ಕುಕನೂರ್

ಶಿಕ್ಷಕರ ದಿನಾಚರಣೆ 324 ಶಾಲೆಗಳಿಗೆ ರಜೆ: ಕ್ರಮಕ್ಕೆ ಒತ್ತಾಯ

ಶಿಕ್ಷಕರ ದಿನಾಚರಣೆ 324 ಶಾಲೆಗಳಿಗೆ ರಜೆ: ಕ್ರಮಕ್ಕೆ ಒತ್ತಾಯ

ಕುಕನೂರು 10: ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದ ನೆಪವಡ್ಡಿ ಯಲಬುರ್ಗಾ ಮತ್ತು ತಾಲೂಕಿನ 324 ಶಾಲೆಗಳಿಗೆ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಿದ ಪ್ರಸಂಗ ಯಲಬುರ್ಗಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಜರುಗಿದೆ. ಕುಕನೂರು ಮತ್ತು ಯಲಬುರ್ಗಾ ತಾಲೂಕಿನ ಸರ್ಕಾರಿ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳು ಸೆಪ್ಟೆಂಬರ್ 9ರ ಶನಿವಾರ ದಿವಸ ಶಾಲೆಯ ಬಾಗಿಲುಗಳು ತೆರೆಯದೆ ಅನೇಕ ಚರ್ಚೆಗೆ ಕಾರಣವಾಗಿರುತ್ತದೆ. ಶಾಲೆಗಳಿಗೆ ಏಕಾಏಕಿ ರಜೆ ಘೋಷಣೆ ಮಾಡುವ ಅಧಿಕಾರ ಆಯಾ ಶಾಲಾ ಮುಖ್ಯಸ್ಥರಿಗೆ ಸ್ಥಳೀಯ ಸಭೆ ಸಮಾರಂಭ ಹಾಗೂ ಉತ್ಸವಗಳ ಕಾರಣ ನೀಡಿ ಮಾಡಬಹುದಾಗಿದ್ದು ಆದರೆ ಇಲ್ಲಿ ಯಾವುದೇ ಉತ್ಸವಗಳಿಲ್ಲದೆ ಅವಳಿ ತಾಲೂಕಿನಾದ್ಯಂತ ರಜೆ ಘೋಷಣೆ ಮಾಡಿ ಯಲಬುರ್ಗಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಆದೇಶ ಹೊರಡಿಸಿರುವುದು ಎರಡು ತಾಲೂಕಿನಲ್ಲಿ ತೀವ್ರ ಚರ್ಚೆಯ ವಿಷಯವಾಗಿದೆ.          

ಕೊನೆಗೆ ಶಾಲೆ ಬಂದಾಗಿರುವುದಕ್ಕೆ ಸಂಬಂಧಪಟ್ಟ ಶಿಕ್ಷಕರನ್ನು ವಿಚಾರಿಸಿದಾಗ ಇಂದು ಯಲಬುರ್ಗಾ ಪಟ್ಟಣದ ಬುದ್ಧ ಬಸವ ಅಂಬೇಡ್ಕರ ಭವನದಲ್ಲಿ ತಾಲೂಕುಗಳು ಒಳಗೊಂಡಂತೆ ಶಿಕ್ಷಕರ ದಿನಾಚರಣೆ ಮಾಡಲಾಗುತ್ತಿದೆ ಎಂದು ತಿಳಿಸಿರುತ್ತಾರೆ. ಇದಕ್ಕೆ ಸಂಬಂಧಪಟ್ಟ ಆದೇಶ ಪ್ರತಿಯನ್ನು ಪಡೆದುಕೊಂಡು ಗಮನಿಸಿದಾಗ ಕ್ಷೇತ್ರ ಶಿಕ್ಷಣಾಧಿಕಾರಿ ಯಲಬುರ್ಗಾ ಇವರು ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಪ್ರಯುಕ್ತ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಿದ್ದು 9ನೇ ತಾರೀಖಿನ ಶನಿವಾರದಂದು ಜರುಗಬೇಕಾದ ತರಗತಿಗಳನ್ನು ಸೆಪ್ಟೆಂಬರ್ 16ರಂದು ನಡೆಸುವಂತೆ ಸೂಚನೆ ನೀಡಿ ಆದೇಶ ಹೊರಡಿಸಿರುತ್ತಾರೆ.          

