ಮುದ್ದೆಬಿಹಾಲ್

ಬೆಳ್ಳಿ ಮೂರ್ತಿ ಕಳವು ಪ್ರಕರಣ: ಇಬ್ಬರು ಶಂಕಿತರ ಬಂಧನ

ಬೆಳ್ಳಿ ಮೂರ್ತಿ ಕಳವು ಪ್ರಕರಣ: ಇಬ್ಬರು ಶಂಕಿತರ ಬಂಧನ

ಮುದ್ದೇಬಿಹಾಳ, ಜು.29: ತಾಲೂಕಿನ ಬಸರಕೋಡ ಗ್ರಾಮದ ಐತಿಹಾಸಿಕ ಶ್ರೀ ಪವಾಡ ಬಸವೇಶ್ವರ ದೇವಸ್ಥಾನದಿಂದ ಕಳವಾಗಿದ್ದ ಬೆಳ್ಳಿ ಮೂರ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಶಂಕಿತರನ್ನು ಬಂಧಿಸಿದ್ದಾರೆ.  

ಜುಲೈ 6ರಂದು ದೇವಸ್ಥಾನದ ಗರ್ಭಗುಡಿಯಲ್ಲಿದ್ದ ಸುಮಾರು 32 ಕೆಜಿ ತೂಕದ ಬೆಳ್ಳಿ ಮೂರ್ತಿ, ಅಂದಾಜು ?1.20 ಕೋಟಿ ಮೌಲ್ಯದ ಮೂರ್ತಿಯನ್ನು ಕಳವು ಮಾಡಲಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಜಿಲ್ಲಾ ಪೊಲೀಸರು ವಿಶೇಷ ತನಿಖಾ ತಂಡಗಳನ್ನು ರಚಿಸಿ ಕಾರ್ಯಾಚರಣೆ ನಡೆಸಿದ್ದರು.  

ತನಿಖೆಯ ವೇಳೆ ಗುಜರಾತ್ ಮೂಲದ ಇಬ್ಬರು ಶಂಕಿತರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಬಂಧಿತರಲ್ಲಿ ಒಬ್ಬನ ವಯಸ್ಸು ಸುಮಾರು 40 ವರ್ಷ, ಮತ್ತೊಬ್ಬನ ವಯಸ್ಸು 50 ವರ್ಷ ಎಂದು ತಿಳಿದುಬಂದಿದೆ. ಇಬ್ಬರೂ ಗುಜರಾತ್ನಲ್ಲಿ ಚಿನ್ನಾಭರಣ ವ್ಯಾಪಾರ ನಡೆಸುತ್ತಿರುವವರು ಎಂಬ ಮಾಹಿತಿ ಲಭ್ಯವಾಗಿದೆ.  

ಬಂಧಿತ ಆರೋಪಿಗಳನ್ನು ಮುದ್ದೇಬಿಹಾಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪ್ರಕರಣದ ಕುರಿತು ಹೆಚ್ಚಿನ ವಿಚಾರಣೆ ನಡೆಯುತ್ತಿದೆ. ಕಳವು ಪ್ರಕರಣದಲ್ಲಿ ಇನ್ನೂ ಕೆಲವರ ಪಾತ್ರ ಇರುವ ಶಂಕೆ ವ್ಯಕ್ತವಾಗಿದ್ದು, ಅವರನ್ನು ಬಂಧಿಸಲು ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ.  

ಲಕ್ಷಾಂತರ ಭಕ್ತರ ಆರಾಧ್ಯ ದೈವವಾಗಿರುವ ಶ್ರೀ ಪವಾಡ ಬಸವೇಶ್ವರ ದೇವಸ್ಥಾನದಲ್ಲಿ ನಡೆದ ಈ ಕಳವು ಪ್ರಕರಣ ಭಕ್ತರಲ್ಲಿ ಆತಂಕ ಉಂಟುಮಾಡಿದ್ದು, ಪ್ರಕರಣವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ವಿಶೇಷ ನಿಗಾವಹಿಸಿ ತನಿಖೆ ನಡೆಸುತ್ತಿದ್ದಾರೆ. 


ಸುದ್ದಿ ಓದಿ