ಉತ್ತರ ಆಫ್ಘಾನಿಸ್ತಾನದಲ್ಲಿ ವೈಮಾನಿಕ ದಾಳಿ: 8 ಉಗ್ರರು ಹತ
ಮಜರ್-ಎ-ಷರೀಫ್, ಸೆಪ್ಟೆಂಬರ್ 6: (ಕ್ಸಿನ್ಹುವಾ) ಆಫ್ಘಾನಿಸ್ತಾನದ ಬಾಲ್ಕ್ ಜಿಲ್ಲೆಯ ಚಾರ್ಬೊಲಾಕ್ ನಲ್ಲಿ ಶನಿವಾರ ತಾಲಿಬಾನ್ ಉಗ್ರರ ತಂಡದ ಮೇಲೆ ಸೇನಾ ವಿಮಾನಗಳು ನಡೆಸಿದ ವೈಮಾನಿಕ ದಾಳಿಯಲ್ಲಿ ಎಂಟು ಉಗ್ರರು ಹತರಾಗಿದ್ದಾರೆ ಎಂದು ಉತ್ತರ ಪ್ರಾಂತ್ಯದ ಸೇನಾ ವಕ್ತಾರ ಮೊಹಮ್ಮದ್ ಹನೀಫ್ ರೆಜೈ ಭಾನುವಾರ ತಿಳಿಸಿದ್ದಾರೆ.
ಭದ್ರತಾ ತಪಾಸಣಾ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ತಾಲಿಬಾನ್ ಉಗ್ರರು ಬಾಲ್ಕ್ ಜಿಲ್ಲೆಯ ಸಬ್ಜಿಕರ್ ಪ್ರದೇಶದಲ್ಲಿ ಜಮಾಯಿಸಿದ್ದರು. ಆದರೆ, ಮೊದಲೇ ಸಜ್ಜುಗೊಂಡಿದ್ದ ಭದ್ರತಾ ಪಡೆಗಳು ಶನಿವಾರ ಉಗ್ರರ ಗುಂಪಿನ ಮೇಲೆ ವೈಮಾನಿಕ ದಾಳಿ ನಡೆಸಿವೆ. ದಾಳಿಯಲ್ಲಿ ಎಂಟು ಉಗ್ರರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇತರರು ಪಲಾಯನಗೈದಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಕಳೆದ ಎರಡು ದಿನಗಳಿಂದ ಉತ್ತರ ಪ್ರಾಂತ್ಯದಲ್ಲಿ ತಾಲಿಬಾನ್ ಉಗ್ರರು ನಡೆಸಿದ ಎರಡನೇ ವೈಮಾನಿಕ ದಾಳಿ ಇದಾಗಿದೆ. ಫರಿಯಾಬ್ ಪ್ರಾಂತ್ಯದ ಖೇಸರ್ ಜಿಲ್ಲೆಯಲ್ಲಿ ಶುಕ್ರವಾರ ನಡೆದ ಮೊದಲ ವೈಮಾನಿಕ ದಾಳಿಯಲ್ಲಿ ಇಬ್ಬರು ಉಗ್ರರು ಸಾವನ್ನಪ್ಪಿದ್ದರು. ಅಲ್ಲದೆ, ತಾಲಿಬಾನ್ ಕಮಾಂಡ್ ಮತ್ತು ನಿಯಂತ್ರಣ ಕೇಂದ್ರವನ್ನು ನಾಶಪಡಿಸಲಾಗಿತ್ತು.