ಅಮೆರಿಕದಲ್ಲಿ 2 ವಿಮಾನಗಳ ಮಧ್ಯೆ ಡಿಕ್ಕಿ, ನಾಲ್ವರು ಸಾವು
ವಾಷಿಂಗ್ಟನ್: ಜುಲೈ 18 : ಯುಎಸ್‌ನ ನಾರ್ತ್ ಲಾಸ್ ವೇಗಾಸ್ ವಿಮಾನ ನಿಲ್ದಾಣದಲ್ಲಿ ಎರಡು ಸಣ್ಣ ವಿಮಾನಗಳ ಮಧ್ಯೆ ಡಿಕ್ಕಿ ಸಂಭವಿಸಿ ಕನಿಷ್ಠ ನಾಲ್ವರು ಸಾವನ್ನಪ್ಪಿದ್ದಾರೆ.
ವಿಮಾನ ಲ್ಯಾಂಡಿಂಗ್ ಆಗುವ ವೇಳೆ ಈ ಅಚಾತುರ್ಯ ನಡೆದಿದೆ. ಸಿಬಿಎಸ್ ನ್ಯೂಸ್ ಚಾನೆಲ್, ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (ಎಫ್‌ಎಎ) ಅನ್ನು ಉಲ್ಲೇಖಿಸಿ, ಸಿಂಗಲ್ ಎಂಜಿನ್ ಪೈಪರ್ ಪಿಎ-46 ವಿಮಾನ ಭಾನುವಾರದಂದು ಸ್ಥಳೀಯ ಕಾಲಮಾನ 12 ಗಂಟೆ ಸುಮಾರಿಗೆ ಲ್ಯಾಂಡಿಂಗ್ ವೇಳೆ ಇನ್ನೊಂದು ಚಿಕ್ಕ ಫ್ಲೈಟ್ ಸೆಸ್ನಾ-172 ಗೆ ಡಿಕ್ಕಿ ಹೊಡೆದಿದೆ ಎಂದು ವರದಿ ಮಾಡಿದೆ.
“ರನ್‌ವೇ 30ರಲ್ಲಿ ಪೈಪರ್ ವಿಮಾನ ಅಪಘಾತಕ್ಕೀಡಾದ ಬಳಿಕ ಸೆಸ್ನಾ ಫ್ಲೈಟ್ ಕೊಳದತ್ತ ನುಗ್ಗಿದೆ. ಎರಡು ವಿಮಾನಗಳಲ್ಲಿ ತಲಾ ಇಬ್ಬರಂತೆ ನಾಲ್ಕು ಮಂದಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದವು” ಎಂದು ಎಫ್ಎಎ ಹೇಳಿದೆ. ಅಪಘಾತದಲ್ಲಿ ಯಾರೂ ಬದುಕುಳಿದಿಲ್ಲ ಎಂದು ಎರ್ಪೋರ್ಟ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಎಫ್ಎಎ ಮತ್ತು ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿಯು ತನಿಖೆಯನ್ನು ಪ್ರಾರಂಭಿಸಿದ್ದು, ಅಪಘಾತಕ್ಕೆ ಕಾರಣವೇನು ಎಂಬುದನ್ನು ತನಿಖೆ ನಡೆಸುತ್ತಿದ್ದಾರೆ.