ಗಡಿ ಮರಾಠಿ ಶಾಲೆಗಳಲ್ಲಿ ಕನ್ನಡ ಕಹಳೆ: 7 ಕನ್ನಡ ಪ್ರಾಥಮಿಕ, 2 ಪ್ರೌಡ ಶಾಲೆಗಳಿಗೆ ರಾಜ್ಯ ಸರಕಾರ ಗ್ರಿನ್ ಸಿಗ್ನಲ್

ಗಡಿ ಮರಾಠಿ ಶಾಲೆಗಳಲ್ಲಿ ಕನ್ನಡ ಕಹಳೆ: 7 ಕನ್ನಡ ಪ್ರಾಥಮಿಕ, 2 ಪ್ರೌಡ ಶಾಲೆಗಳಿಗೆ ರಾಜ್ಯ ಸರಕಾರ ಗ್ರಿನ್ ಸಿಗ್ನಲ್ Kannada trumpet in border Marathi schools: State government gives green signal to 7 Kannada primary

ಪಾರೇಶ ಭೋಸಲೆ 

ಬೆಳಗಾವಿ : ಗಡಿ ಕನ್ನಡಿಗರು ದಶಕಗಳಿಂದ ನಡೆಸುತ್ತಿದ್ದ ಹೋರಾಟಕ್ಕೆ ಮನ್ನಣೆ ಸಿಕ್ಕಂತಾಗಿದ್ದು, ಎಮ್‌ಇಎಸ್ ಪ್ರಾಬಲ್ಯ ಇರುವ ಬೆಳಗಾವಿ ಜಿಲ್ಲೆಯ ಗಡಿ ಗ್ರಾಮಗಳಲ್ಲಿನ ಮರಾಠಿ ಸರ್ಕಾರಿ ಶಾಲೆಗಳ ಜೊತೆಗೆ 2026-27ನೇ ಸಾಲಿನಿಂದ ಹೆಚ್ಚುವರಿಯಾಗಿ 7 ನೂತನ ಕನ್ನಡ ಮಾಧ್ಯಮ ಶಾಲೆಗಳ ಮಂಜೂರು ಹಾಗೂ 2 ಪ್ರೌಢ ಶಾಲೆಗಳನ್ನಾಗಿ ಉನ್ನತೀಕರಿಸಲು ರಾಜ್ಯ ಸರಕಾರ ಹೆಜ್ಜೆಯೊಂದನ್ನು ಇಟ್ಟಿದ್ದು, ಗಡಿ ಭಾಗದಲ್ಲಿ ಮರಾಠಿಮಯವಾಗಿದ್ದ ಗ್ರಾಮಗಳಲ್ಲಿ ಈಗ ಕನ್ನಡ ಡಿಂ ಡಿಂಕ್ಕೆ ಇದೊಂದು ಸುವರ್ಣ ಅವಕಾಶ ಬಂದೋದಗಿದೆ ಎಂದು ಊಹಿಸಲಾಗುತ್ತಿದೆ. 

   ಹೌದು ಓದುಗರೇ.... ಬೆಳಗಾವಿ ಹಾಗೂ ಖಾನಾಪೂರ ತಾಲೂಕಿನ ಗಡಿ ಭಾಗಗಳಲ್ಲಿನ ಕೆಲವು ಗ್ರಾಮಗಳಲ್ಲಿ ಕೇವಲ ಮರಾಠಿ ಶಾಲೆಗಳು ಕರ‍್ಯ ಮಾಡುತ್ತಿದ್ದು, ಮರಾಠಿಮಯ ವಾತಾವರಣ ನಿರ್ಮಾಣವಾಗಿದೆ. ಅಲ್ಲಿ ಕನ್ನಡ ಶಾಲೆಗಳ ತರಗತಿಗಳು ಇಲ್ಲದೆ ಕನ್ನಡ ಶಾಲೆಗಳಿಂದ ವಿದ್ಯಾರ್ಥಿಗಳು ವಂಚಿತರಾಗಿ ಅನಿವರ‍್ಯವಾಗಿ ಮರಾಠಿ ಶಾಲೆಗಳತ್ತ ಮುಖ ಮಾಡುವ ಅನಿವರ‍್ಯತೆ ಉಂಟಾಗಿತ್ತು. ಮರಾಠಿಮಯವಾಗಿದ್ದ ಗಡಿ ಭಾಗದ ಗ್ರಾಮಗಳಲ್ಲಿ 2026-27ನೇ ಶೈಕ್ಷಣಿಕ ಸಾಲಿನಿಂದ ಕನ್ನಡ ಮಾಧ್ಯಮ ಶಾಲೆಗಳನ್ನು ಪ್ರಾರಂಭಿಸಲು ಹಾಗೂ ಪ್ರೌಢ ಶಾಲೆಗಳನ್ನಾಗಿ ಉನ್ನತೀಕರಿಸಲು ರಾಜ್ಯ ಸರಕಾರ ತೀರ್ಮಾನ ಮಾಡಿದೆ. 

