ರಾಜ್ಯ

ಚಿಕ್ಕಬಳ್ಳಾಪುರ ನ್ಯಾಯಾಲಯದಲ್ಲಿ ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟ-ಮಂತ್ರದ ಆರೋಪ; ಮಹಿಳೆ ಬಂಧನ

ಚಿಕ್ಕಬಳ್ಳಾಪುರ ನ್ಯಾಯಾಲಯದಲ್ಲಿ ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟ-ಮಂತ್ರದ ಆರೋಪ; ಮಹಿಳೆ ಬಂಧನ

ಚಿಕ್ಕಬಳ್ಳಾಪುರ, ಜುಲೈ 14: ಚಿಕ್ಕಬಳ್ಳಾಪುರದ ನ್ಯಾಯಾಲಯವೊಂದರಲ್ಲಿ ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟ-ಮಂತ್ರ ನಡೆಸುವ ಮೂಲಕ ನ್ಯಾಯಾಂಗದ ಪ್ರಕ್ರಿಯೆಯ ಮೇಲೆ ಪ್ರಭಾವ ಬೀರುವ ಪ್ರಯತ್ನ ನಡೆಸಿದ ಆರೋಪದಡಿ 65 ವರ್ಷದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತೆಯನ್ನು ಮಂಜುಳಾ ಎಂದು ಗುರುತಿಸಲಾಗಿದೆ. ಆಕೆ 1ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಂಗ ಕೊಠಡಿಗೆ ಪ್ರವೇಶಿಸಿ, ಮಾಟ-ಮಂತ್ರದ ಆಚರಣೆಯಲ್ಲಿ ಬಳಸಲಾಗುತ್ತದೆ ಎನ್ನಲಾದ ಬಿಳಿ ಸಾಸಿವೆ ಕಾಳುಗಳನ್ನು ನ್ಯಾಯಾಧೀಶರ ಕುರ್ಚಿಯ ಮೇಲೆ ಎರಚಿರುವುದಾಗಿ ಆರೋಪಿಸಲಾಗಿದೆ.

ಎರಡು ದಿನಗಳ ಹಿಂದೆ ನಡೆದಿದ್ದ ಈ ಘಟನೆ ನ್ಯಾಯಾಲಯದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದು, ಅದರ ದೃಶ್ಯಾವಳಿಯನ್ನು ಪರಿಶೀಲಿಸಿದ ಬಳಿಕ ನ್ಯಾಯಾಲಯದ ಆಡಳಿತ ವಿಭಾಗವು ಪೊಲೀಸರಿಗೆ ಮಾಹಿತಿ ನೀಡಿತು.

ನ್ಯಾಯಾಲಯದ ಮುಖ್ಯ ಆಡಳಿತಾಧಿಕಾರಿ ನೇತ್ರಾ ನೀಡಿದ ದೂರಿನ ಮೇರೆಗೆ ಚಿಕ್ಕಬಳ್ಳಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದು, ಅದರಂತೆ ಮಂಜುಳಾಳನ್ನು ಬಂಧಿಸಿದ್ದಾರೆ.

ಆರೋಪಿತೆಯ ವಿರುದ್ಧ ಕರ್ನಾಟಕ ಅಮಾನವೀಯ ದುಷ್ಟ ಆಚರಣೆಗಳು ಮತ್ತು ಮಾಟ-ಮಂತ್ರ ತಡೆ ಹಾಗೂ ನಿರ್ಮೂಲನೆ ಕಾಯ್ದೆ, 2017ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಬಂಧಿತೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆಕೆಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಈ ಕೃತ್ಯದ ಹಿಂದಿನ ಉದ್ದೇಶವೇನು ಹಾಗೂ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಯಾವುದೇ ಪ್ರಕರಣದ ತೀರ್ಪಿನ ಮೇಲೆ ಪ್ರಭಾವ ಬೀರುವ ಉದ್ದೇಶವಿತ್ತೇ ಎಂಬ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಸುದ್ದಿ ಓದಿ