ಬೇರೆ ಚಿಹ್ನೆಗೆ ಮತವನ್ನು ಹಾಕಿಸಿದ ಅಧಿಕಾರಿ ಮತಗಟ್ಟೆಯ ಮುಂದೆ ಧರಣಿ ಕುಳಿತ ವೃದ್ಧೆ
ಮುಂಡರಗಿ :ಮತ ಹಾಕಲು ಬಂದ 85 ವರ್ಷದ ವೃದ್ಧೆಯ ಮತವನ್ನು ಮತಗಟ್ಟೆ ಅಧಿಕಾರಿಯು ವೃದ್ಧೆಯು ಹಾಕುವ ಚಿಹ್ನೆಯ ಬದಲು ಬೇರೆ ಚಿಹ್ನೆಗೆ ಮತವನ್ನು ಹಾಕಿಸಿದ ಕಾರಣ ಆ ಅಧಿಕಾರಿಯ ವಿರುದ್ದ ವೃದ್ಧೆಯು ಕಣ್ಣೀರಿಡುತ್ತಾ ಮತಗಟ್ಟೆಯ ಮುಂದೆ ಧರಣಿ ಕುಳಿತ ಘಟನೆ ಗದಗ ಜಿಲ್ಲೆಯ ಶಿರಹಟ್ಟಿ ಮತಕ್ಷೇತ್ರಕ್ಕೆ ಒಳಪಡುವ ಮುಂಡರಗಿ ಪಟ್ಟಣದ ಮತಗಟ್ಟೆ ಸಂಖ್ಯೆ 53ರಲ್ಲಿ ನಡೆದಿದೆ.
ಮುಂಡರಗಿಯ ನಿವಾಸಿಯಾದ 85 ವರ್ಷದ ಮಕ್ತುಂಬಿ ರಾಜೇಸಾಬ ದೊಡ್ಡಮನಿ ಎಂಬ ವೃದ್ಧೆಯು ತನ್ನ ಮೊಮ್ಮಗನ ಜೊತೆ ಮತಹಾಕಲು ಮತಗಟ್ಟೆಗೆ ಬಂದಾಗ ಅಲ್ಲಿಯ ಮತಗಟ್ಟೆ ಅಧಿಕಾರಿಯು ವೃದ್ಧೆಯ ಮೊಮ್ಮಗನಿಗೆ ಮತದಾರರನ್ನು ಹೊರತುಪಡಿಸಿ ಬೇರೆಯವರಿಗೆ ಮತಗಟ್ಟೆಯೊಳಗೆ ಅವಕಾಶವಿರುವುದಿಲ್ಲವೆಂದು ತಾವೇ ಆ ವೃದ್ಧೆಗೆ ಬೇಕಿರುವ ಮತದಾನದ ಚಿಹ್ನೆಗೆ ಹಾಕುವ ಬದಲು ಬೇರೆ ಚಿಹ್ನೆಗೆ ಮತವನ್ನು ಹಾಕಿಸಿದ್ದಾರೆ ಎಂದು ಮತದಾರ ವೃದ್ಧೆಯು ಮತಗಟ್ಟೆ ಅಧಿಕಾರಿಗಳ ಮೇಲೆ ಆರೋಪಿಸಿದರು.
ಕೂಡಲೇ ಮಾಹಿತಿ ತಿಳಿದ ತಕ್ಷಣ ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರೀಶೀಲಿಸಿದರು. ಆದರೆ ಇಂತಹ ಆರೋಪ ತಿಳಿದ ಕೂಡಲೇ ಅಲ್ಲಿಗೆ ದೌಡಾಯಿಸಿದ ಮುಖಂಡರು ಮತಗಟ್ಟೆಯ ಅಧಿಕಾರಿಗಳ ಮೇಲೆ ಆಕ್ರೋಶಗೊಂಡು, ಮತದಾನವನ್ನು ನಿಲ್ಲಿಸಿ, ಚುನಾವಣಾಧಿಕಾರಿಗಳು ಹಾಗೂ ತಹಶಿಲ್ದಾರರನ್ನು ಇಲ್ಲಿಗೆ ಕರೆಯಿಸಿ ಕೂಡಲೇ ಆ ಅಧಿಕಾರಿಯನ್ನು ಸೇವೆಯಿಂದ ವಜಾಗೊಳಿಸಬೇಕು ಹಾಗೂ ಮರು ಮತದಾನವನ್ನು ಮಾಡಬೇಕೆಂದು ಪಟ್ಟು ಹಿಡಿದರು.
ನಂತರ ಸಂಭಂದಪಟ್ಟ ಅಧಿಕಾರಿಗಳು ಹಾಗೂ ಮುಖಂಡರು ಈ ಘಟನೆಯನ್ನು ಶಾಂತಗೊಳಿಸಿ ವೃದ್ಧೆಯನ್ನು ಧರಣಿಯಿಂದ ಕೈಬಿಡಿಸುವಂತೆ ಒತ್ತಾಯಿಸಿದ ಪ್ರಯುಕ್ತ ವೃದ್ದೆಯು ಧರಣಿಯನ್ನು ಅಂತ್ಯಗೊಳಿಸಿದರು.