ಮುಂಡರಗಿ

ಡ್ರ್ಯಾಗನ್ ಫ್ರೂಟ್ ತಿನ್ನುವುದರಿಂದ ದೇಹಕ್ಕೆ ಒಳ್ಳೆಯದು

ಡ್ರ್ಯಾಗನ್ ಫ್ರೂಟ್ ತಿನ್ನುವುದರಿಂದ ದೇಹಕ್ಕೆ ಒಳ್ಳೆಯದು

ನರೇಗಾ ಸಹಾಯದಿಂದ ಲಕ್ಷ ಲೆಕ್ಕದ ಫಸಲು ಬೆಳೆದ ರೈತ  

ಮುಂಡರಗಿ 21: ಅಂದು ಡಬ್ಬಗೊಳ್ಳಿ ಹಣ್ಣು ಎಂದೆ ಕರೆಯಲ್ಪಡುವಂತೆ ಅಂದು ಅಲ್ಲಲ್ಲಿ ಕೆಲವು ಕಡೆ ಮಾತ್ರ ಸಿಗುತ್ತಿದ್ದರೂ ಅದನ್ನು ತಿನ್ನಲು ತುಂಬಾ ಹಂಬಲಿಸುತ್ತಿದ್ದರು. ಆದರೆ ಇಂದು ಅಂದಿನ ಪಾಪಾಸುಕಳ್ಳಿ ಕುಟುಂಬದ ಸದಸ್ಯವೆಂದು ಹೇಳಲಾಗುತ್ತಿರುವ ಡ್ರ್ಯಾಗನ್ ಹಣ್ಣನ್ನು ತಮ್ಮ ಹೊಲದಲ್ಲಿಯೂ ಬೆಳೆದು ಅದರಿಂದ ಕೈತುಂಬಾ ಆದಾಯವನ್ನು ಗಳಿಸಬಹುದು.  

ಹೌದು ಗುಲಾಬಿ ಅಥವಾ ಹಳದಿ ಚರ್ಮವನ್ನು ಹೊಂದಿದ್ದಲ್ಲದೇ ಅದರ ಸುತ್ತಲೂ ಸ್ಪೈಕ್ ತರಹದ ಹಸಿರು ಎಲೆಗಳನ್ನು ಹೊಂದಿರುವ ಡ್ರ್ಯಾಗನ್ ಹಣ್ಣಿನ ರುಚಿಯು ಕಿವಿ, ಪೇರಳೆ ಮತ್ತು ಕಲ್ಲಂಗಡಿ ಹಣ್ಣಿನ ಮಿಶ್ರಿತ ರುಚಿಯಂತೆ ಇರುತ್ತದೆ ಹಾಗೂ ಅದರ ಬೀಜಗಳು ಅಡಿಕೆ ರುಚಿಯನ್ನು ಹೊಂದಿರುತ್ತವೆ. ನೋಡಲಿಕ್ಕೆ ಈ ಹಣ್ಣು ಇತರ ಹಣ್ಣುಗಳಿಗಿಂತ ವಿಭಿನ್ನವಾಗಿರುತ್ತದೆ. ಹೀಗಾಗಿ ಅತ್ಯಂತ ಲಾಭದಾಯಕವಾದ ಈ ಹಣ್ಣನ್ನು ತಾಲೂಕಿನ ಹಾರೋಗೇರಿ ಗ್ರಾಮದ ರೈತ ಮೈಲಾರೆಪ್ಪ ಚೋಳಮ್ಮನವರ ತಮ್ಮ ಒಂದು ಎಕರೆ ಜಮೀನಿನಲ್ಲಿ 2021-22ನೇ ಸಾಲಿನಲ್ಲಿ ಡ್ರ್ಯಾಗನ್ ಫ್ರೂಟ್ ಸಸಿ ನಾಟಿ ಮಾಡಿದ್ದರು. ಆಗ ಡ್ರ್ಯಾಗನ್ ಫ್ರೂಟ್ ಬೆಳೆಯಲು ಮುಂದಾದಾಗ ಕೈ ಹಿಡಿದಿದ್ದು ನರೇಗಾ ಯೋಜನೆ.   

ನರೇಗಾ ಯೋಜನೆಯಡಿ ತೋಟಗಾರಿಕೆ ಇಲಾಖೆ ಮೂಲಕ ದೊರೆತ ಸಹಾಯಧನದಿಂದ ಒಂದು ಎಕರೆಯಲ್ಲಿ 35ರೂಪಾಯಿಗೆ ಒಂದರಂತೆ 1700 ಸಸಿಗಳನ್ನು ತಂದು ನೆಟ್ಟಿದ್ದರು. ನೆಟ್ಟ ವರ್ಷ ಹೊರತು ಪಡಿಸಿದರೆ ನಂತರದ ಮೂರು ವರ್ಷಗಳಲ್ಲಿ ಕ್ರಮವಾಗಿ 1.50 ಲಕ್ಷ, 2.50 ಲಕ್ಷ ಕೈ ಸೇರಿದೆ. ಈ ವರ್ಷ ಈಗಾಗಲೇ 2.50 ಲಕ್ಷ ಆದಾಯ ಕೈ ಸೇರಿದ್ದು, ಇನ್ನು ಎರಡು ಲಕ್ಷ ರೂಪಾಯಿಗಳ ಆದಾಯದ ನೀರೀಕ್ಷೆಯಲ್ಲಿ ರೈತ ಮೈಲಾರೆಪ್ಪ ಇದ್ದಾರೆ. ಮೈಲಾರೆಪ್ಪನವರ ಮಕ್ಕಳಾದ ಮರುಳಸಿದ್ದಪ್ಪ, ಭರತ, ನಿಂಗರಾಜ ಅವರು ಸಹ ಜಮೀನಿನ ಉಸ್ತುವಾರಿಯಲ್ಲಿದ್ದು ಪ್ರತಿ ವರ್ಷದ ಮಳೆಗಾಲದ ಸಮಯದಲ್ಲಿ ಲಕ್ಷಗಳ ಲೆಕ್ಕದಲ್ಲಿ ಡ್ರ್ಯಾಗನ್ ಫ್ರೂಟ್ ಫಸಲು ಕಟಾವಿಗೆ ಬರುತ್ತಿರುವುದು ಅವರ ಹುಮ್ಮಸ್ಸನ್ನು ಇಮ್ಮಡಿಗೊಳಿಸಿದೆ.   