ಕರ್ನಾಟಕ ಸರ್ಕಾರದ ಸಾರ್ವಜನಿಕ ಶಿಕ್ಷಣ ಇಲಾಖೆಯ ಸುತ್ತೋಲೆಯ ಪ್ರಕಾರ ಪ್ರತಿ ಶಾಲೆಗಳಿಗೂ ನಾಲ್ಕು ಸ್ಥಳೀಯ ರಜೆ ನೀಡಲು ಮುಖ್ಯೋಪಾಧ್ಯಾಯರಿಗೆ ಅಧಿಕಾರ ನೀಡಿದ್ದು ಅದು ಸ್ಥಳೀಯ ಪ್ರದೇಶ ಅಥವಾ ಗ್ರಾಮಗಳಿಗೆ ಮಾತ್ರ ಸೀಮಿತವಾಗಿರುತ್ತದೆ ಹಾಗೂ ತಾಲೂಕಿನಾದ್ಯಂತ ಅಥವಾ ಜಿಲ್ಲೆಯಾದ್ಯಂತ ರಜೆ ಘೋಷಣೆ ಮಾಡುವ ಅಧಿಕಾರವಿರುವುದು ಕೇವಲ ಆಯಾ ಜಿಲ್ಲೆಯ ದಂಡಾಧಿಕಾರಿಗಳಿಗೆ ಮಾತ್ರ ಯಾವುದಾದರೂ  ವಿಪತ್ತು ನಿರ್ವಹಣೆಯ ಸಂದರ್ಭದಲ್ಲಿ ಮಾತ್ರ ರಜೆ ಘೋಷಣೆ ಮಾಡಲು ಅವಕಾಶವಿರುತ್ತದೆ ಆದರೆ ಇಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಆದೇಶ ಹೊರಡಿಸಿರುವುದು ನೋಡಿದರೆ ಜಿಲ್ಲಾಧಿಕಾರಿಗಳಿಗೂ ಸಹ ಯಾವುದೇ ಬೆಲೆ ಇಲ್ಲದೆ ನನ್ನನ್ ಯಾರು ಪ್ರಶ್ನೆ ಮಾಡುವವರೇ ಇಲ್ಲ ಎಂಬ ಸರ್ವಾಧಿಕಾರಿ ಧೋರಣೆ ಕಂಡು ಬರುತ್ತಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ಸಾಕಷ್ಟು ರೀತಿ ರಿವಾಜಿಗಳಿದ್ದರೂ ಸಹ ಇಲ್ಲಿ ನಡೆದಿರುವುದೇ ಬೇರೆ, ಯಾವುದೇ ಮೇಲಾಧಿಕಾರಿಗಳಿಗೆ ಮಾಹಿತಿಯನ್ನು ಸಹ ನೀಡದೆ ತಮ್ಮ ಮನಸೋ ಇಚ್ಛೆ ರಜೆ ಘೋಷಣೆ ಮಾಡಿ ಸಪ್ಟೆಂಬರ್ 9 ರಂದು ನಡೆಯಬೇಕಿದ್ದ ತರಗತಿಗಳನ್ನು ಸೆಪ್ಟೆಂಬರ್ 16ರ ಶನಿವಾರ ಬೆಳಗ್ಗೆ ಒಂಬತ್ತು ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಕಾರ್ಯ ನಿರ್ವಹಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಆದೇಶ ನೀಡಿರುತ್ತಾರೆ. ಆದರೆ ಸಾರ್ವಜನಿಕರ ಅಭಿಪ್ರಾಯವೂ ಸಪ್ಟೆಂಬರ್ 9ರ ತರಗತಿಗಳನ್ನು ಸಪ್ಟಂಬರ್ 16ರಂದು ನಡೆಸಿದರೆ ಸೆಪ್ಟೆಂಬರ್ 16ರಂದು ನಡೆಯಬೇಕಾದ ತರಗತಿಗಳನ್ನು ಯಾವಾಗ ನಡೆಸುತ್ತಾರೆ....? ಅಥವಾ ಒಂದೇ ದಿನ ಎರಡು ದಿನಗಳ ತರಗತಿಯನ್ನು ಕೈಗೊಂಡು ವಿದ್ಯಾರ್ಥಿಗಳಿಗೆ ಭಾರಹೊರಿಸುತ್ತಾರೆಯೇ.....? ಎಂಬುದು ಸಾರ್ವಜನಿಕರ ಹಾಗೂ ಪಾಲಕರ ಯಕ್ಷಪ್ರಶ್ನೆಯಾಗಿದೆ.          

