ಪರೋಪಕಾರ ಮಾಡುವ ಮೊದಲು ಸ್ವಾರ್ಥ ತ್ಯಾಗ ಮಾಡಬೇಕು: ಮಹಾದೇವ ದೇವರು
ಲೋಕದರ್ಶನ ವರದಿ
ಕುಕನೂರ 06: ಮನುಷ್ಯ ಧರ್ಮದ ಕಾರ್ಯಗಳಿಗೆ ಪರೋಪಕಾರ ಮಾಡುವಾಗ ಸ್ವಾರ್ಥ ತ್ಯಾಗ ಮಾಡಬೇಕು ನಾನು ಮಾಡಿದೆ ಎಂಬುದು ಮನದಲ್ಲಿ ಮೂಡದಿದ್ದರೆ ಅಂದಾಗ ಮಾತ್ರ ಭಗವಂತನ ಒಲುಮೆಯಾಗಲು ಸಾಧ್ಯ ಎಂದು ಶ್ರೀಮಠದ ಪೂಜ್ಯ ಮಹಾದೇವ ದೇವರು ಹೇಳಿದರು.
ಅವರು ಕುಕನೂರ ಪಟ್ಟಣದ ಅನ್ನದಾನೀಶ್ವರ ಮಠದಲ್ಲಿ ಶ್ರೀ ಶಾಂಭವಿ ಪುರಾಣ ಸಮಿತಿಯಿಂದ ನಡೆದ ಶ್ರೀದೇವಿ ಪುರಾಣದ ಮಹಾಮಂಗಳದ ನೇತೃತ್ವವಹಿಸಿ ಮಾತನಾಡುತ್ತಾ ಪ್ರತಿಯೊಂದು ಕೆಲಸವನ್ನೂ ಚೆನ್ನಾಗಿ ವಿಚಾರಿಸಿ ಮಾಡಬೇಕು. ಪ್ರತಿಯೊಂದನ್ನೂ ವಿಚಾರಪೂರ್ಣವಾಗಿ ಅರಿತು ಒಪ್ಪಬೇಕು ಅಥವಾ ತಿರಸ್ಕರಿಸಬೇಕು. ಹೀಗೆ ಮಾಡುವ ವ್ಯಕ್ತಿಗಳು ಮಹಾತ್ಮರೆನ್ನಿಸಿಕೊಳ್ಳುತ್ತಾರೆ. ಕತ್ತಲ ಬಾವಿಯಲ್ಲಿ ಬಿದ್ದವರಿಗೆ ವಿಚಾರಶೀಲತೆಯೇ ಆಸರೆ ಅನ್ನುತ್ತದೆ ಯೋಗ ವಾಸಿಷ್ಠ ಮತ್ತು ಎಲ್ಲಾ ಧರ್ಮ ಶಾಸ್ತ್ರಗಳನ್ನು ಓದಿದ್ದರೂ, ತಿಳಿದಿದ್ದರೂ, ತನಗೂ, ಬೇರೆಯವರಿಗೂ ಕೆಡುಕಾಗವ ಕಾರ್ಯವನ್ನು ಮಾಡಬಾರದು ಅಥವಾ ತನಗೆ ಯಾವುದು ಪ್ರತಿಕೂಲವೋ ಅಂಥದನ್ನು ಬೇರೆಯವರಿಗೆ ಪ್ರತಿಕೂಲವೆಂದು ಅರಿತು ಅದನ್ನು ಮಾಡಬಾರದು ಎಂದು ಮಹಾತ್ಮರು ಹೇಳಿದ್ದಾರೆ ಎಂದರು.
ಕುಕನೂರ ದಳಪತಿ ವೀರಯ್ಯ ತೋಂಟದಾರ್ಯಮಠ ಮಾತನಾಡಿ ಒಳ್ಳೆಯ ರಸ್ತೆ ಒಬ್ಬ ಒಳ್ಳೆಯ ಚಾಲಕನನ್ನೂ ರೂಪಿಸಲಾರದು, ಶಾಂತವಾಗಿರುವ ಸಾಗರ ಒಳ್ಳೆಯ ನಾವಿಕನನ್ನು ರೂಪಿಸಲಾರದು, ತಿಳಿ ಆಕಾಶ ಸಮರ್ಥ ಪೈಲಟನನ್ನು ರೂಪಿಸಲಾರದು ಸಮಸ್ಯೆಯೇ ಇಲ್ಲದ ಬದುಕು ಎಂದಿಗೂ ಸಾಧಕನನ್ನು ರೂಪಿಸದು ಆದ್ದರಿಂಂದ ಮನುಷ್ಯ ಕಾಯಕ ತತ್ವವನ್ನ ಅಳವಡಿಸಿಕೊಂಡು ಸ್ತುತಿ ನಿಂದನೆಗಳನ್ನ ಸಮಾನವಾಗಿ ಸ್ವೀಕರಿಸಿ ಬದುಕು ಕಟ್ಟಿಕೊಳ್ಳಬೇಕು ಎಂದರು.
ಪುರಾಣ ಪ್ರವಚನವನ್ನ ಜಗದೀಶಯ್ಯ ಕಳ್ಳಿಮಠ, ಸಂಗೀತಗಾರರಾಗಿ ವೀರಭದ್ರಪ್ಪ ಬನ್ನಿಕೊಪ್ಪ, ಸದಶಿವಯ್ಯ ಹಿರೇಮಠ, ಮೇಘರಾಜ ಜಿಡಗಿ ಮತ್ತು ಶೇಕರಯ್ಯ ಬಿಕ್ಷಾವತಿಮಠ ನಡೆಸಿಕೊಟ್ಟರು, ದಾನಿಗಳಿಗೆ ಸನ್ಮಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಗದಿಗೆಪ್ಪ ಪವಾಡಶೆಟ್ಟಿ, ಶೇಖಪ್ಪ ಶಿರೂರು, ಶರಣಪ್ಪ ಮಳಿಗಿ ಮತ್ತು ಬಸಪ್ಪ ಬಂಗಿ ಸಂಗಮೇಶ ಕಲ್ಮಠ, ನೀಲಕಂಠಯ್ಯ ಕಾಶೀಮಠ, ಶರಣಪ್ಪ ಯತ್ನಟ್ಟಿ, ವಿನೋದ ಹಿರೇಮಠ, ಶರಣಪ್ಪ ಕೂಡ್ಲೂರು, ಬಿಮಪ್ಪ ಬಾರಕೇರ, ಮಹಾದೇವಪ್ಪ ಬೆದವಟ್ಟಿ ಮತ್ತು ಇತರರು ಇದ್ದರು