ಶಾಂತಿಯುತ ಗಣೇಶೋತ್ಸವಕ್ಕೆ ಅಧಿಕಾರಿಗಳ ಮನವಿ
ಲೋಕದರ್ಶನ ವರದಿ
ಶಾಂತಿಯುತ ಗಣೇಶೋತ್ಸವಕ್ಕೆ ಅಧಿಕಾರಿಗಳ ಮನವಿ
ಜಮಖಂಡಿ 12: ಸಾರ್ವಜನಿಕ ಗಣೇಶೋತ್ಸವ ಸಮಿತಿಯವರು ನಿಗದಿತ ಸಮಯದಲ್ಲಿ ಗಣಪತಿ ವಿಸರ್ಜನೆ ಪೂರ್ಣಗೊಳಿಸುವಂತೆ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ್ ಮನವಿ ಮಾಡಿದರು. ನಗರದ ಎಸ್‌ಆರ್‌ಎ ಕ್ಲಬ್ ಸಭಾಭವನದಲ್ಲಿ ವೃತ್ತ ಪೊಲೀಸ್ ಇಲಾಖೆಯ ವತಿಯಿಂದ ಆಯೋಜಿಸಿದ್ದ ಗಣೇಶ ಹಬ್ಬದ ಶಾಂತಿ ಪಾಲನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ನಗರದಲ್ಲಿ 110ಕ್ಕೂ ಹೆಚ್ಚು ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತಿದ್ದು, ನಿಗದಿತ ಸಮಯದಲ್ಲಿ ವಿಸರ್ಜನೆ ಮೆರವಣಿಗೆ ಆರಂಭಿಸಿ ರಾತ್ರಿ 10 ಗಂಟೆಯೊಳಗೆ ಮುಗಿಸಬೇಕು. ಪೊಲೀಸ್, ಕೆಇಬಿ, ನಗರಸಭೆ, ಅಗ್ನಿಶಾಮಕ ಸೇರಿದಂತೆ ಎಲ್ಲ ಇಲಾಖೆಗಳೊಂದಿಗೆ ಉತ್ಸವ ಸಮಿತಿಯ ಪದಾಧಿಕಾರಿಗಳು ಸಹಕಾರ ನೀಡಬೇಕು. ಶಾಂತಿ, ಸೌಹಾರ್ದತೆ ಹಾಗೂ ವಿಜೃಂಭಣೆಯಿಂದ ಹಬ್ಬ ಆಚರಿಸುವಂತೆ ಅವರು ಕರೆ ನೀಡಿದರು.
ಡಿವೈಎಸ್ಪಿ ಸೈಯದ್ ರೋಷನ್ ಜಮೀರ್ ಮಾತನಾಡಿ, ಗಣೇಶೋತ್ಸವದ ಪೆಂಡಾಲ್ಗಳ ಪರವಾನಗಿ, ಸಿಸಿ ಕ್ಯಾಮೆರಾ ಅಳವಡಿಕೆ ಸೇರಿದಂತೆ ಪೊಲೀಸ್ ಇಲಾಖೆಯಿಂದ ಮುಂಚಿತವಾಗಿ ನೀಡಿರುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಕಳೆದ ಬಾರಿಯ ಲೋಪಗಳು ಮರುಕಳಿಸದಂತೆ ಕ್ರಮ ವಹಿಸಬೇಕು. ಅನೈತಿಕ ಚಟುವಟಿಕೆ ಹಾಗೂ ಸಾಮಾಜಿಕ ಮಾಧ್ಯಮಗಳ ದುರ್ಬಳಕೆಯಿಂದ ಅನಾಹುತಗಳು ಸಂಭವಿಸದಂತೆ ಎಚ್ಚರಿಕೆ ವಹಿಸಬೇಕು. ಸೂಚನೆಗಳನ್ನು ಉಲ್ಲಂಘಿಸಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಫ್ಲೆಕ್ಸ್ಗಳನ್ನು ಅಳವಡಿಸುವವರ ಹೆಸರು, ವಿಳಾಸ ಹಾಗೂ ಮುದ್ರಕರ ದೂರವಾಣಿ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕು ಎಂದು ತಿಳಿಸಿದರು. ಜನಸ್ನೇಹಿ ಪೊಲೀಸ್ ವ್ಯವಸ್ಥೆ ಜಾರಿಗೆ ತರಲಾಗುತ್ತಿದ್ದು, ಪ್ರತಿ ಪೆಂಡಾಲ್ಗೆ 10 ಜನ ಸ್ವಯಂಸೇವಕರಿಗೆ ಇಲಾಖೆಯ ಐಡಿ ಕಾರ್ಡ್ಗಳನ್ನು ವಿತರಿಸಲಾಗುವುದು. ಸ್ವಯಂಸೇವಕರು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದರು.
