ಅಪ್ರತಿಮ ನಾಟಕಕಾರ, ಕವಿ, ವಿಲಿಯಂ ಶೇಕ್ಸಪಿಯರ್ : ಯುಗ ಯುಗಾಂತರಗಳ ಪ್ರತಿಭೆ

ಅಪ್ರತಿಮ ನಾಟಕಕಾರ, ಕವಿ, ವಿಲಿಯಂ ಶೇಕ್ಸಪಿಯರ್ : ಯುಗ ಯುಗಾಂತರಗಳ ಪ್ರತಿಭೆ The incomparable playwright, poet, William Shakespeare: A genius for the ages

ಲೋಕದರ್ಶನ ವರದಿ 

   ಧಾರವಾಡ  24:  ಪ್ರತಿಷ್ಠಿತ ಸಾಹಿತ್ಯಿಕ ಸಂಘಟನೆ ಅನ್ವೇಷಣಕೂಟದ ಆಶ್ರಯದಲ್ಲಿ ದಿ:23.04.2026 ಗುರುವಾರದಂದು ಸಾಧನಕೇರಿಯ ಚೈತ್ರದ ಸಭಾಂಗಣದಲ್ಲಿ ವಿಲಿಯಂ ಶೇಕ್ಸಪಿಯರ್ ಜನ್ಮದಿನದ ಅಂಗವಾಗಿ ಅಪ್ರತಿಮ ನಾಟಕಕಾರ, ಕವಿ, ಯುಗಯುಗಾಂತರಗಳ ಪ್ರತಿಭೆ ಹಾಗೂ ಈ ಭುವನದ ಭಾಗ್ಯದಾತ ವಿಲಿಯಂ ಶೇಕ್ಸಪಿಯರ್ ಉತ್ಸವದಲ್ಲಿ ಗೋವಾದ ಇಂಡೋ ಪೋರ್ಚುಗೀಜ ಸಾಹಿತ್ಯ ಪ್ರತಿಷ್ಠಾನದ ನಿರ್ದೇಶಕರಾದ ಡಾಽಽ ಅರವಿಂದ ಯಾಳಗಿಯವರು ಶೇಕ್ಸಪಿಯರ್‌ನನ್ನು ಕುರಿತು ಉದ್ಭೋದಕ ಭಾಷಣವನ್ನಿತ್ತರು.

        ಅವರು ಮುಂದುವರಿದು ಮಾತನಾಡುತ್ತ ಅವ್ಯಕ್ತ ಪರಮತ್ವತ್ವದ ವ್ಯಕ್ತರೂಪ ಸೌಂದರ್ಯದ ಆರಾಧಕ ಹಾಗೂ ಆತನ 154 ಸುನೀತಗಳು, ಕಥನ ಕಾವ್ಯಗಳು ಹಾಗೂ 37 ನಾಟಕಗಳು ಅಭಿಜಾತ ಪ್ರಜ್ಞೆಯ ಮೂಲಕ ಚಲನಶೀಲ ಹಾಗೂ ವಿಶ್ವ ಸಂಸ್ಕೃತಿಯನ್ನು ಅನಾವರಣಗೊಳಿಸುವುದರೊಂದಿಗೆ ತನ್ನ ಪ್ರತಿಭೆಯ ಹಾಗೂ ಭೂಮಾನ ಭಿತ್ತಿಗಳನ್ನು ಸಾಕಾರಗೊಳಿಸಿದ್ದಾರೆ. ವಿಲಿಯಂ ಶೇಕ್ಸಪಿಯರ್‌ನ ಪ್ರೇಮತತ್ವ ಸೃಷ್ಠಿಯಷ್ಟೆ ಸನಾತನ ಅಷ್ಟೇ ಅನಂತ. 

