ಶಾಯಿರಿಗಳು ಮನಸ್ಸಿಗೆ ಆನಂದ ನೀಡುತ್ತವೆ

ಶಾಯಿರಿಗಳು ಮನಸ್ಸಿಗೆ ಆನಂದ ನೀಡುತ್ತವೆ Shayari brings joy to the mind.

ಲೋಕದರ್ಶನ ವರದಿ 

  ಕೊಪ್ಪಳ 07: ಕನ್ನಡ ಸಾರಸ್ವತ ಲೋಕ ಸಾಹಿತ್ಯದ ವಿವಿಧ ಪ್ರಕಾರಗಳಿಂದ ಬಹಳ ಶ್ರೀಮಂತವಾಗಿದೆ. ಈ ಪರಂಪರೆಗೆ ಮತ್ತಷ್ಟು ಮೆರಗು ತಂದಿರುವ ಸಾಹಿತ್ಯ ಪ್ರಕಾರ ಕನ್ನಡ ಶಾಯಿರಿಗಳು. ಬದುಕಿನ ಸಾರವನ್ನು ಕೆಲವೇ ಸಾಲುಗಳಲ್ಲಿ ತೆರೆದಿಡುವ ಪರಿ ಶಾಯಿರಿಗಿದೆ. ಇದನ್ನು ಓದಿಯೇ ಸವಿಯಬೇಕು!  ಕಡಿಮೆ ಶಬ್ದಗಳಲ್ಲಿ ಹೆಚ್ಚು ಅರ್ಥ ನೀಡುವ ಶಾಯಿರಿಗಳು ಮನಸ್ಸಿಗೆ ಆನಂದ ನೀಡಿ ಮುಖದಲ್ಲಿ ಮಂದಹಾಸವನ್ನು ತರುತ್ತವೆ ಎಂದು ಕೊಪ್ಪಳ ಮಹಿಳಾ ಸರ್ಕಾರಿ ಪದವಿ ಕಾಲೇಜಿನ ಉಪನ್ಯಾಸಕ, ಸಾಹಿತಿ ಶಿವಪ್ರಸಾದ ಹಾದಿಮನಿ ಹೇಳಿದರು.

ನಗರದ ಶ್ರೀ ಗವಿಸಿದ್ಧೇಶ್ವರ ಪದವಿ ಕಾಲೇಜಿನಲ್ಲಿ ದಿನಾಂಕ 07.04.2025ರಂದು  ಬೆಳಗ್ಗೆ 9;00ಗಂಟೆಗೆ ಕನ್ನಡ ವಿಭಾಗದಿಂದ ಆಯೋಜಿಸಿದ ಶಾಹಿರಿಕಾರರ ಜೊತೆ ಸಂವಾದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ  ಅವರು ನಮಗೆ ಬಹಳ ಸಂತೋಷವಾದಾಗ, ಮತ್ತು ಬಹಳ ದುಃಖವಾದಾಗ ಮನಸ್ಸಿನ ಭಾವನೆಗಳನ್ನು ಹೊರ ಹಾಕುವ ಸಾಧನವೇ ಶಾಯಿರಿಗಳು. ಶಾಯಿರಿಗಳಲ್ಲಿ ಭಾವನೆಗಳದೇ ಅಧಿಪತ್ಯವಿರುತ್ತದೆ.

ಶಾಯರ್ ಎಂದರೆ ಕವಿ, ಶಾಯರಿ ಎಂದರೆ ಕವಿತೆ. ನವೋದಯ ಸಂದರ್ಭದಲ್ಲಿ ಕನ್ನಡಲ್ಲಿ ಕಂಡು ಬಂದ ಶಾಯಿರಿಗಳು ಸಾಹಿತ್ಯದ ವೈಶಿಷ್ಟತೆಗಳಾಗಿವೆ ಜೀವನದ ಬಹುತೇಕ ಎಲ್ಲ ಮುಖಗಳು, ಆಗು ಹೋಗುಗಳನ್ನು ಕಾವ್ಯ ರೂಪದಲ್ಲಿ ತೆರೆದಿಟ್ಟ ಇವು ಒಲವಿನ ಬಗ್ಗೆ ಬಹುಪಾಲು ಮಿಸಲಾಗಿಸಿವೆ. ಶಾಯಿರಿ ಹೇಳುವುದು ಒಂದು ಕಲೆಯಾಗಿದೆ. ಎರಡೆರಡು ಸಲ ಮೊದಲಿನ ಸಾಲು ರಹಸ್ಯವನ್ನಿಟ್ಟು ಹೇಳಿದ ನಂತರ, ಎರಡನೇ ಸಾಲಿನಲ್ಲಿ ರಹಸ್ಯವು ಸ್ಫೋಟವಾಗುವುದು. ಆಗ ವಾವಾ, ಕ್ಯಾ ಬಾತ್ ಹೈ, ಎಂಬ ಉದ್ಘಾರ ಕೇಳುಗರಿಂದ ಹೊರಡುತ್ತದೆ. ಶಾಯಿರಿಗಳಲ್ಲಿ ಅದ್ಭುತ ಕಲ್ಪನೆ, ತತ್ವಜ್ಞಾನ ಅಡಕವಾಗಿರುತ್ತದೆ.  ಶಾಹಿರಿಗಳು ಕೇಳುವುದರಿಂದ ಮತ್ತು ಅಧ್ಯಯನದಿಂದ ನೀವೆಲ್ಲರು ಅನುಭವಿಸಬೇಕು ಎಂದರು.  

ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಪ್ರೋ. ಶರಣಬಸಪ್ಪ ಬಿಳಿಯಲೆ ಮಾತನಾಡಿ ಸಾಹಿತ್ಯ ಒದುವುದರಿಂದ ಮನಸ್ಸಿನ ಶ್ರೀಮಂತಿಕೆ ಹೆಚ್ಚಾಗುತ್ತದೆ. ಮನಸ್ಸನು ಮುದಗೂಳಿಸುವ ಸಾಹಿತ್ಯ ಶಾಹಿರಿಗಳಾಗಿವೆ ಅವುಗಳನ್ನು ನೀವೆಲ್ಲರು ಒದುವುದರ ಮೂಲಕ ಅನುಭವಿಸಬೇಕು ಎಂದು ಹೇಳಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ನಾಗರಾಜ ದಂಡೋತಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ  ಜ್ಞಾನ ಮತ್ತು ಮನಸ್ಸಿಗೆ ಆನಂದ ನೀಡಿ, ಬದುಕಿನ ಅನುಭವ ಜೊತೆಗೆ ಬದುಕುವ ಕಲೆಯನ್ನು ಕಲಿಸುವ ಶಕ್ತಿ ಸಾಹಿತ್ಯಕ್ಕಿದೆ. ಅಂತಹ ಅನುಭವ ಶಾಹಿರಿ ನೀಡುತ್ತವೆ. ನಾಡಿನ ಶಾಹಿರಿಕಾರರ ಪ್ರೇರಣೆಯಿಂದ ಶಾಹಿರಿ ಒದುವ, ರಚಿಸುವ ಸೃಜನಶೀಲತೆ ಬೆಳಸಿಕೊಳ್ಳಲು ಈ ಕಾರ್ಯಕ್ರಮಗಳು ಅಗತ್ಯವಾಗಿವೆ ಎಂದರು. ಕು. ಹೇಮಲತಾ ಸ್ವಾಗತಿಸಿದರು, ಕು. ಪ್ರವೀಣ ವಂದಿಸಿದರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.