ಹಾನಗಲ್‌ನ ಗ್ರಾಮಗಳಲ್ಲಿ ಹಕ್ಕುಪತ್ರ ವಿತರಣಾ ಕಾರ್ಯಕ್ರಮ

ಹಾನಗಲ್‌ನ ಗ್ರಾಮಗಳಲ್ಲಿ ಹಕ್ಕುಪತ್ರ ವಿತರಣಾ ಕಾರ್ಯಕ್ರಮ Title deed distribution program in villages of Hanagal

ಲೋಕದರ್ಶನ ವರದಿ 

ಹಾನಗಲ್ 13 : ಸದಾಕಾಲ ಬಡವರಿಗಾಗಿ ಕಾರ್ಯಕ್ರಮಗಳ ಮೂಲಕ ಶಕ್ತಿ ತುಂಬಿ, ರಕ್ಷಣೆ ಕೊಡುತ್ತಿರುವ ಕಾಂಗ್ರೆಸ್ ಸರ್ಕಾರ ಇದೀಗ ಯಾವುದೇ ದಾಖಲೆಗಳಿಲ್ಲದೇ ಹಾಗೆಯೇ ವಾಸಿಸುತ್ತಿದ್ದ ತಾಲೂಕಿನ 13 ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ಕಳೆದ 2 ವರ್ಷಗಳಿಂದ ನಿರಂತರ ಶ್ರಮ ವಹಿಸಿ ಶಾಶ್ವತ ಮನೆ ಮಾಲಿಕತ್ವ ದೊರಕಿಸಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು. 

ತಾಲೂಕಿನ ಮಾಸನಕಟ್ಟಿ ಗ್ರಾಮದಲ್ಲಿ ನಡೆದ ಸಮಾರಂಭದಲ್ಲಿ ನಾನಾ ಕಂದಾಯ ಗ್ರಾಮ, ಉಪ ಗ್ರಾಮಗಳ ಒಟ್ಟು 483 ಫಲಾನುಭವಿ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಿ ಅವರು ಮಾತನಾಡಿದರು. ಕಂದಾಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್, ನೋಂದಣಿ, ಸರ್ವೆ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಯ ಶ್ರಮ ಈ ಕಾರ್ಯದಲ್ಲಿ ಹೆಚ್ಚಿದೆ. ಕನಿಷ್ಟ 10 ಲಕ್ಷ ರೂ. ಬೆಲೆ ಬಾಳುವ ಆಸ್ತಿಯ ಮಾಲಿಕತ್ವ ಬಡ ಮತ್ತು ಮಧ್ಯಮ ವರ್ಗಗಳಿಗೆ ಸೇರಿದ ಕುಟುಂಬಗಳಿಗೆ ಸಿಕ್ಕಿದೆ. ಹಕ್ಕುಪತ್ರ ವಿತರಿಸುವ ಕೆಲಸ ಒಂದೇ ದಿನದಲ್ಲಿ ಆಗಿಲ್ಲ. ಇದರ ಹಿಂದಿನ ಪರಿಶ್ರಮ ದೊಡ್ಡದಿದೆ. ಕಂದಾಯ ಗ್ರಾಮ ಮತ್ತು ಉಪ ಗ್ರಾಮಗಳಿಗೆ ಅನುಮೋದನೆ ಪಡೆಯುವುದು ಸುಲಭದ ಕೆಲಸವಲ್ಲ. ತಾಲೂಕಿನಿಂದ ಕಳುಹಿಸಿದ ಅಷ್ಟೂ ಪ್ರಸ್ತಾವನೆಗಳಿಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಕಾಂಗ್ರೆಸ್ ಸರ್ಕಾರವನ್ನು ಆಯ್ಕೆ ಮಾಡಿಕೊಂಡಿದ್ದರಿಂದಲೇ ಇಷ್ಟೊಂದು ದೊಡ್ಡ ಪ್ರಮಾಣದ ಕುಟುಂಬಗಳು ಬದುಕಿನಲ್ಲಿ ನೆಮ್ಮದಿ ಕಾಣುತ್ತಿವೆ ಎಂದು ಹೇಳಿದ ಅವರು ತುರ್ತು ಸಂದರ್ಭದಲ್ಲಿ ಈ ಆಸ್ತಿ ನೆರವಿಗೆ ಬರಲಿದೆ. ಅವಶ್ಯತೆಗೆ ತಕ್ಕಂತೆ ಸಾಲ ಪಡೆಯಬಹುದು, ಉತ್ತಮ ಮನೆ ಕಟ್ಟಿಕೊಳ್ಳಬಹುದು, ಅನಿವಾರ್ಯ ಸಂದರ್ಭ ಬಂದೊದಗಿದರೆ ಮಾರಾಟ ಸಹ ಮಾಡಬಹುದು ಎಂದರು. 