ಇನ್ನು ಡ್ರ್ಯಾಗನ್ ಫ್ರೂಟ್ ಸಸಿಗಳನ್ನು ತಂದು ರೈತ ಮೈಲಾರ​‍್ಪನವರು ನೆಡುವಾಗ ಈ ಭಾಗಕ್ಕೆ ಅದು ಹೊಸ ಹಣ್ಣು. ಈಗ ಡ್ರ್ಯಾಗನ್ ಫ್ರೂಟ್ ಕಟಾವಿನ ಸಮಯದಲ್ಲಿ ಕೊಂಡುಕೊಳ್ಳಲು ಹಣ್ಣಿನ ವ್ಯಾಪಾರಸ್ಥರು ಮಹಾನಗರಗಳಿಂದ ಹಾರೋಗೇರಿ ಗ್ರಾಮದ ತೋಟಕ್ಕೆ ಬರುತ್ತಿದ್ದಾರೆ. ಇದರಿಂದ ಸಾಗಣೆ ವೆಚ್ಚವು ಕಡಿಮೆಯಾಗಿದ್ದು, ಮನೆಯವರೇ ಕಟಾವಿನ ಕಾರ್ಯದಲ್ಲಿ ತೊಡಗಿಕೊಳ್ಳುತ್ತಾರೆ.   

ಅಲ್ಲದೇ ಡ್ರ್ಯಾಗನ್ ಫ್ರೂಟ್ ಅನ್ನು ಪತ್ರಿ ನಿತ್ಯ ಸೇವನೆ ಮಾಡುವುದರಿಂದ ಹಲವು ಆರೋಗ್ಯ ಸಮಸ್ಯೆಗಳಿಂದ ನೀವು ದೂರ ಇರಬುಹುದು. ಡ್ರ್ಯಾಗನ್ ಫ್ರೂಟ್ ಸುಲಭವಾಗಿ ಮಾರುಕಟ್ಟೆಯಲ್ಲಿ ಸಿಕ್ಕಿದರೂ ಅದರ ಬೆಲೆ ತುಂಬಾ ದುಬಾರಿ. ಆದರೆ, ಈ ಹಣ್ಣನ್ನ ಸೇವನೆಯಿಂದ ಹಲವು ರೀತಿಯಲ್ಲಿ ಉತ್ತಮ ಆರೋಗ್ಯವನ್ನ ನೀವು ನಿಮ್ಮದಾಗಿಸಿಕೊಳ್ಳಬಹುದು. ಡ್ರ್ಯಾಗನ್ ಹಣ್ಣಿನ ಪ್ರಯೋಜನಗಳ ಜೊತೆಗೆ, ಇದರ ಸೇವನೆಯು ಆರೋಗ್ಯವನ್ನು ಸಹ ರಕ್ಷಿಸಲು ಸಹಾಯಕವಾಗಿದೆ.  

ನರೇಗಾ ಯೋಜನೆ ಒಳಗ ಡ್ರಾಗನ್ ಫ್ರೂಟ್ ಬೆಳಿಯಾಕ ಇರುವ ಮಾಹಿತಿ ಸಿಕ್ತು. ವಿಚಾರಿಸಿದಾಗ ತಾಲೂಕು ಪಂಚಾಯತಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಅಗತ್ಯ ಮಾರ್ಗದರ್ಶನ ನೀಡಿದ್ರು. ಇದರಿಂದ ಚೊಲೊ ಆಗೇತ್ರಿ. ವರ್ಷ ಆದಾಯ ಲಕ್ಷದಾಗ ಕೈ ಸೇರಾಕತೈತ್ರಿ.  

- ಮೈಲಾರೆಪ್ಪ ಚೋಳಮ್ಮನವರ, ರೈತ  

ನರೇಗಾ ಯೋಜನೆಯ ಮೂಲಕ ಡ್ರಾಗನ್ ಫ್ರೂಟ್ ಬೆಳೆದು ರೈತ ಮೈಲಾರೆಪ್ಪ ಪ್ರತಿವರ್ಷ ಲಕ್ಷ ಲಕ್ಷ ಆದಾಯ ಗಳಿಸುತ್ತಿರುವುದು ರೈತನ ಸ್ವಾವಲಂಬನೆ. ಇದು ನರೇಗಾ ಯೋಜನೆಯ ಸಮರ್ಪಕ ಸದ್ಬಳಕೆಯಾಗಿದೆ.  

- ವಿಶ್ವನಾಥ ಹೊಸಮನಿ, 

ಕಾರ್ಯನಿರ್ವಾಹಕ ಅಧಿಕಾರಿ ತಾಪಂ, ಮುಂಡರಗಿ 


ಸುದ್ದಿ ಓದಿ