ಸಿಪಿಐ ಮಲ್ಲಪ್ಪ ಮಡ್ಡಿ ಮಾತನಾಡಿ, ಜೆಜೆ ಬಳಕೆಯನ್ನು ನಿಷೇಧಿಸಲಾಗಿದೆ. ಸಮಯ ಮುಗಿದ ನಂತರ ಧ್ವನಿವರ್ಧಕ ಬಳಕೆ ಕಡ್ಡಾಯವಾಗಿ ನಿಬಂಧನೆಗೆ ಒಳಪಟ್ಟಿರುತ್ತದೆ. ಎಲ್ಲರೂ ಇಲಾಖೆಯೊಂದಿಗೆ ಸಹಕರಿಸಿ ಶಾಂತಿಯುತವಾಗಿ ಹಬ್ಬ ಆಚರಿಸಬೇಕು ಎಂದು ಹೇಳಿದರು. ನಗರಸಭೆ ಪೌರಾಯುಕ್ತ ಜ್ಯೋತಿ ಗೀರೀಶ ಮಾತನಾಡಿ, ನಗರಸಭೆಯಿಂದ ಗಣೇಶೋತ್ಸವಕ್ಕೆ ಅಗತ್ಯವಿರುವ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದೆ. ಪ್ರತ್ಯೇಕ ಪುಷ್ಕರಣಿ ಸಿದ್ಧಪಡಿಸಲಾಗಿದ್ದು, ಅಲ್ಲಿಯೇ ಗಣೇಶ ಮೂರ್ತಿಗಳ ವಿಸರ್ಜನೆ ಮಾಡಬೇಕು ಎಂದು ತಿಳಿಸಿದರು.
ಕೆಇಬಿಯ ಜೆಇ ವಿಶಾಲ ದರೆಪ್ಪಗೋಳ ಮಾತನಾಡಿ, ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಹಾಗೂ ಹೊಸ ವೈರ್ಗಳನ್ನು ಬಳಸಬೇಕು ಎಂದು ಸಲಹೆ ನೀಡಿದರು. ಶಾಂತಿ ಪಾಲನಾ ಸಭೆಯಲ್ಲಿ ರವಿ ತೇಲಿ, ದಿಲಾವರ ಶಿರೋಳ, ಶ್ರೀಶೈಲ ದುಂಡಗಿ, ಪ್ರದೀಪ ಮೆಟ್ಟಗುಡ್ಡ, ನಾನಾ ಮೋರೆ, ಅಬುಬಕ್ಕರ ಕುಡಚಿ, ಪ್ರದೀಪ ಮಹಾಲಿಂಗಪುರಮಠ, ಗಂಗಾಧರ ತಳಬಕ್ಕನವರ್, ಸಮೀರ ಕಂಗನೊಳ್ಳಿ, ಗಣೇಶ ಶಿರಗಣ್ಣವರ, ಮಲ್ಲಿಕಾರ್ಜುನ ಮಠ, ರಾಕೇಶ ಲಾಡ ಸೇರಿದಂತೆ ಗಣೇಶೋತ್ಸವ ಸಮಿತಿಗಳ ಪದಾಧಿಕಾರಿಗಳು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ವೇದಿಕೆಯಲ್ಲಿ ತಹಸೀಲ್ದಾರ್ ಅನೀಲ ಬಡಿಗೇರ್, ನಗರ ಪಿಎಸ್‌ಐ ಅನೀಲ ಕುಂಬಾರ, ಗ್ರಾಮೀಣ ಪಿಎಸ್‌ಐ ಮನ್ಹಿಕೇರಿ, ಗಣೇಶನ ಮಹಾ ಮಂಡಳಿ ಅಧ್ಯಕ್ಷ ಹೀರಾ ಜಾಧವ, ಅಗ್ನಿಶಾಮಕ ದಳದ ಎಂ.ಬಿ. ಹಳಿಗೌಡರ, ಪಿಡಬ್ಲ್ಯೂಡಿ ಸಾಬು ತೇರದಾಳ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.