ಗಡಿ ಭಾಗದ ಗ್ರಾಮಗಳಲ್ಲಿ ಕೇವಲ ಮರಾಠಿ ಶಾಲೆಗಳು ಪ್ರಾರಂಭ ಇದ್ದು, ಇದರಿಂದ ಗಡಿಭಾಗ ಪ್ರದೆಶದಲ್ಲಿನ ಕನ್ನಡ ಶಾಲೆಗಳು ಅಳವಿನಂಚಿನಲ್ಲಿ ಇವೆ ಎನ್ನುವ ಕೂಗು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಶಾಲಾ ದಾಖಲಾತಿ ಅಥವಾ ಹಾಜರಾತಿ ಕಾರಣಕ್ಕೋ ಗಡಿ ಕನ್ನಡ ಶಾಲೆಗಳನ್ನು ಮುಚ್ಚುವ ಹುನ್ನಾರ ಕೆಲವರಿಂದ ನಡೆದಿತ್ತು. ರಾಜ್ಯ ಸರಕಾರ ಬೆಳಗಾವಿ ಹಾಗೂ ಖಾನಾಪೂರ ತಾಲೂಕಿನ 7 ಕನ್ನಡ ಶಾಲೆಗಳನ್ನು ಮಂಜೂರು ಮಾಡುವ ಮೂಲಕ ಹಾಗೂ 2 ಪ್ರಾಥಮಿಕ ಶಾಲೆಗಳನ್ನು ಪ್ರೌಡ ಶಾಲೆಗಳನ್ನಾಗಿ ಮಾಡುವ ಮೂಲಕ ಕನ್ನಡತನವನ್ನು ಮೆರೆದಿದೆ. 

     2026-27ನೇ ಶೈಕ್ಷಣಿಕ ಸಾಲಿನಿಂದ ಬೆಳಗಾವಿ ಜಿಲ್ಲೆಯ ಗಡಿ ಭಾಗದ ಗ್ರಾಮಗಳಲ್ಲಿ ಮರಾಠಿ ಮಾಧ್ಯಮದ ಸರ್ಕಾರಿ ಪ್ರಾಥಮಿಕ ಶಾಲೆಗಳ ಆವರಣದಲ್ಲಿ ಹೆಚ್ಚುವರಿಯಾಗಿ ಕನ್ನಡ ಮಾಧ್ಯಮ ಶಾಲೆಗಳನ್ನು ಪ್ರಾರಂಭಿಸಲು ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರೌಢ ಶಾಲೆಗಳನ್ನಾಗಿ ಉನ್ನತೀಕರಿಸಲು ಅನುಮತಿ ನೀಡಲಾಗಿದ್ದು, ಈ ಶಾಲೆಗಳು ಇದೇ 2026-27ನೇ ಸಾಲಿನಿಂದ ಕರ‍್ಯ ಮಾಡುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. 

ರಾಜ್ಯದ ಗಡಿ ಭಾಗದ ಗ್ರಾಮಗಳಲ್ಲಿ ಮರಾಠಿ ಮಾಧ್ಯಮ ಪ್ರಾಥಮಿಕ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, ಈ ಗ್ರಾಮಗಳಲ್ಲಿ, ಹಲವಾರು ಕನ್ನಡ ಭಾಷಿಕ ಕುಟುಂಬಗಳು ವಾಸವಾಗಿದ್ದು, ಕನ್ನಡ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ವಿಭಾಗಗಳು ಇಲ್ಲದೇ ಇರುವ ಕಾರಣ ಮಕ್ಕಳು ದೂರದ ಊರುಗಳ ಶಾಲೆಗೆ ತೆರಳುತ್ತಿದ್ದು, ಇದರಿಂದಾಗಿ ಕನ್ನಡ ಮಾಧ್ಯಮದಲ್ಲಿ ಕಲಿಯಲು ಅನಾನುಕೂಲವಾಗಿದ್ದು, ಪ್ರಸ್ತುತ ಚಾಲ್ತಿಯಲ್ಲಿರುವ ಸರ್ಕಾರಿ ಮರಾಠಿ ಮಾಧ್ಯಮ ಶಾಲೆಗಳಲ್ಲಿ, ಹೆಚ್ಚುವರಿಯಾಗಿ ಕನ್ನಡ ಮಾಧ್ಯಮ ವಿಭಾಗವನ್ನು ಪ್ರಾರಂಭಿಸಲು ಹಾಗೂ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಕನ್ನಡ ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರೌಢ ಶಾಲೆಗಳನ್ನಾಗಿ ಉನ್ನತೀಕರಿಸಲು ಅವಶ್ಯವಿರುವುದಾಗಿ ತಿಳಿಸಿ ಅಪರ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಧಾರವಾಡ ಇವರು ಸರ್ಕಾರಕ್ಕೆ ಪುಸ್ತಾವನೆಯನ್ನು ಸಲ್ಲಿಸಿರುತ್ತಾರೆ.

