ರೈಲ್ವೆ ಮಾರ್ಗ ಕಾಮಗಾರಿ ವಿಳಂಬ: ಡಿ.17ರಂದು ಪಾದಯಾತ್ರೆ
ಜಮಖಂಡಿ 14: ಕೇಂದ್ರ-ರಾಜ್ಯ ಸರ್ಕಾರಗಳ ಕಾರ್ಯ ವೈಫಲತೆಯಿಂದಾಗಿ ಬಾಗಲಕೋಟ-ಕುಡಚಿ ರೈಲ್ವೆ ಮಾರ್ಗ ಕಾಮಗಾರಿ ವಿಳಂಬವಾಗುತ್ತಿದ್ದು, ಡಿ.17 ರಿಂದ ಅರೆಬತ್ತಲೆ ಮೂಲಕ ಬಾಗಲಕೋಟ ನಗರದಿಂದ ಕುಡಚಿ ರೈಲ್ವೆ ನಿಲ್ದಾಣದವರೆಗೆ ಪಾದಯಾತ್ರೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆಂದು ಕರ್ನಾಟಕ ರಾಜ್ಯ ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಕುತುಬುದ್ದೀನ ಖಾಜಿ ತಿಳಿಸಿದರು.
ಸರ್ಕಾರಿ ಪ್ರವಾಸ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಈ ರೈಲು ಮಾರ್ಗ ಕಾಮಗಾರಿ ಖಜ್ಜಿಡೋಣಿ ಗ್ರಾಮದವರೆಗೆ ಮಾತ್ರ ಬಂದಿದ್ದು, ಮುಂದಿನ ಕಾಮಗಾರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಆಸಕ್ತಿ ತೋರಿಸುತ್ತಿಲ್ಲ. ಈ ಭಾಗದ ಸಂಸದರು ನಿದ್ರಾವಸ್ಥೆಯಲ್ಲಿದ್ದು, ಅವರಿಗೆ ಈ ಕಾಮಗಾರಿ ಬಗ್ಗೆ ಏಳ್ಳಷ್ಟು ಚಿಂತನೆ ಇಲ್ಲವೆಂದು ಆರೋಪಿಸಿದರು.
ಈ ರೈಲು ಮಾರ್ಗಕ್ಕೆ ಈ ಹಿಂದೆ ಸುಮಾರು 815 ಕೋ.ರು,ಯೋಜನೆ ವೆಚ್ಚ ಮಾಡಲಾಗಿದ್ದು, ಸದ್ಯ ಅದು 4 ಸಾವಿರ ಕೋ,ಗೆ ಏರಿಕೆಯಾಗಿದೆ. ಕಾಮಗಾರಿ ವಿಳಂಬ ಆದಂತೆ ಇನ್ನೂ ಹೆಚ್ಚಿನ ಹೊರೆ ಜನರ ಮೇಲೆ ಬೀಳುತ್ತದೆ. ರಾಜ್ಯ ಸರ್ಕಾರ ಈ ಬಗ್ಗೆ ಕೂಡಲೇ ಚಿಂತನೆ ನಡೆಸಿ ಭೂಸ್ವಾಧೀನ ಪ್ರಕ್ರೀಯೆ ಕಾರ್ಯವನ್ನು ನಡೆಸಿ, ಕಾಮಗಾರಿ ಕೈಕೊಳ್ಳಲು ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು.