ತಹಶೀಲ್ದಾರ್ ರೇಣುಕಾ ಎಸ್‌. ಮಾತನಾಡಿ, ಸರ್ಕಾರಿ ಮತ್ತು ಖಾಸಗಿ ಜಮೀನುಗಳಲ್ಲಿ ಮನೆ ಕಟ್ಟಿಕೊಂಡು ಅನೇಕ ವರ್ಷಗಳಿಂದ ವಾಸಿಸುತ್ತಿದ್ದ ಕುಟುಂಬಗಳಿಗೆ ತೊಂದರೆ ನೀಡಲಾಗುತ್ತಿತ್ತು. ಹಾಗಾಗಿ ನಿತ್ಯವೂ ಅತಂತ್ರತೆ ಮತ್ತು ಆತಂಕದಲ್ಲಿಯೇ ಕಾಲ ಕಳೆಯುವ ಪರಿಸ್ಥಿತಿ ಇತ್ತು. ನಮಗಿನ್ನು ಮನೆ ಮಾಲಿಕತ್ವ ಸಿಗುವುದಿಲ್ಲ ಎಂದು ಕುಟುಂಬಗಳು ನಿರ್ಧಾರಕ್ಕೆ ಬಂದು ಬಿಟ್ಟಿದ್ದವು. ಆದರೆ ಶಾಸಕ ಶ್ರೀನಿವಾಸ ಮಾನೆ ಅವರ ಕಳಕಳಿಯಿಂದ ಇಂದು ಸಾವಿರಾರು ಕುಟುಂಬಗಳು ಸ್ವತಂತ್ರವಾಗಿವೆ. ಆಸ್ತಿ ನೋಂದಣಿ ಮಾಡಿಕೊಟ್ಟು ಹಕ್ಕುಪತ್ರ, ಇಸ್ವತ್ತಿನೊಂದಿಗೆ ಮಾಲಿಕತ್ವ ಒದಗಿಸಲಾಗಿದೆ. ಇನ್ನು ಮುಂದೆ ಈ ದಾಖಲೆ ಅಳಿಸಲು, ತಿರುಚಲು ಸಾಧ್ಯವಿಲ್ಲ ಎಂದರು. 

ಇದೇ ಸಂದರ್ಭದಲ್ಲಿ ಆಲದಕಟ್ಟಿ ಗ್ರಾಮದ 107, ಇನಾಂ ದ್ಯಾಮನಕೊಪ್ಪ 87, ವಳಗೇರಿ 129, ಮಾಸನಕಟ್ಟಿ ಗ್ರಾಮದ 160 ಫಲಾನುಭವಿ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಲಾಯಿತು. ಕೆಪಿಸಿಸಿ ಸದಸ್ಯರಾದ ಟಾಕನಗೌಡ ಪಾಟೀಲ, ಖ್ವಾಜಾಮೊಹಿದ್ದೀನ್ ಜಮಾದಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹನುಮಂತಪ್ಪ ಮರಗಡಿ, ಮಂಜು ಗೊರಣ್ಣನವರ, ಹಾನಗಲ್ ನಗರ ಕಾಂಗ್ರೆಸ್ ಅಧ್ಯಕ್ಷ ಮತೀನ್ ಶಿರಬಡಗಿ ಸೇರಿದಂತೆ ತಾಲೂಕಿನ ಅನೇಕ ಕಾಂಗ್ರೆಸ್ ಮುಖಂಡರು, ಗ್ರಾಮಸ್ಥರು, ಕಂದಾಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಇದ್ದರು.