ಕ್ರೀಡೆ ವಿದ್ಯಾರ್ಥಿ ಜೀವನದ ಭಾಗ; ಶಿವಕುಮಾರ ಮಲಘಾಣ ಅಭಿಮತ
ಪೂರ್ವ ವಲಯ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ
ಮುಧೋಳ 25: ಕ್ರೀಡೆ ಎಂಬುದು ವಿದ್ಯಾರ್ಥಿ ಜೀವನದ ಒಂದು ಭಾಗ. ಕ್ರೀಡೆಯಲ್ಲಿ ಹೆಚ್ಚು ತೊಡಗಿಸಿಕೊಂಡ ವರಿಂದ ಸರ್ವಾಂಗೀಣ ಬೆಳವಣಿಗೆ ಸಾಧ್ಯವೆಂದು ಮಾಜಿ ಜಿ.ಪಂ ಅಧ್ಯಕ್ಷ. ಶಿವಕುಮಾರ ಮಲಘಾಣ ಅಭಿಪ್ರಾಯಪಟ್ಟರು.
ನಗರದ ಕವಿಚಕ್ರವರ್ತಿ ರನ್ನ ಕ್ರೀಡಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಶ್ರೀ ಸಂಗಮನಾಥ ಕನ್ನಡ ಮಾಧ್ಯಮ ಶಾಲೆ, ಸ್ಯಾಮವೆಲ್ ಆಂಗ್ಲ ಮಾಧ್ಯಮ ಶಾಲೆ ಆಶ್ರಯದಲ್ಲಿ ಮುಧೋಳ ಪೂರ್ವ ವಲಯ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಒಂದೊಂದು ಪ್ರತಿಭೆ ಅಡಗಿರುತ್ತದೆ. ಇದನ್ನು ಹೆಕ್ಕಿ ತೆಗೆಯುವ ಜವಾಬ್ದಾರಿ ಶಿಕ್ಷಕರ ಮೇಲಿದ್ದರೆ, ಸಿಕ್ಕ ಅವಕಾಶದಲ್ಲಿ ಪ್ರತಿಭೆಯನ್ನು ಪ್ರತಿಬಿಂಬಿಸಲು ವಿದ್ಯಾರ್ಥಿಗಳು ತಯಾರಿರಬೇಕೆಂದು ಸೂಚಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಂ.ಮುಲ್ಲಾ ಮಾತನಾಡಿ, ಇತ್ತೀಚೆಗೆ ಭಾರತ ಕ್ರೀಡೆಯಲ್ಲಿ ಉತ್ತಮ ಸಾಧನೆಮಾಡುತ್ತಿದೆ. ದೇಶಿ ಹಾಗೂ ಅಪ್ಪಟ ಹಳ್ಳಿ ಕ್ರೀಡೆಯಾದ ಕಬಡ್ಡಿ ಆಟವನ್ನು ಇಂದು ವಿಶ್ವದೆಲ್ಲೆಡೆ ಆಯೋಜಿಸುತ್ತಿರುವುದು ಹೆಮ್ಮೆಯ ವಿಷಯ. ಕ್ರಿಕೆಟ್ ಜೊತೆಗೆ ಇತರ ಆಟಗಳಿಗೂ ತನ್ನದೆಯಾದ ಪ್ರತೀತಿ ಇದ್ದು ದೇಶೀಯ ಕ್ರೀಡೆಗಳಿಗೆ ಆದ್ಯತೆ ನೀಡಿ ಸೋಲು ಗೆಲುವಿಗಿಂತ ಭಾಗಿಯಾಗುವುದು ಮುಖ್ಯ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕ್ರೀಡಾಜ್ಯೋತಿ ಹಾಗೂ ಕ್ರೀಡಾ ಧ್ವಜಾರೋಹಣ ವನ್ನು ಮಾಜಿ ಜಿ.ಪಂ ಅಧ್ಯಕ್ಷ ಶಿವಕುಮಾರ ಮಲಘಾಣ ಸ್ಯಾಮವೆಲ್ ಸ್ಕೂಲ್ ಅಧ್ಯಕ್ಷ ಮಾರ್ಗರೇಟ ಗೌಡರ ನೆರವೇರಿಸಿ ಉದ್ಗಾಟಿಸಿದರು. ಕಾ.ನಿ.ಪ ಸಂಘದ ತಾಲ್ಲೂಕಾಧ್ಯಕ್ಷ ಬಿ.ರತ್ನಾಕರಶೆಟ್ಟಿ, ತಾಲ್ಲೂಕು ದೈಹಿಕ ಶಿಕ್ಷಣ ಪರೀವೀಕ್ಷಕ ಅಧಿಕಾರಿ ಶ್ರೀಶೈಲ್ ಕುರಣಿ ಸಿ ಆರ್ ಪಿ ಸತೀಶ ಕವಳಿ,ಬಿ ಅರ್ ಪಿ ಐ.ಸಿ.ಮಠಪತಿ, ವಲಯ ಮುಖ್ಯಸ್ಥ ಪಾಂಡುರಂಗ ತುಳಸಿಗೇರಿ, ಮುಖ್ಯ ಶಿಕ್ಷಕ ವೆಂಕಟೇಶ ಗುಡೆಪ್ಪನವರ, ಆಡಳಿತಾಧಿಕಾರಿ ಮಲ್ಲು ಕಳ್ಳೆನವರ,ಪ್ರಾಚಾರ್ಯ ಸುರೇಶ ಭಜಂತ್ರಿ ಹಾಗೂ ಇತರಿದ್ದರು.ಮುಖ್ಯ ಶಿಕ್ಷಕ ವೆಂಕಟೇಶ ಗುಡೆಪ್ಪನವರ ಕ್ರೀಡಾ ಕೂಟದ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕು.ಸೌಮ್ಯ ಕಳ್ಳೆನವರ, ಕು.ಸುಪ್ರಿತಾ ನಿಂಬಾಳಕರ ಸ್ವಾಗತಿಸಿ, ಕು.ವೀಣಾ ಪರೀಟ, ಕು.ಭವಾನೇಶ್ವರಿ ಲೋಂಡೆ ನಿರೂಪಿಸಿ, ಕು.ಸಂಜನಾ ಕುಮಕಾಲೆ ಹಾಗೂ ಕು.ಜ್ಯೋತಿ ನರೋಜಿ ವಂದಿಸಿದರು. ಕ್ರೀಡಾಕೂಟದಲ್ಲಿ ಇಪ್ಪತ್ತು ಶಾಲೆಯ ಸುಮಾರು ಏಳು ನೂರು ವಿದ್ಯಾರ್ಥಿಗಳು ಭಾಗಿಯಾಗಿದ್ದರು.