ಸರ್ಕಾರದ ನಿಯಮದ ಪ್ರಕಾರ ಅಕ್ಷರ ದಾಸೋಹದ ಕಾರ್ಯಕ್ರಮವು ಯಾವುದೇ ಕಾರಣಕ್ಕೂ ನಿಲ್ಲುವಂತಿಲ್ಲ ಆದರೆ ಸಪ್ಟಂಬರ್ 9ರ ಶನಿವಾರ ಕುಕನೂರು ಹಾಗೂ ಯಲಬುರ್ಗಾ ಎರಡು ತಾಲೂಕುಗಳು ಸೇರಿದಂತೆ ಯಾವೊಂದು ಸರ್ಕಾರಿ ಶಾಲೆಯಲ್ಲಿಯೂ ಸಹ ಬಿಸಿಯೂಟದ ಅಡುಗೆ ಕೋಣೆ, ಬಾಗಿಲು ತೆರೆಯದೆ ಇರುವುದು ಸರಕಾರದ ಆದೇಶವನ್ನು ಪಾಲಿಸಲು ಸಂಬಂಧಪಟ್ಟ ಇಲಾಖೆ ಅಸಡ್ಡೆ ತೋರಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.          

ಈ ವಿಷಯಕ್ಕೆ ಸಂಬಂಧಿಸಿದಂತೆ ಉಪನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ, ಕೊಪ್ಪಳ ಇವರಿಗೆ ದೂರವಾಣಿ ಮತಾಂತರ ವಿಚಾರಿಸಿದಾಗ ಯಲಬುರ್ಗಾ ಹಾಗೂ ಕುಕನೂರು ತಾಲೂಕುಗಳಲ್ಲಿ ಸಪ್ಟೆಂಬರ್ 9 ರಂದು ರಜೆ ಘೋಷಣೆ ಮಾಡಿರುವ ಕುರಿತು ಯಾವುದೇ ಮಾಹಿತಿ ನನಗೆ ಬಂದಿರುವುದಿಲ್ಲ ಆದರೂ ಸಹ ಇದು ಗಂಭೀರವಾದ ವಿಷಯವಾಗಿದ್ದು ವಿಷಯವನ್ನು ಗಂಭೀರವಾಗಿ ಪರಿಗಣಿಸಿ ವರದಿ ತರಿಸಿಕೊಂಡು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿರುತ್ತಾರೆ.                

ಸಾರ್ವಜನಿಕ ಶಿಕ್ಷಣ ಇಲಾಖೆ ಒಗ್ಗೂಡಿಕೊಂಡು ಡಾಕ್ಟರ್ ಸರ್ವಪಲ್ಲಿ ರಾಧಾಕೃಷ್ಣ ಅವರ ಸವಿನೆನಪಿಗಾಗಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಆಯೋಜಿಸಿರುವುದು ಸಂತಸದ ವಿಷಯವಾಗಿದ್ದರೂ ಸಹ ಈ ಕಾರ್ಯಕ್ರಮದ ಉದ್ದೇಶವನ್ನಾಗಿಸಿ ಎರಡು ತಾಲೂಕುಗಳ 324 ಶಾಲೆಗಳಿಗೆ ರಜೆ ಘೋಷಣೆ ಮಾಡಿರುವುದು ಸರ್ವಾಧಿಕಾರ ಧೋರಣೆಯನ್ನು ಎತ್ತಿ ತೋರುತ್ತಿದೆ. ತಮಗೆ ಇಚ್ಛೆ ಬಂದಾಗ ರಜೆ ನೀಡುವುದು ಹಾಗೂ ತಮ್ಮೆಷ್ಟದಂತೆ ಹೆಚ್ಚುವರಿ ತರಗತಿಗಳನ್ನು ವಿದ್ಯಾರ್ಥಿಗಳ ಮೇಲೆ ಹೊರಿಸುವುದು ಎಷ್ಟರಮಟ್ಟಿಗೆ ಸರಿ ಎಂಬುದು ಪಾಲಕರ ಪ್ರಶ್ನೆಯಾಗಿದ್ದು ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಉತ್ತರಿಸಲು ಮುಂದೆ ಬರುತ್ತಾರೆ ಎಂಬುದು ಕಾದು ನೋಡಬೇಕಾಗಿದೆ. 


ಸುದ್ದಿ ಓದಿ