‘ಹದಿಹರೆಯವು ವಿದ್ಯಾರ್ಥಿ ಜೀವನದ ಒಂದು ಸಂಕ್ರಮಣಕಾಲ’

‘ಹದಿಹರೆಯವು ವಿದ್ಯಾರ್ಥಿ ಜೀವನದ ಒಂದು ಸಂಕ್ರಮಣಕಾಲ’ ‘Adolescence is a transitional period in student life’

ಲೋಕದರ್ಶನ ವರದಿ 

           ಧಾರವಾಡ 12: ಹದಿಹರೆಯವು ವಿದ್ಯಾರ್ಥಿ ಜೀವನದ ಒಂದು ಸಂಕ್ರಮಣಕಾಲ. ಅದು ಜೀವನದ ಒಂದು ರೋಮಾಂಚನಕಾರಿಯಾದ ಅವಧಿಯಾಗಿದೆ ಎಂದು ಧಾರವಾಡದ ಕ.ವಿ.ವ ಸಂಘದ ಉಪಾಧ್ಯಕ್ಷ ಡಾ. ಸಂಜೀವ ಕುಲಕರ್ಣಿ ಹೇಳಿದರು.  

ಅವರು ಕರ್ನಾಟಕ ವಿದ್ಯಾವರ್ಧಕ ಸಂಘದ ಶಿಕ್ಷಣ ಮಂಟಪವು, ಗುಡಗೇರಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ‘ಹದಿಹರೆಯದ ಸಮಸ್ಯೆಗಳು ಹಾಗೂ ಪರಿಹಾರೋಪಾಯ’ ವಿಷಯ ಕುರಿತು ಉಪನ್ಯಾಸ ನೀಡಿದರು. 

ವಿದ್ಯಾರ್ಥಿಗಳು ಹದಿಹರೇಯದಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಈ ಅವಧಿಯಲ್ಲಿ  ಸಹಜವಾಗಿ ಭಾವನಾತ್ಮಕವಾಗಿ, ದೈಹಿಕವಾಗಿ ಹಾಗೂ ಮಾನಸಿಕವಾಗಿ ಬದಲಾವಣೆಗಳಾಗುತ್ತಿದ್ದು ಸಿಟ್ಟು, ಖಿನ್ನತೆ, ಆತಂಕ, ಲೈಂಗಿಕ ಆಕರ್ಷಣೆ, ಹತಾಶೆ ಮನೋಭಾವ ಉಂಟಾಗುತ್ತವೆ. ವಿದ್ಯಾರ್ಥಿಗಳು ತಾವು ಕಂಡ ಕನಸು ನನಸಾಗದೇ ಇದ್ದರೆ ದುಶ್ಚಟಗಳಿಗೆ ಬಲಿಯಾಗಬಹುದು. ಸಮೂಹ ಮಾಧ್ಯಮಗಳೂ ಸಹ ವಿದ್ಯಾರ್ಥಿಗಳ ಮನಸ್ಸನ್ನು ಕಲ್ಮಷಗೋಳಿಸುತ್ತವೆ. ಓದಿನಲ್ಲಿ ಆಸಕ್ತಿ ಕಡಿಮೆಯಾಗಿ ಏಕಾಗ್ರತೆಗೆ ಭಂಗ ಉಂಟಾಗುತ್ತದೆ. ಈ ದೆಸೆಯಲ್ಲಿ ಪೋಷಕರು ಹಾಗೂ ಶಿಕ್ಷಕರು ಸೂಕ್ತ ಮಾರ್ಗದರ್ಶನ ನೀಡಬೇಕು. ವಿದ್ಯಾರ್ಥಿಗಳು ತಮ್ಮ ಜವಾಬ್ದಾರಿ ಅರಿತು ಆರೋಗ್ಯಕರ ಜೀವನ ಶೈಲಿ ಹೊಂದಬೇಕೆಂದು ಹೇಳಿದರು. 

