ಚಿಕ್ಕಜಗಳೂರು ಶಿಕ್ಷಕ ಬಿ. ವೆಂಕಟೇಶ್ ರವರನ್ನು ಗೌರವಾನ್ವಿತವಾಗಿ ಬೀಳ್ಕೊಟ್ಟ ಗ್ರಾಮಸ್ಥರು

ಚಿಕ್ಕಜಗಳೂರು ಶಿಕ್ಷಕ ಬಿ. ವೆಂಕಟೇಶ್ ರವರನ್ನು ಗೌರವಾನ್ವಿತವಾಗಿ ಬೀಳ್ಕೊಟ್ಟ ಗ್ರಾಮಸ್ಥರು Villagers bid farewell to Chikkajagalur teacher B. Venkatesh with respect

ಚಿತ್ರದುರ್ಗ 02 : ಚಿತ್ರದುರ್ಗ ತಾಲೂಕಿನ ಚಿಕ್ಕಜಗಳೂರಿನ (ತಮ್ಮನಟ್ಟಿ) ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ ಇಪ್ಪತ್ತೆಂಟು ವರ್ಷಗಳಿಂದ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ ಬಿ ವೆಂಕಟೇಶ್ ರವರು ಮುಖ್ಯ ಶಿಕ್ಷಕರಾಗಿ ಬಡ್ತಿ ಪಡೆದು ತಾಲೂಕಿನ ಸುಲ್ತಾನಿಪುರದ (ಲಿಂಗದಹಳ್ಳಿ) ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಅವರನ್ನು ಗ್ರಾಮದ ಹಳೆಯ ವಿದ್ಯಾರ್ಥಿಗಳು, ಗ್ರಾಮಸ್ಥರು ಅದ್ಧೂರಿ ಕಾರ್ಯಕ್ರಮ ಮಾಡಿ ಗೌರವಾನ್ವಿತವಾಗಿ ಬೀಳ್ಕೊಟ್ಟರು. 

ಚಿಕ್ಕಜಗಳೂರಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಭಿನಂದನಾ ಹಾಗೂ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರನ್ನು ಸನ್ಮಾನಿಸಿ, ಗೌರವಿಸಿ, ಬೀಳ್ಕೊಡಲಾಯಿತು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಶಿಕ್ಷಕರಾದ ತಿಪ್ಪೇಸ್ವಾಮಿ ಜಿ.ಹೆಚ್ ರವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಿ.ಆರ್‌.ಪಿ ಮಾಲತೇಶ್, ಬಿ.ಐ.ಇ.ಆರ್‌.ಟಿ ರಾಜಪ್ಪ, ಬಿ.ಆರ್‌.ಸಿ ವೇದಮೂರ್ತಿ, ವಿವಿಧ ಶಾಲೆಗಳ ಮುಖ್ಯ ಶಿಕ್ಷಕರು, ಶಿಕ್ಷಕರಾದ ಕಮಲಾ, ಮಂಜುನಾಥಾಚಾರ್ಯಿ, ರವಿ ಶಂಕರ್, ಚನ್ನಕೇಶವ, ಉಮೇಶ್, ಮಾರುತೇಶ, ಮಹಾರುದ್ರ​‍್ಪ, ಶಾಲೆಯ ಎಸ್ಡಿಎಂಸಿ ಅಧ್ಯಕ್ಷರಾದ ಪಾಪಯ್ಯ ಪಿ, ಗ್ರಾಮ ಪಂಚಾಯತಿ ಸದಸ್ಯರಾದ ಮಹಾಂತೇಶ್ ಎನ್ ರವರು ಸೇರಿದಂತೆ ಶಾಲೆಯ ಹಳೆಯ ವಿದ್ಯಾರ್ಥಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು. 

ಶಿಕ್ಷಕ ಬಿ ವೆಂಕಟೇಶ್ ರವರ ಹಿನ್ನೆಲೆ: 

ಚಿತ್ರದುರ್ಗ ತಾಲೂಕಿನ ಹುಣಸೆಕಟ್ಟೆಯ ಎತ್ತಿನಬಡಯ್ಯ -  ಬೊರಮ್ಮ ದಂಪತಿಗಳ ಮಗನಾದ ಬಿ ವೆಂಕಟೇಶ್ ರವರು 1994ರಲ್ಲಿ ಶಿಕ್ಷಕ ವೃತ್ತಿ ಆರಂಭಿಸಿದ್ದು, ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಎಸ್ ಬಿದ್ರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1994 ರಿಂದ 1997ರವರೆಗೆ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. 

