ಗದಗ 10: ಜಿಲ್ಲಾ ಪಂಚಾಯತ್ ಸಭಾಭವನ ಗದಗದಲ್ಲಿ ಮಕ್ಕಳ ರಕ್ಷಣೆ, ಬಾಲ್ಯವಿವಾಹ ನಿಷೇಧ ಹಾಗೂ ಪೋಕ್ಸೋ ಕಾಯ್ದೆ ಕುರಿತು ದಿ. 7ರಂದು ಗದಗ (ಗ್ರಾಮೀಣ/ಶಹರ) ಶಿರಹಟ್ಟಿ ಹಾಗೂ ಮುಂಡರಗಿ ತಾಲೂಕಿನ ಪ್ರೌಢಶಾಲೆ ಮುಖ್ಯೋಪಾಧ್ಯಾಯರಿಗೆ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಯಿತು.
ಗದಗ ಜಿಲ್ಲಾಧಿಕಾರಿ ಎಂ. ಜಿ ಹಿರೇಮಠ ಅವರು ಕಾಯರ್ಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಾ ಗದಗ ಜಿಲ್ಲೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಈ ವರೆಗೆ 350ಕ್ಕೂ ಹೆಚ್ಚು ಬಾಲ್ಯವಿವಾಹಗಳನ್ನು ತಡೆದು ಉತ್ತಮವಾಗಿ ಕೆಲಸ ಮಾಡುತ್ತಿದೆ. ಈ ತರಬೇತಿಯಿಂದ ಪಡೆಯುವ ಎಲ್ಲ ವಿಷಯಗಳ ಜ್ಞಾನದಿಂದ ಇನ್ನೂ ಹೆಚ್ಚು ಕಾರ್ಯಪ್ರವೃತ್ತರಾಗಿ ಕೆಲಸ ಮಾಡಿ, ಗದಗ ಜಿಲ್ಲೆಯನ್ನು ಬಾಲ್ಯವಿವಾಹ ಹಾಗೂ ಬಾಲಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಕರೆ ಕೊಟ್ಟರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಎನ್.ಹೆಚ್ ನಾಗೂರ ಅವರು ಮಾತನಾಡುತ್ತಾ ಕೇವಲ ಬೆ. 10ಗಂಟೆಯಿಂದ ಸಂಜೆ 5ಗಂಟೆಯ ರವರೆಗೆ ಅಕಾಡೆಮಿಕ್ ಕೆಲಸ ಮಾತ್ರವಲ್ಲದೇ ಮಕ್ಕಳ ಸುರಕ್ಷತೆ ಹಾಗೂ ಸಮಸ್ಯೆಗಳಿಗೆ ಸ್ಪಂದಿಸಬೇಕು, ಪಾಲಕರೊಡನೆ ನಿರಂತರ ಸಂಪರ್ಕದಲ್ಲಿದ್ದು, ಮಕ್ಕಳ ಬಗ್ಗೆ ಮಾಹಿತಿ ಹಂಚಿಕೊಳ್ಳಬೇಕು. ಶಾಲೆಯಿಂದ ಹೊರಗುಳಿದ ಮಕ್ಕಳ ಮಾಹಿತಿಯನ್ನು ಮಕ್ಕಳ ಕಲ್ಯಾಣ ಸಮಿತಿ ಗದಗ ಇವರಿಗೆ ನೀಡಬೇಕು. ಕಲಿಕೆಯಲ್ಲಿ ಹಿಂದುಳಿದ ಮಕ್ಕಳು ಶಾಲೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಮಂಜುನಾಥ ಬಮ್ಮನಕಟ್ಟಿ ಸದಸ್ಯರು ಮಕ್ಕಳ ಕಲ್ಯಾಣ ಸಮಿತಿ ಗದಗ ಇವರು ಶಾಲೆಬಿಟ್ಟ ಗಂಡು ಮಕ್ಕಳು ಬಾಲಕಾರ್ಮಿಕರಾಗಿ, ಭಿಕ್ಷುಕರಾಗಿ, ಹೆಣ್ಣು ಮಕ್ಕಳು ಬಾಲ್ಯವಿವಾಹಕ್ಕೆ ಒಳಪಡುವಂತಹ ಪ್ರಕರಣ ಹೆಚ್ಚಾಗಿ ಕಂಡು ಬರುತ್ತಿವೆ. ಇಂತಹ ಪ್ರಕರಣಗಳ ಮಾಹಿತಿಯನ್ನು ಮಕ್ಕಳ ಕಲ್ಯಾಣ ಸಮಿತಿಗೆ ಸಲ್ಲಿಸಿದರೆ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ಹೇಳಿದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾದ ಭಾರತಿ ಶೆಟ್ಟರ ಇಂದಿನ ಮಕ್ಕಳ ಸ್ಥಿತಿ-ಗತಿ, ಬಾಲನ್ಯಾಯ ಮಂಡಳಿ ಸದಸ್ಯ ಜಿ.ಸಿ ರೇಶ್ಮಿ ಬಾಲನ್ಯಾಯ ಕಾಯ್ದೆ, ಶಿರಮೇಶ ಕಳ್ಳಿಮನಿ ದತ್ತು ಕಾರ್ಯಕ್ರಮ, ಪ್ರಕಾಶ ವಾಲಿ ಪೊಕ್ಸೋ ಕಾಯ್ದೆ ಹಾಗೂ ಅನುಪಮಾ ಹಿರೇಗೌಡರ ಬಾಲ್ಯವಿವಾಹ ನಿಷೇಧ ಕಾಯ್ದೆ ಕುರಿತು ಉಪನ್ಯಾಸ ನೀಡಿದರು. ಬಾಲಮಂದಿರ ಮಕ್ಕಳು ಪ್ರಾರ್ಥಿಸಿದರು. ಭಾರತಿ ಶೆಟ್ಟರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಲ್ಲಪ್ಪ ಹೊಸಳ್ಳಿ ನಿರೂಪಿಸಿದರು. ರೂಪಾ ಉಪ್ಪಿನ ವಂದಿಸಿದರು.