ಪ್ರತಿಭೆ ಅನ್ನುವದು ಪ್ರತಿಯೊಬ್ಬ ಮನುಷ್ಯನಲ್ಲಿ ಇರುತ್ತದೆ: ನ್ಯಾಮಗೌಡ
ಲೋಕದರ್ಶನ ವರದಿ,
ಜಮಖಂಡಿ 22: ಪ್ರತಿಭೆ ಅನ್ನುವದು ಪ್ರತಿಯೊಬ್ಬ ಮನುಷ್ಯನಲ್ಲಿ ಇರುತ್ತದೆ. ಅದನ್ನು ಹುಡುಕಿ ತೆಗೆದಾಗ ಮಾತ್ರ ಬೆಳಕಿಗೆ ಬರುತ್ತದೆ. ಹಾಗೆಯೇ ಮಕ್ಕಳಲ್ಲೂ ಸಾಕಷ್ಟು ಪ್ರತಿಭೆಗಳಿದ್ದು,ಅವುಗಳನ್ನು ಹೆಕ್ಕಿ ತೆಗೆಯುವ ಕೆಲಸ ಶಿಕ್ಷಕರು ಮಾಡಬೇಕೆಂದು ಬಿಇಓ ಸಿ.ಎಂ.ನ್ಯಾಮಗೌಡ ಹೇಳಿದರು.
ನಗರದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಶಿಕ್ಷಕರ ಸಹ ಪಠ್ಯ ಚಟುವಟಿಕೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಕರು ಅವಕಾಶಗಳನ್ನು ಬಳಕೆ ಮಾಡಿಕೊಂಡು ಹೊಸ ಹೊಸ ಯೋಜನೆಗಳ ಮೂಲಕ ಕಲಿಕೆಗೆ ಪೂರಕವಾಗುವ ವಾತಾವರಣ ಸೃಷ್ಟಿಸಿಕೊಂಡು ಮಕ್ಕಳ ಪ್ರತಿಭೆ ಹೊರಹೊಮ್ಮಲು ಸಹಕರಿಸಬೇಕು. ಶಿಕ್ಷಕರು ಸಹ ತಮ್ಮಲ್ಲಿನ ಪ್ರತಿಭೆ ಅನಾವರಣಗೊಳಿಸಿ ಪಠ್ಯ ಚಟುವಟಿಕೆಗಳಲ್ಲಿ ಮಕ್ಕಳಿಗೆ ಹೇಳಿ ಕೊಡಲು ಸುಲಭವಾಗುವಂತೆ ಬೋಧನಾ ವಿಧಾನ ಅಳವಡಿಸಿಕೊಳ್ಳಬೇಕೆಂದರು. ಶಿಕ್ಷಕರಿಗಾಗಿ ಹಮ್ಮಿಕೊಳ್ಳುವ ಸಹ ಪಠ್ಯ ಚಟುವಟಿಕೆಗಳು ಕೋವಿಡ್ ಸಂದರ್ಭದಲ್ಲಿ ನಡೆದಿರುವುದಿಲ್ಲ. ಈಗ ಆ ಅವಕಾಶ ಮತ್ತೊಮ್ಮೆ ಒದಗಿದೆ. ಇದರ ಸದುಪಯೋಗ ಪಡಿಸಿಕೊಳ್ಳಬೇಕು .ಹೊಸ ಹುರುಪಿನಿಂದ ಭಾಗವಹಿಸಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬೇಕು. ಮಕ್ಕಳ ಸವಾರ್ಂಗಣ ಅಭಿವೃದ್ಧಿಗಾಗಿ ಇಲಾಖೆಯು ವಿವಿಧ ಕಾರ್ಯಕ್ರಮ ಆಯೋಜನೆ ಮಾಡಿದೆ. ಎಲ್ಲ ಕಾರ್ಯಕ್ರಮಗಳು ಚೆನ್ನಾಗಿ ಮೂಡಿಬರಲಿ ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ವಿಜಯಕುಮಾರ ವಂದಾಲ ಸ್ಪರ್ಧೆಯಲ್ಲಿ ವಿಜೇತ ಶಿಕ್ಷಕರಿಗೆ ಪ್ರಶಸ್ತಿ ಪ್ರ್ರಧಾನ ಮಾಡಿದರು. ಮುಖ್ಯಗುರು ಶಿವಾಜಿ ನಾಯಕ, ಭೂಷಣ ಪತ್ತಾರ, ಶಿಕ್ಷಕರ ಸಂಘದ ಅಧ್ಯಕ್ಷ ನರಸಿಂಹ ಕಲ್ಲೋಳಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ. ಜಿ.ಕಡಕೋಳ, ಇಂದಿರಾ ಜಲದುರ್ಗ, ರಾಜೇಂದ್ರ ಗುದಿಗೆನ್ನವರ, ರಮೇಶ ಅವಟಿ, ಬಸವರಾಜ ಪಾಟೀಲ, ಸದಾಶಿವ ಮುದ್ನೂರ, ಶಂಭು ಕಾಯಿ, ಬಸವರಾಜ ತಿಮ್ಮಾಪುರ, ಹಣಮಂತ ಅರಕೇರಿ, ನಾರಾಯಣ ಶಾಸ್ತ್ರಿ, ದುಂಡಯ್ಯ ಹಿರೇಮಠ ಉಪಸ್ಥಿತರಿದ್ದರು. ನೋಡಲ್ ಅಧಿಕಾರಿ ಸಂತೋಷ ತಳಕೇರಿ ಸ್ವಾಗತಿಸಿದರು. ಕಾಡೇಶ ಹಂಚಿನಾಳ ನಿರೂಪಿಸಿದರು. ಶಿಕ್ಷಕ ಸಂಗಮೇಶ ಉಟಗಿ ವಂದಿಸಿದರು.