ಬಳಿಕ 1997ರಲ್ಲಿ ಚಿತ್ರದುರ್ಗ ತಾಲೂಕಿನ ಚಿಕ್ಕಜಗಳೂರಿನ (ತಮ್ಮನಟ್ಟಿ) ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ವರ್ಗಾವಣೆಗೊಂಡ ಅವರು ಅಲ್ಲಿಂದ ಇಲ್ಲಿಯವರೆಗೂ ಸಹ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಇದೀಗ ಮುಖ್ಯ ಶಿಕ್ಷಕರಾಗಿ ಮುಂಬಡ್ತಿ ಪಡೆದ ಅವರು ತಾಲೂಕಿನ ಸುಲ್ತಾನಿಪುರದ (ಲಿಂಗದಹಳ್ಳಿ) ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವರ್ಗಾವಣೆಗೊಂಡಿದ್ದಾರೆ. 

ಮಕ್ಕಳ ಅಚ್ಚುಮೆಚ್ಚಿನ ಶಿಕ್ಷಕ, ಗ್ರಾಮಸ್ಥರ ಪಾಲಿನ ಮಾರ್ಗದರ್ಶಕ: 

ಬಿ ವೆಂಕಟೇಶ್ ರವರು ಚಿಕ್ಕಜಗಳೂರಿನ ಶಾಲೆಗೆ ಶಿಕ್ಷಕರಾಗಿ ಬಂದಾಗಿನಿಂದಲೂ ಇಲ್ಲಿಯವರೆಗೂ ಶಾಲೆಯ ಮಕ್ಕಳ ಪಾಲಿಗೆ ಅಚ್ಚುಮೆಚ್ಚಿನ ಶಿಕ್ಷಕರಾಗಿಯೇ ಗುರುತಿಸಿಕೊಂಡಿದ್ದಾರೆ. ಅಷ್ಟು ಮಾತ್ರವಲ್ಲದೇ ಗ್ರಾಮದ ಜನರ, ಪೋಷಕರ ಪಾಲಿಗೆ ಇವರು ಮಾರ್ಗದರ್ಶಕರಾಗಿದ್ದಾರೆ. ಶಿಕ್ಷಣದ ಜೊತೆಗೆ ಬದುಕಿನ ಪಾಠಗಳನ್ನು ಹೇಳಿಕೊಟ್ಟಿದ್ದಾರೆ. 

ಶಾಲೆಯಲ್ಲಿ ಉತ್ತಮ ಪರಿಸರ ನಿರ್ಮಿಸಿದ ಕೀರ್ತಿ: 

ಬಿ ವೆಂಕಟೇಶ್ ರವರು ಚಿಕ್ಕಜಗಳೂರಿನ ಶಾಲೆಯಲ್ಲಿ ಸಸಿಗಳನ್ನು ನೆಟ್ಟು, ಬೆಳಸುವ ಮೂಲಕ ಶಾಲೆಯಲ್ಲಿ ಹಚ್ಚಹಸುರಿನ ಪರಿಸರ ನಿರ್ಮಾಣ ಮಾಡಿದ್ದಾರೆ. ಗಿಡಮರಗಳನ್ನು ಮಕ್ಕಳಂತೆ ಕಾಪಾಡಿದ ಅವರು, ಶಾಲೆಯ ಅವರಣದಲ್ಲಿ ಉತ್ತಮ ಪರಿಸರ ನೆಲೆಸಲು ಪೂರಕವಾಗಿ ಕೆಲಸ ಮಾಡಿದ್ದಾರೆ. 

ಒಟ್ಟಾರೆಯಾಗಿ ಚಿಕ್ಕಜಗಳೂರಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ದೇವಾಲಯದಂತೆ ಭಾವಿಸಿ ಕರ್ತವ್ಯ ನಿರ್ವಹಿಸಿದ ಅವರು ತಮ್ಮ 28 ವರ್ಷಗಳ ಸುಧೀರ್ಘ ಸೇವೆಯಲ್ಲಿ ಅನೇಕ ಮಕ್ಕಳ ಬಾಳಿಗೆ ಬೆಳಕಾಗಿದ್ದಾರೆ. ಅತ್ಯುತ್ತಮ ಶಿಕ್ಷಕ ಎಂಬ ಹೆಗ್ಗಳಿಕೆ ಪಡೆದ ಅವರು, ಮುಂಬಡ್ತಿ ಪಡೆದು ಬೇರೆ ಶಾಲೆಗೆ ವರ್ಗಾವಣೆಗೊಂಡಿರುವ ಈ ಶುಭ ಸಂದರ್ಭದಲ್ಲಿ ಅವರಿಗೆ ಶುಭವಾಗಲಿ ಎಂಬುದೇ ನಮ್ಮೆಲ್ಲರ ಆಶಯವಾಗಿದೆ.