ಧಾರವಾಡ - ಹುಬ್ಬಳ್ಳಿ

ಗುರು ಪೂರ್ಣಿಮೆ ಅಂಗವಾಗಿ ಪತಂಜಲಿ ಯೋಗ ಪೀಠದಲ್ಲಿ ವಿಶೇಷ ಅಗ್ನಿಹೋತ್ರ

ಗುರು ಪೂರ್ಣಿಮೆ ಅಂಗವಾಗಿ ಪತಂಜಲಿ ಯೋಗ ಪೀಠದಲ್ಲಿ ವಿಶೇಷ ಅಗ್ನಿಹೋತ್ರ

ಲೋಕದರ್ಶನ ವರದಿ 

ಹುಬ್ಬಳ್ಳಿ, ಜು. 29: ಕೇಶ್ವಾಪುರದ ಪತಂಜಲಿ ರಾಜ್ಯ ಕಾರ್ಯಾಲಯದಲ್ಲಿ ಪತಂಜಲಿ ಯೋಗ ಪೀಠ, ಕರ್ನಾಟಕದ ವತಿಯಿಂದ ಅಂತರರಾಷ್ಟ್ರೀಯ ಯೋಗಗುರು ಹಾಗೂ ಪತಂಜಲಿ ಯೋಗ ಪೀಠದ ಕರ್ನಾಟಕದ ವರಿಷ್ಠ ರಾಜ್ಯ ಪ್ರಭಾರಿ ಶ್ರೀ ಭವರಲಾಲ್ ಆರ್ಯ ಜೀ ಅವರ ನೇತೃತ್ವದಲ್ಲಿ ಗುರು ಪೂರ್ಣಿಮಾ ವಂದನಾ ಮಹೋತ್ಸವ ಅಂಗವಾಗಿ ವಿಶೇಷ ಅಗ್ನಿಹೋತ್ರ ಅನುಷ್ಠಾನ ನೆರವೇರಿಸಲಾಯಿತು.  

ಅಗ್ನಿಹೋತ್ರ ಅನುಷ್ಠಾನದ ಬಳಿಕ ಮಾತನಾಡಿದ ಭವರಲಾಲ್ ಆರ್ಯ ಜೀ, ಮಾನವ ಜೀವನಕ್ಕೆ ಸಾರ್ಥಕತೆ ಒಬ್ಬ ಸದ್ಗುರುವಿನ ಮಾರ್ಗದರ್ಶನದಿಂದಲೇ ಸಾಧ್ಯವಾಗುತ್ತದೆ ಎಂದು ಹೇಳಿದರು. ತಾಯಿ-ತಂದೆಯೇ ಮೊದಲ ಗುರುಗಳಾಗಿದ್ದು, ಬಳಿಕ ಜೀವನದಲ್ಲಿ ಸಿಗುವ ಗುರುಗಳು ವ್ಯಕ್ತಿಯ ಬದುಕಿಗೆ ದಿಕ್ಕು ತೋರಿಸುತ್ತಾರೆ.

ಗುರುಗಳಿಗೆ ಯಾವುದೇ ಬೇಧಭಾವವಿಲ್ಲ. ಆದ್ದರಿಂದ ಗುರು ಪೂರ್ಣಿಮೆಯಂದು ಗುರುಗಳನ್ನು ಸ್ಮರಿಸಿ, ದುರ್ಗುಣಗಳನ್ನು ತ್ಯಜಿಸಿ ಸದ್ಗುಣಗಳನ್ನು ಬೆಳೆಸಿಕೊಳ್ಳುವ ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು.  

ಇಂದಿನ ಯುವಪೀಳಿಗೆ ಮತ್ತು ವಿದ್ಯಾರ್ಥಿಗಳು ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾಗಿ ಗುರುಗಳ ಮೇಲಿನ ಗೌರವವನ್ನು ಕಳೆದುಕೊಳ್ಳುತ್ತಿರುವುದು ಹಾಗೂ ಗುರು ಪೂರ್ಣಿಮೆಯಂತಹ ಭಾರತೀಯ ಸನಾತನ ಆಚರಣೆಗಳ ಬಗ್ಗೆ ವಿಶ್ವಾಸ ಕಡಿಮೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಅವರು ಅಭಿಪ್ರಾಯಪಟ್ಟರು.  

ಹಿರಿಯರು ಹಾಗೂ ಪೋಷಕರು ಗುರು ಪೂರ್ಣಿಮೆಯಂತಹ ಸಾಂಸ್ಕೃತಿಕ ಆಚರಣೆಗಳನ್ನು ಪಾಲಿಸಿ, ಗುರುಗಳು ಮತ್ತು ಹಿರಿಯರಿಗೆ ಗೌರವ ನೀಡುವ ಮೂಲಕ ಮುಂದಿನ ಪೀಳಿಗೆಗೆ ಆದರ್ಶವಾಗಬೇಕು. ಇದರಿಂದ ಭಾರತೀಯ ಸನಾತನ ಸಂಸ್ಕೃತಿ ಮತ್ತು ಪರಂಪರೆ ನಿರಂತರವಾಗಿ ಮುಂದುವರಿಯಲು ಪ್ರೇರಣೆ ದೊರೆಯುತ್ತದೆ ಎಂದು ಅವರು ಹೇಳಿದರು.  

ಕಾರ್ಯಕ್ರಮದಲ್ಲಿ ಕಿರಣ ಗುರೂಜಿ, ಬಾಬು ಲಾಲ್, ಮನೋಜ್ ಸಾಹು, ಮಂಜುಳಾ, ಸಂಗೀತಾ, ದಿವ್ಯಾ, ಗೀತಾ, ಸವಿತಾ, ಭಾರತಿ, ಬಸವರಾಜ, ವಿರೇಶ್, ಅಕ್ಷಯ, ರೂಪಾ ಸೇರಿದಂತೆ ಹಲವರು ಉಪಸ್ಥಿತರಿದ್ದರು. 


ಸುದ್ದಿ ಓದಿ