ದ್ಯಾಂಪೂರು ಗ್ರಾಮದ ಪುರಾಣ ಸಾಹಿತ್ಯದ ತವರು: ಅಭಿನವ ಪಂಚಾಕ್ಷರ ಶಿವಾಚಾರ್ಯರು
ಕುಕನೂರು 31: ದ್ಯಾಂಪೂರು ಗ್ರಾಮದ ಪುರಾಣ ಸಾಹಿತ್ಯದ ತವರು ಎಂದು ಗದಗ-ಆಡ್ನೂರು-ರಾಜೂರು ಬೃಹನ್ಮಠದ ಶ್ರೀ ಅಭಿನವ ಪಂಚಾಕ್ಷರ ಶಿವಾಚಾರ್ಯರು ಬಣ್ಣಿಸಿದರು.
ತಾಲೂಕಿನ ದ್ಯಾಂಪೂರು ಗ್ರಾಮದಲ್ಲಿ ಶುಕ್ರವಾರ ರಾತ್ರಿ 11ನೇ ವರ್ಷದ ಶ್ರೀ ಶರಣಬಸವೇಶ್ವರ ಪುರಾಣ ಕಾರ್ಯಕ್ರಮಕ್ಕೆ ದೀಪ ಬೆಳಗುವ ಮೂಲಕ ಚಾಲನೆ ನೀಡಿದ ಅವರು, ಗ್ರಾಮದ ಕವಿಗಳಾದ ಶ್ರೀ ಕಲ್ಲಿನಾಥ ಶಾಸ್ರ್ತೀಗಳು, ಶ್ರೀ ಚನ್ನಕವಿಗಳು, ಸಿದ್ದಯ್ಯ ಪುರಾಣಿಕರು, ನಿಜಲಿಂಗಯ್ಯ ಶಾಸ್ರ್ತೀಗಳು ದ್ಯಾಂಪೂರು ಗ್ರಾಮದವರು. ಈ ಗ್ರಾಮದ ಕವಿಗಳು ಬರೆದ ಪುರಾಣ ಇಂದು ಜಗತ್ತಿಗೆ ದೀಪ ಆಗಿದೆ. ಶ್ರೀ ಶರಣಬಸವೇಶ್ವರ ಪುರಾಣವನ್ನು ಇಡೀ ರಾಷ್ಟ್ರದಲ್ಲಿ ಪಠಣ ಮಾಡುತ್ತಾರೆ. ಪುರಾಣ ಸಾಹಿತ್ಯಕ್ಕೆ ದ್ಯಾಂಪೂರು ಗ್ರಾಮದ ಕವಿಗಳ ಕೊಡುಗೆ ಅಪಾರ. ಪುರಾಣ ಸಾಹಿತ್ಯ ಜನ್ಮ ತಾಳಿದ್ದು ದ್ಯಾಂಪೂರು ಗ್ರಾಮದ ಕವಿಗಳಿಂದಲೇ. ಪುರಾಣ ಎಂಬುದು ಶರಣರ, ದೇವರ ಚರಿತ್ರೆ ಸಾರುವ ಮಹತ್ವದ ಗ್ರಂಥ.
ಮನುಷ್ಯ ನಿತ್ಯ ಬದುಕಿನಲ್ಲಿ ಒಂದಲ್ಲ ಒಂದು ಜಂಜಾಟದಲ್ಲಿ ಇರುತ್ತಾನೆ. ಮನುಷ್ಯ ತನ್ನ ಬದುಕು ಸಾರ್ಥಕ ಮಾಡಿಕೊಳ್ಳಬೇಕಾದರೆ ಸಹನೆ, ನೆಮ್ಮದಿ ಮುಖ್ಯ, ಸಹನೆ, ನೆಮ್ಮದಿಯಿಂದ ಬದುಕಿದರೆ ಪುಣ್ಯ ಪ್ರಾಪ್ತಿ ಆಗುತ್ತದೆ. ಮನುಷ್ಯನ ಮನಸ್ಸು ಚಂಚಲ ಆಗಬಾರದು. ಚಂಚಲತೆಯಿಂದ, ಅಸಹನೆಯಿಮದ ಯಾವ ಕೆಲಸ ಮಾಡಬಾರದು. ಪುರಾಣಗಳಲ್ಲಿ ಬದುಕು ನಿರ್ಮಿಸುವ ಶಕ್ತಿ ಇದೆ. ಶ್ರೀ ಶರಣಬಸವೇಶ್ವರರು ಲೌಕಿಕ ಜೀವನದಿಂದ ಪಾರಮಾರ್ಥಕ ಜೀವನ ಕಂಡುಕೊಂಡವರು. ಅಂತಹ ಪುರಾಣದಲ್ಲಿ ಮನುಷ್ಯನು ಜೀವನದಲ್ಲಿ ಹೇಗೆ ಸಾರ್ಥಕತೆ ಪಡೆಯಬಹುದು ಎಂಬ ಸಾರ ಅಡಗಿದೆ ಎಂದರು.
ಕಂಡಕ್ಟರ್ ಮಲ್ಲಪ್ಪ ನೋಟಗಾರ ಹಾಗು ಗ್ರಾಪಂ ಮಾಜಿ ಸದಸ್ಯ ಶಿವಯ್ಯ ಸಸಿಮಠ ಮಾತನಾಡಿ, ದ್ಯಾಂಪೂರು ಗ್ರಾಮದಲ್ಲಿ ಸತತ 11ವರ್ಷದಿಂದ ಪುರಾಣ ಜರುಗುತ್ತಾ ಬಂದಿದೆ. ಗ್ರಾಮದಲ್ಲಿ ಪುರಾಣ ಶ್ರಾವಣ ಕಾರ್ಯ ನೆಮ್ಮದಿ ಸಂಕೇತ. ಧಾರ್ಮಿಕ ಭಾವನೆಗೆ ಹೆಚ್ಚು ಶಕ್ತಿ ಇದೆ. ಪುರಾಣದಲ್ಲಿ ಭಕ್ತಿ, ಶಕ್ತಿ ಎರಡು ಅಡಕವಾಗಿದೆ ಎಂದರು.
ಹಾಲುಮತ ಸಮಾಜದ ಗುರು ಶ್ರೀ ವಿರುಪಾಕ್ಷಯ್ಯ ಗುರುವಿನಮಠ, ಗ್ರಾಮದ ಹಿರೇಮಠದ ಕಲ್ಲಯ್ಯಜ್ಜ, ಎಎಸ್ಆಯ್ ಕಾಶೀನಾಥ, ಗ್ರಾಪಂ ಸದಸ್ಯರಾದ ಬಸವರೆಡ್ಡಿ ಬೀಡಿನಾಳ, ಮುದಿಯಪ್ಪ ಬೀಡಿನಾಳ, ಪ್ರಮುಖರಾದ ಹನುಮಪ್ಪ ನೋಟಗಾರ, ದೇವಪ್ಪ ಮರಡಿ, ಈಶಯ್ಯ ಶಿರೂರಮಠ, ಬೀಮರೆಡ್ಡಿ ಬೀಡಿನಾಳ, ಪುರಾಣಿಕರು ಹಾಗು ಗ್ರಾಮಸ್ಥರಿದ್ದರು.