ಶೇಕ್ಸಪಿಯರ್‌ನ ಕಾವ್ಯ ನಾಟಕಗಳಲ್ಲಿ ರೂಪಗೊಂಡಿರುವ ಮೌಲ್ಯಗಳು ಕಳೆದ ನಾಲ್ಕು ಶತಮಾನಗಳಿಂದ ಮಾನವನ ಬದುಕನ್ನು ಪ್ರಭಾವಿಸುತ್ತಲೇ ಬಂದಿದೆ. ಸೆಕ್ಸಪಿಯರ್‌ನ ಸಾಹಿತ್ಯವನ್ನು ಈ ಯುಗಧರ್ಮದ ಸಮಕಾಲೀನ ಪ್ರಜ್ಞೆಯ ಅರಿವಿನ ಬೆಳಕಿನಲ್ಲಿ ಅಧ್ಯಯನ ಮಾಡಬೇಕಾದದ್ದು ಅವಶ್ಯಕವಾಗಿದೆ ಎಂದು ಡಾಽಽ ಅರವಿಂದ ಯಾಳಗಿ ಅಭಿಪ್ರಾಯ ಪಟ್ಟರು. ಶೇಕ್ಸಪಿಯರ್‌ನ ಕಾವ್ಯ, ನಾಟಕ, ಹಾಡುಗಳನ್ನು ರಸಪ್ರಜ್ಞೆ, ಭಾವಪ್ರಜ್ಞೆ ಹಾಗೂ ಅರ್ಥಪ್ರಜ್ಞೆ ಎಂಬ ಚತುರ್ಮುಖವಾದ ಅಭ್ಯಾಸಮಾಡಬಹುದಾದ ದಾರಿಯನ್ನು ಕಂಡುಹಿಡಿಯಬೇಕಾಗಿದೆ. ಅಂದಾಗ ಮಾತ್ರ ಜಾಗತಿಕ ಉತ್ಕೃಷ್ಟ ಸಾಹಿತ್ಯ ಪರಂಪರೆಗೆ ಶೇಕ್ಸಪಿಯರ್‌ನು ಕೊಟ್ಟ ವಿಶ್ವಪ್ರಜ್ಞೆ ಗುರುತಿಸಲು ಸಾಧ್ಯವೆಂದು ಹೇಳಿದರು. 

ನಾಡಿನ ಹಿರಿಯ ರಂಗಕರ್ಮಿ ಡಾಽಽ ಶಶಿಧರ ನರೇಂದ್ರ ಕಾರ್ಯಕ್ರಮದ ಅಧ್ಯಕ್ಷಸ್ಥಾನ ವಹಿಸಿ ಮಾತನಾಡುತ್ತ ಭಾರತೀಯ ಸಾಹಿತ್ಯ ಹಾಗೂ ಕವಿಗಳಿಗೆ ವಿಶ್ವವ್ಯಾಪಕ ಮಹತ್ವ ದೊರೆಯುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ಸಂಸ್ಕೃತ ಸಾಹಿತ್ಯಕ್ಕೆ ವಿಶ್ವ ಸಾಹಿತ್ಯದಲ್ಲಿ ತನ್ನದೇ ಆದ ವಿಶಿಷ್ಠ ಸ್ಥಾನಮಾನ ಇದ್ದರೂ ವಿಶ್ವ ಕೊಡಬಹುದಾದ ಗೌರವವು ದೊರೆಯುತ್ತಿಲ್ಲ ಎಂದರು. 

ಅನ್ವೇಷಣಕೂಟದ ಅಧ್ಯಕ್ಷ ನರಸಿಂಹ ಪರಾಂಜಪೆ ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ತಾ.ಭ.ಚವ್ಹಾಣ ಎಲ್ಲರನ್ನೂ ವಂದಿಸಿದರು. ಗಣ್ಯರಾದ ಪರಮೇಶ್ವರ ಎಂ.ಎಸ್, ಪ್ರಹ್ಲಾದ ಯಾವಗಲ್ಲ, ರಂಗಕರ್ಮಿ ಡಾ.ಪ್ರಕಾಶ ಗರುಡ, ಶ್ರೀನಿವಾಸ ದ್ವಾರಪಾಲಕ, ಜಿ.ಆರ್‌.ಭಟ್, ಎನ್‌.ಫಾಲ್ಗುಣ, ಬಸವರಾಜ ಹರಿಹರ, ಎಚ್‌.ಎ.ಕೆ. ಆಚಾರ‌್ಯ, ಕೆ.ಸಿ.ಪುರಣಿಕಮಠ, ಆರ್‌.ಎಮ್‌.ದೊಡ್ಡಮನಿ, ಸೀಮಾ ಪರಾಂಜಪೆ ಮುಂತಾದವರು ಉಪಸ್ಥಿತರಿದ್ದರು.