ವಿಶೇಷ ಉಪನ್ಯಾಸ ಕಾರ್ಯಕ್ರಮ
ಮುಧೋಳ 09: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಐ.ಕ್ಯೂ.ಎ.ಸಿ ಹಾಗೂ ಮಹಿಳಾ ಸಬಲೀಕರಣ ಘಟಕದ ವತಿಯಿಂದ ವಿದ್ಯಾರ್ಥಿನಿಯರಿಗಾಗಿ “ಸ್ತ್ರೀಯರ ಋತುಚಕ್ರದ ಸಮಸ್ಯೆಗಳು ಹಾಗೂ ಪರಿಹಾರಗಳು” ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಕಾಲೇಜಿನ ಪ್ರಾಂಶುಪಾಲರಾದ ಎಸ್. ಎಂ. ಹಾದಿಮನಿರವರು ಮಾತನಾಡಿ, ಹೆಣ್ಣುಮಕ್ಕಳ ಸಮಸ್ಯೆಯನ್ನು ಪುರುಷರು ಅಂದರೆ, ತಂದೆ, ಸಹೋದರರು ಹಾಗೂ ಗಂಡ ಕೂಡ ಅರ್ಥಮಾಡಿಕೊಳ್ಳಬೇಕು ಎಂದು ತಿಳಿಸಿದರು. ಪ್ರಾಸ್ತಾವಿಕ ನುಡಿಯನ್ನು ಆಡಿದ ಮಹಿಳಾ ಸಬಲೀಕರಣ ಘಟಕದ ಸಂಯೋಜಕರು ಹಾಗೂ ಕನ್ನಡ ಸಹಾಯಕ ಪ್ರಾಧ್ಯಾಪಕರಾದ ಕು. ಉಷಾರಾಣಿರವರು ಹೆಣ್ಣು ಪ್ರಕೃತಿಯ ಹಾಗೆ, ಪ್ರಕೃತಿಯಲ್ಲಿ ಹೇಗೆ ಋತುಮಾನದ ಏರುಪೇರು ಆಗುತ್ತದೆಯೋ, ಹಾಗೆಯೇ ಹೆಣ್ಣಿನಲ್ಲಿ ಋತುಚಕ್ರದ ಏರುಪೇರಾದರೆ ಅದು ಸಮಸ್ಯೆ, ಅದಕ್ಕೆ ಪರಿಹಾರ ಕಂಡುಕೊಳ್ಳಬೇಕು ಎಂದರು.“ಸ್ತ್ರೀಯರ ಋತುಚಕ್ರದ ಸಮಸ್ಯೆಗಳು ಹಾಗೂ ಪರಿಹಾರಗಳು” ಈ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡದ ವೀತರಾಗ ಆಯುರ್ವೇದಾಲಯದ ವೈದ್ಯಾಧಿಕಾರಿಯಾದ ಡಾ. ಜ್ಯೋತ್ಸ್ನಾ ಸಮಾಜ್‌ರವರು ಋತುಚಕ್ರ ಪ್ರಾರಂಭವಾಗುವ ಪ್ರಕ್ರಿಯೆ, ಋತುಚಕ್ರದ ಸಮಯದಲ್ಲಿ ವಹಿಸಬೇಕಾಗಿರುವ ಮುಂಜಾಗ್ರತಾ ಕ್ರಮಗಳು, ಋತುಚಕ್ರದ ಸಮಸ್ಯೆಗಳನ್ನು ವಿವರಿಸಿ, ಅದಕ್ಕೆ ಪರಿಹಾರವನ್ನು ಸೂಚಿಸಿದರು ಹಾಗೂ ವಿದ್ಯಾರ್ಥಿಗಳೊಂದಿಗೆ ಸಮಾಲೋಚಿಸಿ ಅವರ ಋತುಚಕ್ರದ ಸಮಸ್ಯೆಗಳಿಗೆ ಮನೆ ಮದ್ದನ್ನು ತಿಳಿಸಿದರು.
ಕನ್ನಡ ವಿಭಾಗದ ಮುಖ್ಯಸ್ಥರು ಹಾಗೂ ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿಗಳಾದ ಡಾ. ಸಿ.ಎಂ. ರೇಖಾಮಣಿರವರು ಸ್ವಾಗತಿಸಿದರು. ಪ್ರಥಮ ಬಿ.ಎ. ವಿದ್ಯಾರ್ಥಿನಿ ಸವಿತಾ ಪೂಜಾರಿ ಪ್ರಾರ್ಥಿಸಿದರು, ಪ್ರಥಮ ಬಿ.ಕಾಂ ವಿದ್ಯಾರ್ಥಿನಿ ನಿಖಿತಾ ಪವಾರ್ ವಂದಿಸಿದರು ಹಾಗೂ ದ್ವಿತೀಯ ಬಿ.ಎ. ವಿದ್ಯಾರ್ಥಿನಿ ಸಂಜನಾ ಕಾಂಬಳೆ ನಿರೂಪಿಸಿದರು. ಐ.ಕ್ಯೂ.ಎ.ಸಿ ಸಂಚಾಲಕರಾದ ಡಾ. ಎಸ್. ಪಿ. ಕೊಕಟನೂರು ಹಾಗೂ ಬಿ.ಎ., ಬಿ.ಕಾಂ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.