ರಸ್ತೆ ತಡೆ:
ರಾಜ್ಯದ ಮುಖ್ಯಮಂತ್ರಿಗಳು ಕೂಡಲೇ ಕಾಮಗಾರಿಗೆ ಆದ್ಯತೆ ನೀಡದಿದ್ದರೆ ಡಿ.19 ರಿಂದು ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನಕ್ಕೆ ಬಾಗಲಕೋಟ-ಬೆಳಗಾವಿ, ವಿಜಯಪೂರ-ಬೆಳಗಾವಿ ರಾಜ್ಯ ಹೆದ್ದಾರಿ ತಡೆ ನಡೆಸಿ, ಜನಪ್ರತಿನಿಧಿಗಳು ಮತ್ತು ಕೇಂದ್ರ-ರಾಜ್ಯ ಅಧಿಕಾರಿಗಳು ಬೆಳಗಾವಿ ಅಧಿವೇಶನಕ್ಕೆ ಬರಲಾರದಂತೆ ಅಡ್ಡಿಯುಂಟು ಮಾಡುವುದಾಗಿ ಅವರು ಎಚ್ಚರಿಕೆ ನೀಡಿದರು.
ಪಾದಯಾತ್ರೆ:
ರಾಜ್ಯ ಮತ್ತು ಕೇಂದ್ರ ಸಕರ್ಾರಗಳು ಕುಡಚಿ-ಬಾಗಲಕೋಟ ರೈಲು ಮಾರ್ಗಕ್ಕೆ ಆದ್ಯತೆ ನೀಡದಿರುವುದನ್ನು ಖಂಡಿಸಿ, ಡಿ.17 ರಿಂದ ಬಾಗಲಕೋಟದಿಂದ ಗಾಳಿ, ಚಳಿ, ಬಿಸಲು ಎನ್ನದೇ ಅರೆಬತ್ತಲೆಯಾಗಿ ಕುಡಚಿವರೆಗೆ ಸಾವಿರಾರು ಹೋರಾಟಗಾರರೊಂದಿಗೆ ಪಾದಯಾತ್ರೆ ನಡೆಸಲಾಗುವುದು. ಡಿ.18 ಗದ್ದನಕೇರಿ ಕ್ರಾಸ್, ಡಿ.19 ರಂದು ಕಲಾದಗಿ, ಡಿ.20 ಲೋಕಾಪೂರ, ಡಿ.21 ಮುಧೋಳ, ಡಿ.22 ಜಮಖಂಡಿ, 23 ರಂದು ರಬಕವಿ-ಬನಹಟ್ಟಿ,24 ರಂದು ತೇರದಾಳ, 25 ಹಾರುಗೇರಿ ಸೇರಿದಂತೆ ಕುಸಚಿ ರೈಲ್ವೆ ನಿಲ್ದಾಣದ ಬಳಿ ಬೃಹತ್ ಪ್ರತಿಭಟನಾ ಸಭೆ ನಡೆಸಿ, ಸರ್ಕಾರಗಳನ್ನು ಎಚ್ಚರಗೊಳಿಸುವುದಾಗಿ ಅವರು ಹೇಳಿದರು.
ಗೋಷ್ಠಿಯಲ್ಲಿ ತಾಲೂಕಾಧ್ಯಕ್ಷ ನಜೀರ ಕಂಗನೊಳ್ಳಿ, ರವಿ ಯಡಹಳ್ಳಿ, ರೈತ ಸಂಘದ ಮುಖಂಡ ಸುಭಾಸ ಶಿರಬೂರ, ಕಲ್ಲಪ್ಪ ಗಿರಡ್ಡಿ, ಬಂಟನೂರ, ಜಯಶ್ರೀ ಗುಲಬಾಳ, ಗುಲಾಬ ಅತ್ತಾರ, ವನಜಾಕ್ಷಿ ಮಂಟೂರ, ಮಧುಮತಿ ಆಲಬಾಳ, ಮುಸ್ತಾಕ ಝಂಡೆ, ಗಪೂರ ಮುಲ್ಲಾ, ಮುಬಾರಕ ಸಾರವಾನ, ಮೈನೋಧಿನ ಖಾಜಿ, ಮಲ್ಲು ಗೊಂಬಿಗುಡ್ಡ, ಅಬುಬಕರ ಕುಡಚಿ, ಕಾಡಪ್ಪ ಸೇರಿದಂತೆ ಅನೇಕರಿದ್ದರು.