ಸ್ ಎಂದರೆ  ಮಾಜಿ ಜರ್ನಲಿಸ್ಟ್, ಎಸ್‌ಎಲ್‌ಪಿಪಿಯ ಹಿರಿಯ ಶಾಸಕರಾದ ಡಲ್ಲಾಸ್ ಅಲಹಪ್ಪೆರುಮ.

ಶ್ರೀಲಂಕಾದ ಸಂಸದೀಯ ಸ್ಪೀಕರ್ ರಾಜಪಕ್ಸೆ ಅವರ ಅಧಿಕೃತ ರಾಜೀನಾಮೆಯನ್ನು ಸ್ವೀಕರಿಸಿದ ನಂತರ ಶಾಸಕಾಂಗ ಮಂಡಳಿಯನ್ನು ಕರೆಯುತ್ತಾರೆ. ಅದರ 225 ಸದಸ್ಯರು ಮುಂದಿನ ವಾರ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಲು ಮತ ಚಲಾಯಿಸಲಿದ್ದಾರೆ. ಗೆಲ್ಲುವ ಅಭ್ಯರ್ಥಿಯು ಸಂಸತ್ತಿನೊಳಗೆ ಸರಳ ಬಹುಮತವನ್ನು ಪಡೆಯಬೇಕು. ಜೊತೆಗೆ ಪ್ರಮುಖವಾಗಿ ಸದ್ಯದ ಸ್ಥಿತಿಯಲ್ಲಿ ಲಕ್ಷಾಂತರ ಶ್ರೀಲಂಕಾದವರ ವಿಶ್ವಾಸವನ್ನು ಗಳಿಸಬೇಕಿದೆ.

ಸುದ್ದಿ ಓದಿ