     ಬೆಳಗಾವಿ ಗ್ರಾಮೀಣದಲ್ಲಿ ಬರುವ ಸಾವಗಾಂವ ಸರ್ಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆ, ಬೆಳಗಾವಿ ಗ್ರಾಮೀಣದಲ್ಲಿ ಬರುವ ಬಾಚಿ ಸರ್ಕಾರಿ ಕಿರಿಯ ಕನ್ನಡ ಪ್ರಾಥಮಿಕ ಶಾಲೆ, ಖಾನಾಪೂರ ತಾಲೂಕಿನ ಕಾಟಗಾಳಿ ಸರ್ಕಾರಿ ಕಿರಿಯ ಕನ್ನಡ ಪ್ರಾಥಮಿಕ ಶಾಲೆ, ಖಾನಾಪೂರ ಬಿದರಬಾವಿ ಸರ್ಕಾರಿ ಕಿರಿಯ ಕನ್ನಡ ಪ್ರಾಥಮಿಕ ಶಾಲೆ, ಖಾನಾಪೂರ ಗವಳಿವಾಡಾ ಸರ್ಕಾರಿ ಕಿರಿಯ ಕನ್ನಡ (ರಾಜವಾಳ) ಪ್ರಾಥಮಿಕ ಶಾಲೆ, ಖಾನಾಪೂರ ಹಣಬರವಾಡಾ ಸರ್ಕಾರಿ ಕಿರಿಯ ಕನ್ನಡ ಪ್ರಾಥಮಿಕ ಶಾಲೆ, ಖಾನಾಪೂರ ಶಿರೋಲಿವಾಡಾ ಸರ್ಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆ ಇವುಗಳನ್ನು ಪ್ರಾರಂಭಿಸಲು ಹಾಗೂ ಬೆಳಗಾವಿ ತಾಲೂಕಿನ ಹಿಂಡಲಗಾ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಮತ್ತು ಅದೇ ರೀತಿಯಾಗಿ ಖಾನಾಪೂರ ತಾಲೂಕಿನ ಜಾಂಬೋಟಿ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯನ್ನು ಉನ್ನತಿಕರಣಕ್ಕಾಗಿ ರಾಜ್ಯ ಸರಕಾರ ಆದೇಶಿಸಿದೆ. 

    ಬೆಳಗಾವಿಯ ಕನ್ನಡಪರ ಹೋರಾಟಗಾರ ಮನವಿಗೆ ಗಡಿ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಅವರು ಸೈ ಎಂದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಕೂಡಾ ಕನ್ನಡಕ್ಕಾಗಿ ಕೈ ಎತ್ತಿದೆ.

   ರಾಜ್ಯ ಸರಕಾರ ಶಿಕ್ಷಣ ಇಲಾಖೆ ಸೇರಿಕೊಂಡು ಈ ಕನ್ನಡಮಯ ನಿರ್ಧಾರ ಕೈಗಿಂಡಿವೆ ಎಂದು ಶಿಕ್ಷಣ ಇಲಾಖೆ ಡಿಡಿಪಿಐ ಅವರು ತಿಳಿಸಿದ್ದಾರೆ. ಇದೊಂದು ಉತ್ತಮ ವಾದ ನಡೆ ಎಂದಿದ್ದಾರೆ.

ಪ್ರತಿರೋಧಕ್ಕೆ ಹೆದರದೆ ಮಕ್ಕಳನ್ನು ಕನ್ನಡ ಶಾಲೆಗೆ ಸೇರಿಸಿ : ಚಂದರಗಿ

ಮರಾಠಿ ಶಾಲೆಗಳ ಆವರಣದಲ್ಲಿ ಕನ್ನಡ ಮಾಧ್ಯಮ ಶಾಲೆಗಳು ಸ್ಥಾಪನೆ ಬೇಡ ಅನ್ನುವ ನಿಟ್ಟಿನಲ್ಲಿ ಕೆಲವರು ವರ್ತಿಸುತ್ತಿದ್ದು, ಕನ್ನಡ ಕಲಿಸಲು ಇಚ್ಚಿಸುವ ಪಾಲಕರು ಮರಾಠಿಗರ ಯಾವದೇ ಪ್ರತಿರೋಧ ಬಂದರೂ ಎದುರಿಸಿ ಮಕ್ಕಳನ್ನು ಇದೇ ಜೂನ್ 1ರಿಂದ ಕನ್ನಡ ಶಾಲೆಗೆ ಹಾಕಲು ಮುಂದಾಗಬೇಕು. ಈ ನಿಟ್ಟಿನಲ್ಲಿ ಕನ್ನಡ ಸಂಘಟನೆಗಳು ಕನ್ನಡ ಶಾಲೆ ವಿದ್ಯಾರ್ಥಿಗಳ ಮತ್ತು ಪಾಲಕರ ಬೆಂಬಲಕ್ಕೆ ನಿಲ್ಲಲಿವೆ ಎಂದು ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ತಿಳಿಸಿದ್ದಾರೆ.