ಸಂಶಿಯ ಕೆ.ಎಲ್‌.ಇ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ರಮೇಶ ಅತ್ತಿಗೇರಿ ಮಾತನಾಡಿ, ವಿದ್ಯಾರ್ಥಿಗಳು ಹದಿ ಹರೆಯದಲ್ಲಿ ಎಂತಹ ಸಮಸ್ಯೆ ಎದುರಾದರೂ ಧೃತಿಗೆಡದೇ ಸಮರ್ಥವಾಗಿ ಎದುರಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ನಿಮ್ಮ ಭವಿಷ್ಯದ ನಿರ್ಮಾತೃಗಳು ನೀವೇ. ಕೀಳು ಅಭಿರುಚಿ ತ್ಯಜಿಸಿ ಒಳ್ಳೆಯ ಹವ್ಯಾಸಗಳನ್ನು ಬೆಳಸಿಕೊಳ್ಳಬೇಕೆಂದರು. 

ಕ.ವಿ.ವ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ, ಹದಿಹರೆಯ ವಿದ್ಯಾರ್ಥಿ ಜೀವನದ ವಸಂತಕಾಲ. ಈ ಅವಧಿಯಲ್ಲಿ ವಿದ್ಯಾರ್ಥಿಗಳು ಸಮಾಜಕ್ಕೆ ಉಪಯುಕ್ತವಾಗುವಂತೆ ಬದುಕಬೆಕೇ ವಿನಹ ಸಮಾಜಕ್ಕೆ ಹೊರೆಯಾಗಬಾರದು ಪರಿಶುದ್ದ ಭಾವನೆಯಿಂದ ಬದುಕಿ ಕುಟುಂಬಕ್ಕು ಸಮಾಜಕ್ಕೂ ಭರವಸೆಯ ವ್ಯಕ್ತಿಗಳಾಗಬೇಕೆಂದರು. ಕಾಲೇಜಿನ ಸಿಡಿಸಿ ಉಪಾಧ್ಯಕ್ಷರಾದ ಅಪ್ಪಣ್ಣ ಹುಂಡೇಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 

ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಗಂಗಾಧರ ಗುಮ್ಮಗೋಳಮಠ ಅಧ್ಯಕ್ಷತೆ ವಹಿಸಿ ಮಾತನಾಡಿ, ಕ.ವಿ.ವ ಸಂಘ ನಾಡಿನ ಹೆಮ್ಮೆಯ ಸಂಸ್ಥೆಯಾಗಿದ್ದು, ಅನೇಕ ಹೋರಾಟಗಳಿಗೆ ಸಾಕ್ಷಿಯಾಗಿದೆ. ಸಂಘದ ಈ ಕಾರ್ಯ ಶ್ಲಾಘನೀಯ ಎಂದರು. 

ವಾಯ್‌. ಎಚ್‌. ಬೀರಣ್ಣವರ ಸ್ವಾಗತಿಸಿದರು, ಕ.ವಿ.ವ ಸಂಘದ ಶಿಕ್ಷಣ ಮಂಟಪ ಸಂಚಾಲಕ ವೀರಣ್ಣ ಒಡ್ಡೀನ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಭೀಮೇಶ ಯರಡೋಣಿ ನಿರ್ವಹಿಸಿದರು. ಬಿ. ಸಿ. ಅಮಾತಿ ವಂದಿಸಿದರು. 

ಕಾರ್ಯಕ್ರಮದಲ್ಲಿ ಶಂಭಯ್ಯ ಹಿರೇಮಠ, ಡಾ. ಹನುಮಂತ ಕಲ್ಲೋಳಿಕರ, ದೇವರಾಜು, ಚೇತನಾ, ಡಾ. ಸಂಗಮೇಶ ಬಸರಕೋಡ, ಮೆಹಬೂಬ ಶೇಖ, ವೀರೇಶ ಶಹಪೂರಕರ ಸೇರಿದಂತೆ ಮುಂತಾದವರಿದ್ದರು.